ADVERTISEMENT

ಯಳಂದೂರು | ಗ್ರಂಥಾಲಯವಾಯ್ತು ಅಂಬೇಡ್ಕರ್ ಭವನ !

ಪುಸ್ತಕ ಪ್ರೀತಿಗೆ ಗ್ರಾಮದ ಯುವಕರಿಂದ ಹೀಗೊಂದು ವಿಭಿನ್ನ ಅಭಿಯಾನ

ನಾ.ಮಂಜುನಾಥ ಸ್ವಾಮಿ
Published 4 ಮಾರ್ಚ್ 2026, 6:50 IST
Last Updated 4 ಮಾರ್ಚ್ 2026, 6:50 IST
ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಅಂಬೇಡ್ಕರ್ ಭವನದಲ್ಲಿರುವ ಗ್ರಂಥಾಲಯದಲ್ಲಿ ಓದುತ್ತಿರುವ ಮಕ್ಕಳು
ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಅಂಬೇಡ್ಕರ್ ಭವನದಲ್ಲಿರುವ ಗ್ರಂಥಾಲಯದಲ್ಲಿ ಓದುತ್ತಿರುವ ಮಕ್ಕಳು   

ಯಳಂದೂರು: ‘ಊರ ತುಂಬ ದೇವಾಲಯಗಳಿಗಿಂತ ಪ್ರತಿ ಮನೆಗಳಲ್ಲಿ ಪುಟ್ಟ ಗ್ರಂಥಾಲಯಗಳು ಇರಲಿ.. ಪುಸ್ತಕ ಸಂಸ್ಕೃತಿ ಬಿಂಬಿಸಲು ಮಹನೀಯರ ಭವನಗಳಲ್ಲಿ ಹೊತ್ತಿಗೆಗಳ ಸಿಂಗಾರ ಅರಳಲಿ.. ಅಲ್ಲಿ ಮಕ್ಕಳು, ಯುವಕರು ಮತ್ತು ಓದುಗರ ಗೌಜು ತುಂಬಿರಲಿ’ ಎಂಬ ಎಂಬ ಆಶಯದೊಂದಿಗೆ ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಸ್ಥಳೀಯ ಯುವಕರ ತಂಡ ಗ್ರಂಥಾಲಯವನ್ನಾಗಿ ರೂಪಿಸಿದೆ.

ಕೆಸ್ತೂರು ಗ್ರಾಮದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ಮಿಸಲಾಗಿದೆ. ಇದೇ ಮಾದರಿಯಲ್ಲಿ ಯುವಜನರು ಗ್ರಾಮದ ಮನೆಗಳಿಂದ ದಾನವಾಗಿ ಸ್ವೀಕರಿಸಿದ ಪುಸ್ತಕಗಳನ್ನು ಗ್ರಂಥಾಲಯಗಳಲ್ಲಿ ಜೋಡಿಸಿಟ್ಟಿದ್ದಾರೆ. ನೂರಾರು ಪುಸ್ತಕಗಳು, ಸ್ಪರ್ಧಾತ್ಮಕ ಕೈಪಿಡಿ, ಮಾಸಿಕ, ವಾರಪತ್ರಿಕೆಗಳು, ಕವನ ಸಂಕಲನ, ರಂಗಪಠ್ಯ ಹಾಗೂ ದಿನ ಪತ್ರಿಕೆಗಳ ಸಂಗ್ರಹಗಳು ಗ್ರಂಥಾಲಯದಲ್ಲಿದೆ.

ಜನ ಸಮುದಾಯವನ್ನು ಪುಸ್ತಕಗಳೊಂದಿಗೆ ಬೆಸೆಯುವ ಸಲುವಾಗಿ ಇಂತಹ ವಿಭಿನ್ನ ಪ್ರಯತ್ನಕ್ಕೆ ಸ್ಥಳೀಯ ಯುವಕರು ಮುಂದಾಗಿದ್ದಾರೆ. ಯುವ ಸಮೂಹ ಆಧುನಿಕತೆಯ ನಾಗಲೋಟದಲ್ಲಿ ಕಳೆದುಹೋಗಿದ್ದು, ಪುಸ್ತಕಗಳನ್ನು ಖರೀದಿಸುವುದನ್ನು ಹಾಗೂ ಓದುವುದನ್ನು ಮರೆತಿದ್ದಾರೆ. ಮೊಬೈಲ್, ಟಿವಿ, ಸಾಮಾಜಿಕ ಜಾಲತಾಣಗಳ ಗೀಳಿನಲ್ಲಿ ಅಧ್ಯಯನ ಮಾಡುವ ಸಂಸ್ಕೃತಿಯನ್ನು ಮರೆತಿದ್ದಾರೆ. ಇದನ್ನು ಮನಗಂಡ ಯುವಕರ ತಂಡ ಮಕ್ಕಳು, ಯುವಜನತೆ ಮತ್ತು ಗ್ರಾಮದ ಜನರು ಗ್ರಂಥಾಲಯಗಳತ್ತ ಮುಖಮಾಡಲು ಶ್ರಮಿಸುತ್ತಿದ್ದಾರೆ.

ADVERTISEMENT

ಗ್ರಂಥಾಲಯಗಳಲ್ಲಿ ಹೊಸ ಪುಸ್ತಕಗಳು ಸಿಗುವಂತೆ ವ್ಯವಸ್ಥೆ ಮಾಡಿದ್ದಾರೆ. ಇತಿಹಾಸ, ವಿಜ್ಞಾನ ಮತ್ತು ತಂತ್ರಜ್ಞಾನ, ಕಲೆ, ಸಂಸ್ಕೃತಿ ಬಿಂಬಿಸುವ 500 ಪುಸ್ತಕಗಳು ಇಲ್ಲಿ ಲಭ್ಯವಿದೆ. ನೂರಾರು ಯುವಕರು ಮತ್ತು ವಿದ್ಯಾರ್ಥಿಗಳು ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ಗ್ರಂಥಾಲಯಕ್ಕೆ ಬರುತ್ತಿದ್ದಾರೆ. ಗ್ರಂಥಾಲಯ ಪ್ರವೇಸುವಾಗ ಮೊಬೈಲ್ ತರುವುದನ್ನು ನಿಷೇಧಿಸಲಾಗಿದ್ದು, ಅಧ್ಯಯನಕ್ಕೆ ಪ್ರಥಮ ಆಧ್ಯತೆ ನೀಡಲಾಗಿದೆ. 

‘ಹಿಂದೆ ಕಥೆ ಪುಸ್ತಕಗಳನ್ನು ಮಕ್ಕಳು ಇಷ್ಟಪಟ್ಟು ಓದುತ್ತಿದ್ದರು. ಇಂದು ಮೊಬೈಲ್ ಪರದೆಯಲ್ಲಿ ದೃಷ್ಟಿ ನೆಟ್ಟಿದ್ದಾರೆ. ಇದರಿಂದ ನೈತಿಕ ಮೌಲ್ಯಗಳು ಕ್ಷೀಣಿಸುತ್ತಿವೆ. ಈ ದಿಸೆಯಲ್ಲಿ ಓದಿನತ್ತ ಆಸಕ್ತಿ ಬೆಳೆಸುವುದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು, ಪಠ್ಯ ಪುಸ್ತಕಗಳ ಮಹತ್ವ ಹಾಗೂ ಅಗಾಧ ಜ್ಞಾನದ ದಿಗಂತವನ್ನು ಪರಿಚಯಿಸಲು ಗ್ರಂಥಾಲಯ ನೆರವಾಗಿದೆ. ಅಂಬೇಡ್ಕರ್ ಸಂಘದ ಹಳೆಯ ಪದಾಧಿಕಾರಿಗಳು ಗ್ರಂಥಾಲಯ ಸ್ಥಾಪಿಸಿ ಮಾದರಿಯಾಗಿದ್ದಾರೆ’ ಎಂದು ಸಂಘದ ಅಧ್ಯಕ್ಷ ಸಚಿನ್ ಹೇಳಿದರು.

ಗ್ರಂಥಾಲಯಕ್ಕೆ ಬೇಕಾದ ಮೂಲಸೌಕರ್ಯ ಮತ್ತು ಕಪಾಟು ಸೌಲಭ್ಯವನ್ನು ಗ್ರಾಮದ ಯಜಮಾನರು ಮತ್ತು ಪುಸ್ತಕ ಪ್ರಿಯರು ನೀಡುತ್ತ ಬಂದಿದ್ದು ಪುಸ್ತಕ ಓದುವ ಸಂಸ್ಕೃತಿಗೆ ನೀರೆಯುತ್ತಿದ್ದಾರೆ.

ಪುಸ್ತಕಗಳ ಓದಿನಿಂದ ವಿಮುಖವಾಗುತ್ತಿರುವ ಯುವಜನರು ಪುಸ್ತಕ ಓದುವ ಪ್ರೀತಿ ಹೆಚ್ಚಿಸಲು ವಿಭಿನ್ನ ಪ್ರಯತ್ನ ‘ಗ್ರಂಥಾಲಯದೊಳಗೆ ಮೊಬೈಲ್ ಬಳಕೆಗೆ ನಿರ್ಬಂಧ’

‘ನೆನಪಿನ ಕಾಣಿಕೆಯಾಗಿ ಪುಸ್ತಕಗಳ ದೇಣಿಗೆ’

ದಶಕದ ಹಿಂದೆ ಯುವಕರು ಗೌರಿ-ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಈ ಸಮಯದಲ್ಲಿ ಪುಸ್ತಕ ಪ್ರೇಮಿಗಳು ಒಟ್ಟಾಗಿ ವಿಗ್ರಹಗಳ ಬದಲು ಗ್ರಂಥಗಳನ್ನು ಇಟ್ಟು ಪೂಜಿಸಲು ಆರಂಭಿಸಿದರು. ಪ್ರತಿದಿನ ಹೊಸಹೊಸ ಪುಸ್ತಕಗಳನ್ನು ಖರೀದಿಸುತ್ತಾ ಬಂದರು. ಇದರಿಂದ ಪ್ರೇರಣೆ ಪಡೆದ ಯುವಕರ ಗುಂಪು ಅಂಬೇಡ್ಕರ್ ಭವನವನ್ನು ಗ್ರಂಥಾಲಯವನ್ನಾಗಿ ಬದಲಾಯಿಸಿದ್ದಾರೆ. ಮಹನೀಯರ ಜಯಂತಿ ಹಾಗೂ ವಿದ್ಯಾರ್ಥಿಗಳ ಜನ್ಮದಿನಕ್ಕೆ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳನ್ನು ನೆನಪಿನ ಕಾಣಿಕೆಯಾಗಿ ನೀಡುವ ಪರಂಪರೆಯನ್ನು ಹುಟ್ಟುಹಾಕಿದ್ದಾರೆ ಎಂದು ಗ್ರಂಥಾಲಯ ಹುಟ್ಟಿದ ಕತೆಯನ್ನು ಶಿವಮೊಗ್ಗ ವಿಶ್ವವಿದ್ಯಾಲಯದ ಉಪನ್ಯಾಸಕ ಕೆಸ್ತೂರು ಪ್ರಸನ್ನ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.