ಚಿಂತಾಮಣಿ: ತಾಲ್ಲೂಕಿನ ವಿಪತ್ತು ನಿರ್ವಹಣೆಗೆ ಇರುವ ಅಗ್ನಿಶಾಮಕ ಠಾಣೆಗೆ ಮೂರು ತಿಂಗಳಿನಿಂದ ದೂರವಾಣಿ ಸಂಪರ್ಕ ಇಲ್ಲದಂತಾಗಿದೆ. ಕಾರಣ ಕಾಮಗಾರಿಯೊಂದರ ಕೆಲಸದಲ್ಲಿ ತುಂಡಾದ ಬಿಎಸ್‌ಎನ್‌ಎಲ್ ಕೇಬಲ್ ಅನ್ನು ಇಂದಿಗೂ ದುರಸ್ತಿಗೊಳಿಸದಿರುವುದು.
ಸುಮಾರು ಮೂರು ತಿಂಗಳು ಕಳೆದರೂ ಬಿಎಸ್‌ಎನ್‌ಎಲ್ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಅಗ್ನಿಶಾಮಕ ಠಾಣೆ ಅಧಿಕಾರಿಗಳು.ಕರಿಯಪ್ಪಲ್ಲಿ ಸಮೀಪ ಒಳಚರಂಡಿ ಕಾಮಗಾರಿ ನಡೆಯುವ ಹಂತದಲ್ಲಿ 200 ಅಡಿ ಕೇಬಲ್ ತುಂಡಾಗಿದೆ.
ಇದಕ್ಕೆ ಗುತ್ತಿಗೆದಾರರು ಹೊಣೆಗಾರರಾಗಿದ್ದಾರೆ. ಸುಮಾರು 80 ಸಾವಿರ ದಂಡ ತುಂಬಿದರೆ ಇದನ್ನು ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಗುತ್ತಿಗೆದಾರರ ಹಾಗೂ ಬಿಎಸ್‌ಎನ್‌ಎಲ್ ನಡುವಿನ ಕಿತ್ತಾಟದಿಂದ ಇಲಾಖೆಗೆ ದೂರವಾಣಿ ಸಂಪರ್ಕ ಕಡಿತಗೊಂಡಿದೆ ಎನ್ನಲಾಗುತ್ತಿದೆ.
ಬೇಸಿಗೆ ಆಗಮನದಿಂದ ಅಗ್ನಿ ಅನಾಹುತಗಳು ಹೆಚ್ಚಾಗಿವೆ. ಆದರೆ ದೂರವಾಣಿ ಸಂಪರ್ಕ ಇಲ್ಲದಿರುವುದರಿಂದ ಜನತೆಗೆ ತೊಂದರೆಯಾಗಿದೆ. ಕೂಡಲೇ ಇದನ್ನು ಸರಿ ಪಡಿಸಬೇಕು ಎನ್ನುವುದು ಅಧಿಕಾರಿಗಳ ಒತ್ತಾಯ.
ತಾಲ್ಲೂಕಿನಲ್ಲಿ ಏನಾದರೂ ಅಗ್ನಿ ಅನಾಹುತಗಳು ಸಂಭವಿಸಿದರೆ ಕೂಡಲೇ ಮೊಬೈಲ್ ಸಂಖ್ಯೆ 9901426323 ಅಥವಾ 903586612 ಸಂಪರ್ಕಿಸುವಂತೆ ಠಾಣೆ ಅಧಿಕಾರಿ ಪಿ.ಎಂ.ನಾಗೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.