ADVERTISEMENT

ರಂಗಭೂಮಿ ಉಳಿಸಿ ಬೆಳೆಸಬೇಕಿದೆ:ಪ್ರಿಯದರ್ಶಿನಿ

ಆತ್ಮೀಯ ರಂಗ ಪ್ರಯೋಗಾಲಯ ಟ್ಟಸ್ಟ್ ವತಿಯಿಂದ ನಡೆದ ವಿಶ್ವ ರಂಗಭೂಮಿ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 6:28 IST
Last Updated 28 ಮಾರ್ಚ್ 2023, 6:28 IST
ಆತ್ಮೀಯ ರಂಗ ಪ್ರಯೋಗಾಲಯ ಟ್ಟಸ್ಟ್ ವತಿಯಿಂದ ಚಾಮರಾಜನಗರದಲ್ಲಿ ಸೋಮವಾರ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಮೀಣ ರಂಗಭೂಮಿಯ ಹಾರ‍್ಮೋನಿಯಂ ಮಾಸ್ಟರ್ ಗಳಾದ ಜೆ.ಜಾಯ್‌ಫುಲ್ ಜಯಶೇಖರ್, ಶಿವಣ್ಣ ಮಂಗಲ, ನಾಗಣ್ಣ ಅಗ್ರಹಾರ, ರಾಜಶೇಖರ್, ಬಾಗಳಿ, ಮಹದೇವಪ್ಪ ಕೊಡಗಾಪುರ, ರಾಜೇಶ್ ಹಂಪಾಪುರ ಅವರನ್ನು ಗಣ್ಯರು ಸನ್ಮಾನಿಸಿದರು
ಆತ್ಮೀಯ ರಂಗ ಪ್ರಯೋಗಾಲಯ ಟ್ಟಸ್ಟ್ ವತಿಯಿಂದ ಚಾಮರಾಜನಗರದಲ್ಲಿ ಸೋಮವಾರ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಮೀಣ ರಂಗಭೂಮಿಯ ಹಾರ‍್ಮೋನಿಯಂ ಮಾಸ್ಟರ್ ಗಳಾದ ಜೆ.ಜಾಯ್‌ಫುಲ್ ಜಯಶೇಖರ್, ಶಿವಣ್ಣ ಮಂಗಲ, ನಾಗಣ್ಣ ಅಗ್ರಹಾರ, ರಾಜಶೇಖರ್, ಬಾಗಳಿ, ಮಹದೇವಪ್ಪ ಕೊಡಗಾಪುರ, ರಾಜೇಶ್ ಹಂಪಾಪುರ ಅವರನ್ನು ಗಣ್ಯರು ಸನ್ಮಾನಿಸಿದರು   

ಚಾಮರಾಜನಗರ: ‘ರಂಗಭೂಮಿಗೆ, ಕಲಾವಿದರಿಗೆ ಪ್ರೋತ್ಸಾಹ ಕೊಡುವಂತಹ ಕೆಲಸ ಆಗಬೇಕಾಗಿದೆ’ ಎಂದು ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಸೋಮವಾರ ಅಭಿಪ್ರಾಯಪಟ್ಟರು.

ನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಆತ್ಮೀಯ ರಂಗ ಪ್ರಯೋಗಾಲಯ ಟ್ಟಸ್ಟ್ ವತಿಯಿಂದ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಂಗಭೂಮಿ ಎನ್ನುವುದು ಕಲಾವಿದರಿಗೆ ಪರಿಶ್ರಮದ ಜಾಗ. ಇಲ್ಲಿ ಕಲಾವಿದ ತನ್ನ ಸಂಪೂರ್ಣತೆಯನ್ನು ಕೊಡಬೇಕಾದರೆ ಭಾವನೆ, ಯೋಜನೆ, ಕಂಠ ಅವಶ್ಯಕ. ಕಾಯಕ ನಿಷ್ಠೆ ಇದ್ದಾಗ ಮಾತ್ರ ಒಳ್ಳೆ ನಟನಾಗಲು ಸಾಧ್ಯ’ ಎಂದು ತಿಳಿಸಿದರು.

ADVERTISEMENT

‘ರಂಗಭೂಮಿ ನಟರ ಬದುಕು ಕಷ್ಟದಲ್ಲಿರುತ್ತದೆ. ಇತ್ತೀಚೆಗೆ ಮಠ ಮಾನ್ಯಗಳು ಕೂಡ ರಂಗಭೂಮಿಯ ಬಗ್ಗೆ ಒಲವು ತೋರಿ ಆಸಕ್ತಿ ಮೂಡಿಸುತ್ತಿವೆ. ಸಂಗೀತ ಸೇರಿದಂತೆ ಹಲವಾರು ಕಲಾ ಪ್ರಕಾರಗಳು ಇರುವ ಜಾಗ ಎಂದರೆ ಅದು ರಂಗಭೂಮಿ. ಆದ್ದರಿಂದ ರಂಗಭೂಮಿಯನ್ನು ಉಳಿಸಿ ಬೆಳೆಸುವ ಪ್ರಯತ್ನಗಳು ಆಗಬೇಕು’ ಎಂದು ತಿಳಿಸಿದರು.

ಬಿ.ವಿ.ಕಾರಾಂತ ಮತ್ತು ಶ್ರೀನಿವಾಸ ಭಟ್(ಚೀನಿ) ಬಗ್ಗೆ ಮಾತನಾಡಿದ ರಂಗಕರ್ಮಿ ಗಣೇಶ ಅಮೀನಗಡ, ‘ ಬಿ.ವಿ.ಕಾರಾಂತರು ಜನಗಳಿಗೆ ರಂಗ ಸಂಗೀತ ತಲುಪಿಸುವ ಉದ್ದೇಶದಿಂದ ಅನೇಕ ರಂಗ ಪ್ರಯೋಗಗಳನ್ನು ಮಾಡಿದರು. 15 ಸಾವಿರದಷ್ಟು ರಂಗ ಪರಿಕರಗಳನ್ನು ಸಂಗ್ರಹಿಸಿದ್ದರು. ಗುಬ್ಬಿ ಕಂಪನಿಯಿಂದ ತಮ್ಮ ಪಯಣವನ್ನು ಆರಂಭಿಸಿದ ಅವರು ಮೈಸೂರಿನ ರಂಗಾಯಣದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು’ ಎಂದರು.

‘ಮೈಸೂರಿನಲ್ಲಿ ಯವುದೇ ನಾಟಕ ಆದರೂ ಶ್ರೀನಿವಾಸ ಭಟ್(ಚೀನಿ) ಅವರ ಸ್ಪರ್ಶ ಇರುತ್ತಿತ್ತು. ನಾಟಕದಲ್ಲಿ ಆದಷ್ಟು ದೇಸಿತನವನ್ನು ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.

ಸಾಹಿತಿ ಸೋಮಶೇಖರ್ ಬಿಸಲವಾಡಿ ಅವರು ಪ್ರೊ.ಮಲೆಯೂರು ಗುರುಸ್ವಾಮಿ ಅವರ ಬದುಕು ಮತ್ತು ಕೃತಿಗಳ ಕುರಿತು ಮಾತನಾಡಿದರು.

ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್‌ನ ಎಸ್.ಕೆ.ಕಿರಣ್ ಗಿರ್ಗಿ ಆಶಯ ನುಡಿಗಳನ್ನಾಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಗ್ರಾಮೀಣ ರಂಗಭೂಮಿಯ ಹಾರ‍್ಮೋನಿಯಂ ಮಾಸ್ಟರ್‌ಗಳಾದ ಜೆ.ಜಾಯ್‌ಫುಲ್ ಜಯಶೇಖರ್, ಶಿವಣ್ಣ ಮಂಗಲ, ನಾಗಣ್ಣ ಅಗ್ರಹಾರ, ರಾಜಶೇಖರ್, ಬಾಗಳಿ, ಮಹದೇವಪ್ಪ ಕೊಡಗಾಪುರ, ರಾಜೇಶ್ ಹಂಪಾಪುರ ಅವರನ್ನು ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ: ಉದ್ಘಾಟನಾ ಸಮಾರಂಭದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಬಿ.ವಿ.ಕಾರಂತ ಮತ್ತು ಶ್ರೀನಿವಾಸ್‌ ಭಟ್‌ ನೆನಪಿನಲ್ಲಿ ರಂಗ ಸಂಗೀತ ಶಿಬಿರದ ವಿದ್ಯಾರ್ಥಿಗಳು ಮತ್ತು ಜಿಲ್ಲಾ ಗ್ರಾಮೀಣ ರಂಗಭೂಮಿ ನಾಟಕ ನಿರ್ದೇಶಕರಿಂದ ರಂಗ ಗೀತೆಗಳ ಗಾಯನ ನಡೆಸಿಕೊಟ್ಟರು. ಆತ್ಮೀಯ ಸಂಗೀತ ಶಾಲೆಯ ಕೀಬೋರ್ಡ್‌ ವಿದ್ಯಾರ್ಥಿಗಳು ಮ್ಯೂಸಿಕಲ್‌ ಕೀಬೋರ್ಡ್‌ ವಾದನ ಮಾಡಿದರು.

ಪ್ರೊ ಮಲೆಯೂರು ಗುರುಸ್ವಾಮಿ ಅವರ ಸ್ಮರಣೆಯೊಂದಿಗೆ ಅವರ ಕಥೆ ‘ಆಚಾರ’ವನ್ನು ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್‌ ಕಲಾವಿದರು ರಂಗದಲ್ಲಿ ಪ್ರಸ್ತುತ ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.