ADVERTISEMENT

ಅಂಗವಿಕಲ ಮಕ್ಕಳ ಬಗ್ಗೆ ನಿರ್ಲಕ್ಷ್ಯ ಧೋರಣೆ ಸಲ್ಲದು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 10:16 IST
Last Updated 21 ಡಿಸೆಂಬರ್ 2012, 10:16 IST
ಚಿಂತಾಮಣಿ: ಬುದ್ಧಿಮಾಂಧ್ಯ ಹಾಗೂ ಅಂಗವಿಕಲ ಮಕ್ಕಳ ಬಗ್ಗೆ ನಿರ್ಲಕ್ಷ ತೊರದೆ ಅವರನ್ನು ಸುಧಾರಣೆ ಗೊಳಿಸುವ ನಿಟ್ಟಿನಲ್ಲಿ ಪೋಷಕರು, ಸಂಘ- ಸಂಸ್ಥೆಗಳು ಪ್ರಯತ್ನಿಸ ಬೇಕಾಗಿದೆ ಎಂದು ರಾಜ್ಯ ಅಂಗವಿಕಲರ ಕಲ್ಯಾಣ ಇಲಾಖೆ ಆಯುಕ್ತ ರಾಜಣ್ಣ ತಿಳಿಸಿದರು.

ನಗರದ ವೆಂಕಟಗಿರಿಕೋಟೆಯ ಹೊಸ ಬಡಾವಣೆಯ ವಿನಯ್ ವಿನೇಕರ್ ಗುರೂಜಿಯವರ ಬುದ್ಧಿಮಾಂಧ್ಯ ಮಕ್ಕಳ ವಿಶೇಷ ಶಾಲೆಯಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಅಂಗವಿಕಲರ ದಿನಾಚರಣೆಯಲ್ಲಿ ಮಾತನಾಡಿದರು. ಬುದ್ದಿಮಾಂಧ್ಯ ಮಕ್ಕಳನ್ನು ದೇವರೆಂದು ಭಾವಿಸಿ ಪೂಜಿಸುವ ಜನರನ್ನು ಉತ್ತರಭಾರತದ ಕೆಲವು ಪ್ರದೇಶಗಳಲ್ಲಿ ಕಾಣಬಹುದು. ಮಾನಸಿಕ ಕಾಯಿಲೆಗೂ, ಬುದ್ಧಿಮಾಂಧ್ಯತೆಗೂ ಬಹಳಷ್ಟು ವ್ಯತ್ಯಾಸವಿದೆ. ಜನರು ಮೂಢನಂಬಿಕೆ, ಕಂದಾಚಾರಗಳಿಗೆ ಮಾರು ಹೋಗಿ ಹಿಂಸಿಸಿ ಬಲಿಪಶು ಮಾಡಬಾರದು. ವೈದ್ಯಕೀಯ ಚಿಕಿತ್ಸೆಯಿಂದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ ಎಂದರು.

ತಹಶೀಲ್ದಾರ್ ಎಂ.ಎನ್.ಮಂಜುನಾಥ್ ಮಾತನಾಡಿ, ಪೋಷಕರು ನ್ಯೂನತೆಯುಳ್ಳ ಮಕ್ಕಳನ್ನು ಮೂಲೆಗೆ ತಳ್ಳದೆ ಇತರೆ ಮಕ್ಕಳಂತೆ ಶಾಲೆಗೆ ಕಳುಹಿಸಿ  ಭವಿಷ್ಯಕ್ಕೆ ಸಹಕರಿಸಬೇಕಾಗಿದೆ. ಮಕ್ಕಳ ಹಾಗೂ ಪೋಷಕರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿ, ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಿ ಕೊಡುವುದಾಗಿ ನುಡಿದರು. ನಗರಸಭೆ ಪೌರಾಯುಕ್ತ ಡಾ.ಎಂ.ರಾಮೇಗೌಡ ಮಾತನಾಡಿ, ಬುದ್ಧಿಮಾಂಧ್ಯ ಮಕ್ಕಳ ಶಾಲೆಗೆ ನಗರ ಸಭೆಯಿಂದ 15 ಸಾವಿರ ರೂಪಾಯಿ ಸಹಾಯಧನ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಶಾಲಾ ಮಕ್ಕಳು ಹಲವು ಸಾಂಸೃತಿಕ ಕಾರ್ಯಕ್ರಮ ನಡೆಸಿಕೊಟ್ಟರು ಮಕ್ಕಳು ತ್ಯಾಜ್ಯ ವಸ್ತುಗಳಿಂದ ತಯಾರಿಸಿದ ಅಲಂಕಾರಿಕ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಶಾಲೆಯ ಸಂಸ್ಥಾಪಕಿ ಅಮೃತವಲ್ಲಿ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯ ಅಬ್ಬುಗುಂಡು ವಿ.ಶ್ರಿನಿವಾಸರೆಡ್ಡಿ, ವನಮಿತ್ರ ಸಂಸ್ಥೆಯ ಸುರೇಶ್, ಸಾಹಿತ್ಯ ವೇದಿಕೆಯ ಕೆ.ಎಸ್.ನೂರುಲ್ಲಾ, ಅಬ್ಬುಗುಂಡು ಬಾಬುರೆಡ್ಡಿ, ರಾಜಶೇಖರ್, ಸಿ.ಡಿ.ಮಂಜುನಾಥ್ , ಅನ್ನಪೂರ್ಣಮ್ಮ  ಮತ್ತಿತರರು ಉಪಸ್ಥಿತರಿದ್ದರು. ಕೆ.ಎನ್.ಮದ್ದಿರೆಡ್ಡಿ ನಿರೂಪಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.