ADVERTISEMENT

ದಾರಿ ವಿಚಾರಕ್ಕೆ ಜಗಳ: ಜಿ.ಪಂ. ಮಾಜಿ ಉಪಾಧ್ಯಕ್ಷೆಯ ತಂದೆಯ ಕೊಲೆ

ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿಯಲ್ಲಿ ಘಟನೆ, ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 16:55 IST
Last Updated 6 ಜುಲೈ 2021, 16:55 IST
ಗುರುಸ್ವಾಮಿ
ಗುರುಸ್ವಾಮಿ   

ಚಾಮರಾಜನಗರ: ಜಮೀನಿನ ದಾರಿ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಕ ಪಕ್ಕದ ಜಮೀನುಗಳ ಮಾಲೀಕರ ನಡುವೆ ಘರ್ಷಣೆಯಲ್ಲಿ ಒಬ್ಬರ ಕೊಲೆಯಾಗಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಪ್ರಕರಣ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಮಧ್ಯಾಹ್ನ 3 ಗಂಟೆಗೆ ಈ ಘಟನೆ ನಡೆದಿದೆ. ಗ್ರಾಮದ ಮಲೆ ಮಾದಪ್ಪ ಅವರು ಗುರುಸ್ವಾಮಿ (66) ಅವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಗುರುಸ್ವಾಮಿ ಅವರ ಮಗ ಮಂಜುನಾಥ್‌ (28) ಅವರಿಗೂ ಗಂಭೀರ ಏಟಾಗಿದ್ದು, ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಸಂಬಂಧ ಮಲೆ ಮಾದಪ್ಪ, ಅವರ ಮಗ ಮಲ್ಲಿಕಾರ್ಜುನ ಹಾಗೂ ಪತ್ನಿ ಮಂಗಳಮ್ಮ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಗುರುಸ್ವಾಮಿ ಅವರು ಜಿಲ್ಲಾ ಪಂಚಾಯಿತಿಯ ನಿಕಟಪೂರ್ವ ಉಪಾಧ್ಯಕ್ಷೆ ಶಶಿಕಲಾ ಅವರ ತಂದೆ.

ADVERTISEMENT

ಘಟನೆಯ ವಿವರ: ‘ಮಲೆ ಮಾದಪ್ಪ ಹಾಗೂ ಗುರುಸ್ವಾಮಿ ಅವರ ನಡುವೆ ಜಮೀನಿನಲ್ಲಿರುವ ಓಡಾಡುವ ದಾರಿ ವಿಚಾರವಾಗಿ 10 ವರ್ಷಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯ ಇತ್ತು. ಕಳೆದ ವರ್ಷವಷ್ಟೇ ಇಬ್ಬರೂ ಪರಸ್ಪರ ರಾಜಿ ಮಾಡಿಕೊಂಡಿದ್ದರು. ಮಂಗಳವಾರ ಮಲೆ ಮಾದಪ್ಪ ಹಾಗೂ ಅವರ ಮಗ ಮಲ್ಲಿಕಾರ್ಜುನ ಅವರು ಈ ದಾರಿಯಲ್ಲಿ ಬೆಳೆದಿದ್ದ ಕಳೆ ಗಿಡಗಳನ್ನು ತೆರವುಗೊಳಿಸುತ್ತಿದ್ದರು. ಇದು ಗೊತ್ತಾಗುತ್ತಿದ್ದಂತೆಯೇ ಗುರುಸ್ವಾಮಿ ಹಾಗೂ ಮಂಜುನಾಥ್‌ ಅವರು ಸ್ಥಳಕ್ಕೆ ತೆರಳಿ ಮಲೆ ಮಾದಪ್ಪ ಅವರನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಮಲೆ ಮಾದಪ್ಪ ಅವರು ಮಚ್ಚಿನಿಂದ ಗುರುಸ್ವಾಮಿ ಹಾಗೂ ಮಂಜುನಾಥ್‌ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಗುರುಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

‘ಮಂಜುನಾಥ್‌ ಅವರ ತಲೆಗೆ ಹಾಗೂ ಕೈಗೆ ತೀವ್ರವಾಗಿ ಗಾಯಗಳಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೆಯ ದ್ವೇಷದ ಕಾರಣಕ್ಕೆ ಈ ಕೊಲೆ ನಡೆದಿದೆ ಎಂದು ಗೊತ್ತಾಗಿದೆ. ಗುರುಸ್ವಾಮಿ ಅವರ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುವುದು’ ಎಂದು ಚಾಮರಾಜನಗರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ ಪುಟ್ಟಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಘಟನಾ ಸ್ಥಳಕ್ಕೆ ಎಸ್‌ಪಿ ದಿವ್ಯಾ ಸಾರಾ ಥಾಮಸ್‌, ಎಎಸ್‌ಪಿ ಸುಂದರ್‌ರಾಜ್‌, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಇನ್‌ಸ್ಪೆಕ್ಟರ್‌ ಪುಟ್ಟಸ್ವಾಮಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.