ADVERTISEMENT

ಚಾಮರಾಜನಗರ: ಸರ್ಕಾರಿ ಶಾಲೆಯಲ್ಲಿ ಡಿಜಿಟಲ್ ಶಿಕ್ಷಣ

ಬನ್ನಿಸಾರಿಗೆ ಶಾಲೆಯಲ್ಲಿ ವಿಭಿನ್ನ ಪ್ರಯೋಗ, ಬಾಹ್ಯಾಕಾಶ ವೀಕ್ಷಣೆ ಮೂಲಕ ವಿಜ್ಞಾನ ಪಾಠ

ಎನ್.ಮಂಜುನಾಥಸ್ವಾಮಿ
Published 21 ಜೂನ್ 2025, 5:55 IST
Last Updated 21 ಜೂನ್ 2025, 5:55 IST
ಯಳಂದೂರು ತಾಲ್ಲೂಕಿನ ಬನ್ನಿಸಾರಿಗೆ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಶಾಲೆಯ ವಿದ್ಯಾರ್ಥಿಗಳು ಟೆಲಿಸ್ಕೋಪ್ ಮೂಲಕ ವೀಕ್ಷಣೆ ಮಾಡುತ್ತಿರುವ ದೃಶ್ಯ
ಯಳಂದೂರು ತಾಲ್ಲೂಕಿನ ಬನ್ನಿಸಾರಿಗೆ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಶಾಲೆಯ ವಿದ್ಯಾರ್ಥಿಗಳು ಟೆಲಿಸ್ಕೋಪ್ ಮೂಲಕ ವೀಕ್ಷಣೆ ಮಾಡುತ್ತಿರುವ ದೃಶ್ಯ   

ಯಳಂದೂರು: ಆಧುನಿಕ ಸಂವಹನ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೊಸ ತಲೆಮಾರಿನ ಮಕ್ಕಳಿಗೆ ಡಿಜಿಟಲ್ ಕಲಿಕೆ ಹೇಳಿಕೊಡುವುದರ ಜೊತೆಗೆ ಬೌದ್ಧಿಕತೆ ಹೆಚ್ಚಿಸುವ ವಿಭಿನ್ನ ಪ್ರಯೋಗ ತಾಲ್ಲೂಕಿನ ಬನ್ನಿಸಾರಿಗೆ ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿದೆ.

ತಂತ್ರಜ್ಞಾನ ಆಧಾರಿತ ಕಲಿಕೆಯು ಮಕ್ಕಳಿಗೆ ಹೆಚ್ಚು ಖುಷಿ ನೀಡುವುದರ ಜೊತೆಗೆ ಅವರನ್ನು ಪಾಠ ಪ್ರವಚನಗಳತ್ತ ಸೆಳೆಯಲು, ವಿನೋದಮಯವಾಗಿ ಕಲಿಯಲು ಸಹಕಾರಿಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಕಲಿಕೆ ಮುನ್ನಲೆಗೆ ಬಂದಿದ್ದು, ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ.

ಹೊಸತನಕ್ಕೆ ತೆರೆದುಕೊಂಡಿರುವ ತಾಲ್ಲೂಕಿನ ಬನ್ನಿಸಾರಿಗೆ ಉನ್ನತೀಕರಿಸಿದ ಸರ್ಕಾರಿ ಶಾಲೆಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. ಶಾಲೆಯ ಅಂಗಳ ಪ್ರವೇಶಿಸಿದರೆ ಹಸಿರು ಪರಿಸರ ಕಣ್ಮನ ಸೆಳೆಯುತ್ತದೆ. ಕೊಠಡಿಯ ಗೋಡೆಗಳು  ವಿಜ್ಞಾನದ ಭರಪೂರ ಮಾಹಿತಿಯ ಜೊತೆಗೆ ಕಲೆ, ಚಿತ್ತಾರಗಳಿಂದ ಕಣ್ಮನ ಸೆಳೆಯುತ್ತದೆ. ವರ್ಲಿ ಕಲೆ ಗೋಡೆಯನ್ನು ಅಲಂಕರಿಸಿ ಚೆಂದಗಾಣಿಸಿದೆ. ತರಗತಿ ಕೋಣೆಗಳಲ್ಲಿ ಡಿಜಿಟಲ್ ಬೋರ್ಡ್, ಟೇಬಲ್‌ಗಳ ಮೇಲೆ ಲ್ಯಾಪ್‌ಟಾಪ್‌, ಟ್ಯಾಬ್ ಸ್ಥಾನ ಪಡೆದಿವೆ. ಇಂಟರ್‌ನೆಟ್‌ ಬಳಕೆ ಮಕ್ಕಳ ವಿಭಿನ್ನ ಕಲಿಕೆಗೆ ಸಹಕಾರಿಯಾಗಿದೆ.

ADVERTISEMENT

ಪಠ್ಯ ಕಲಿಕೆಯ ನಂತರ ಮಕ್ಕಳು ಡಿಜಿಟಲ್ ಪರದೆಯಲ್ಲಿ ಬೋಧಿಸಿದ ವಿಷಯಗಳನ್ನು ತ್ರೀಡಿ ತಂತ್ರಜ್ಞಾನದಲ್ಲಿ ವೀಕ್ಷಿಸಬಹುದಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲೂ ಪಾಠ ಆಲಿಸಬಹುದು. ಶಿಕ್ಷಕರ ಜೊತೆ ಚರ್ಚಿಸಿ ಸಂವಾದ ನಡೆಸಬಹುದು. ತರಗತಿ ಹೊರಭಾಗದಲ್ಲಿ ಟೆಲಿಸ್ಕೋಪ್‌ ಅಳವಡಿಸಲಾಗಿದ್ದು ಭೂ ಮಂಡಲ ಹಾಗೂ ನಭೋಮಂಡಲದ ವಿಸ್ಮಯಕಾರಿ ವಿದ್ಯಮಾನಗಳನ್ನು ಮಕ್ಕಳಿಗೆ ಮನದಟ್ಟು ಮಾಡಿಸಲಾಗುತ್ತಿದೆ ಎನ್ನುತ್ತಾರೆ ಎನ್ನುತ್ತಾರೆ ಶಿಕ್ಷಕಿ ಸೌಮ್ಯ

ಹೊಸ ತಲೆಮಾರಿನ ಪೋಷಕರು ಡಿಜಿಟಲ್ ಶಿಕ್ಷಣ ಹಾಗೂ ವೈವಿಧ್ಯಮಯ ಆಕರ್ಷಣೆಗೆ ಒಳಗಾಗಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಸರ್ಕಾರಿ ಶಾಲೆಗಳಲ್ಲೂ ತರಬೇತಿ ಪಡೆದ ಶಿಕ್ಷಕರು ಮಕ್ಕಳ ಕೈಬರಹ, ಕಾಗುಣಿತ ಹಾಗೂ ಗಣಿತದ ಸರಳ ಸೂತ್ರಗಳನ್ನು ವೈವಿಧ್ಯಮಯವಾಗಿ ಕಲಿಸುತ್ತಿದ್ದಾರೆ. ನಲಿಕಲಿ ತರಗತಿಗಳಲ್ಲಿ ಮಕ್ಕಳ ಸರ್ವತೋಮುಖ ಕಲಿಕಾ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಕಲಿಸಲಾಗುತ್ತದೆ.

10 ರಿಂದ 12ರ ವಯೋಮಾನಕ್ಕೆ ಬರುವ ವಿದ್ಯಾರ್ಥಿಗಳು ಮೊಬೈಲ್ ಬಳಸಿ, ಸಿಲಬಸ್, ಪ್ರಶ್ನೆಪತ್ರಿಕೆ, ವಿಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಂಡು ಕಲಿಯುತ್ತಾರೆ. ಇದಕ್ಕೆ ಪೋಷಕರು ಸಹಾಯ ಮಾಡುತ್ತಿದ್ದು, ಡಿಜಿಟಲ್ ಕಲಿಕೆ ಶೂನ್ಯ ವೆಚ್ಚದಲ್ಲಿ ದೊರೆಯುತ್ತದೆ ಎನ್ನುತ್ತಾರೆ ಅವರು.

ಶಿಕ್ಷಕರ ಸಹಭಾಗಿತ್ವದಲ್ಲಿ ಮೊಬೈಲ್‌ನಲ್ಲಿ ಕಿರು ತಂತ್ರಾಂಶಗಳನ್ನು ಬಳಸಿಕೊಂಡು ಮಕ್ಕಳೇ ಕಾರ್ಯಕ್ರಮ ನಿರೂಪಿಸುತ್ತಾರೆ, ಚಿತ್ರೀಕರಿಸುತ್ತಾರೆ. ನೃತ್ಯ, ಜನಪದ ಕುಣಿತ, ನಾಟಕ, ಸೋಭಾನೆ ಪದ ಹಾಗೂ ಸಮಕಾಲಿನ ನೃತ್ಯಗಳನ್ನು ವೀಕ್ಷಿಸಿ ಸ್ವತಃ ಅಭಿನಯಿಸಿ ವಿಡಿಯೋ ಸಂಕಲನ ಮಾಡುತ್ತಾರೆ. ದೃಶ್ಯಗಳಿಗೆ ಧ್ವನಿ ಹಾಗೂ ಡಿಜಿಟಲ್ ಸ್ಪರ್ಶ ನೀಡುವುದನ್ನು ಕಲಿತಿದ್ದಾರೆ. ಡಿಜಿಟಲ್ ಕಲಿಕೆಗೆ ತಗುಲುವ ಹೆಚ್ಚುವರಿ ಶುಲ್ಕವನ್ನು ಪೋಷಕರು ಹಾಗೂ ಶಿಕ್ಷಕರು ಭರಿಸುತ್ತಿದ್ದಾರೆ ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೇಶ್ ಹೇಳಿದರು.

ಡಿಜಿಟಲ್ ಶಿಕ್ಷಣಕ್ಕೆ ಒತ್ತು

ತಾಲ್ಲೂಕಿನಲ್ಲಿ 80ಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಶಾಲೆಗಳು ಇದ್ದು 1 ರಿಂದ 5ನೇ ತರಗತಿ ಮಕ್ಕಳು ಆಟಿಕೆ ಬಳಪ ಸ್ಲೇಟ್ ಬಳಸಿ ಆರಂಭಿಕ ಶಿಕ್ಷಕಣ ಪಡೆದರೆ 6 ರಿಂದ 8ನೇ ತರಗತಿ ವಿದ್ಯಾರ್ಥಿಗಳು ಹೊಸತನ ಸೃಜನಶೀಲತೆ ಬುದ್ದಿ ಸಾಮರ್ಥ್ಯಕ್ಕೆ ತಕ್ಕಂತೆ ಡಿಜಿಟಲ್ ಕಲಿಕೆಯತ್ತ ಆಕರ್ಷಿತರಾಗಿದ್ದಾರೆ. ಟೆಲಿಸ್ಕೋಪ್ ನಿರ್ಮಾಣ ಮತ್ತು ಡಿಜಿಟಲ್‌ ಬೋಧನೆಗೆ ದೀನಬಂಧು ವಿದ್ಯಾಸಂಸ್ಥೆ ನೆರವು ನೀಡಿದೆ ಎನ್ನುತ್ತಾರೆ ಬಿಆರ್‌ಪಿ ಸತೀಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.