ADVERTISEMENT

ಅತಂತ್ರ ಸ್ಥಿತಿಯಲ್ಲಿ ಅಲೆಮಾರಿ ಬದುಕು!

ಪಿ.ಎನ್.ಶಿವಣ್ಣ
Published 14 ಅಕ್ಟೋಬರ್ 2017, 6:10 IST
Last Updated 14 ಅಕ್ಟೋಬರ್ 2017, 6:10 IST
ಬಾಗೇಪಲ್ಲಿ ತಾಲ್ಲೂಕಿನ ಬಿಳ್ಳೂರು ಗ್ರಾಮದ ಹೊರವಲಯದಲ್ಲಿ ಬೀಡುಬಿಟ್ಟಿರುವ ಅಲೆಮಾರಿ ಜನಾಂಗದ ಆಂಜಿನಪ್ಪ ಮತ್ತು ನರಸಿಂಹಲು ಅವರ ಕುಟುಂಬಗಳು
ಬಾಗೇಪಲ್ಲಿ ತಾಲ್ಲೂಕಿನ ಬಿಳ್ಳೂರು ಗ್ರಾಮದ ಹೊರವಲಯದಲ್ಲಿ ಬೀಡುಬಿಟ್ಟಿರುವ ಅಲೆಮಾರಿ ಜನಾಂಗದ ಆಂಜಿನಪ್ಪ ಮತ್ತು ನರಸಿಂಹಲು ಅವರ ಕುಟುಂಬಗಳು   

ಬಾಗೇಪಲ್ಲಿ: ಸಮಾಜ ಆಧುನಿಕತೆಯತ್ತ ಮುಖ ಮಾಡಿ ನಾಗಾಲೋಟದ ಹಾದಿ ಹಿಡಿದಿರುವ ಈ ಹೊತ್ತಿನಲ್ಲಿಯೂ ಇಂದಿಗೂ ಕೆಲ ಸಮುದಾಯಗಳು ತಮ್ಮ ಪರಂಪರೆಯ ಚೌಕಟ್ಟು ದಾಟಿ ಬರದೆ ನೂರಾರು ವರ್ಷಗಳ ಹಿಂದಿನ ಬದುಕಿನ ಗತಿಯಲ್ಲೇ ಇಂದಿಗೂ ಜೀವಿಸುತ್ತಿದ್ದಾರೆ.

ಆಧುನಿಕ ಜಗತ್ತಿನ ಅಬ್ಬರದ ಬದುಕನ್ನು ಕಂಡರೂ ಇಂದಿಗೂ ಅನೇಕ ಜನಾಂಗಗಳು ಅಲೆಮಾರಿ ಬದುಕನ್ನೇ ಅಪ್ಪಿಕೊಂಡು ಬದುಕುತ್ತಿವೆ. ಅಂತಹ ಅಲೆಮಾರಿಗಳಲ್ಲಿ ಜಂಗಮ ಜನಾಂಗ ಕೂಡ ಒಂದಾಗಿದೆ.

ತಾಲ್ಲೂಕಿನ ಬಿಳ್ಳೂರು ಗ್ರಾಮದ ಹೊರವಲಯದಲ್ಲಿ ಸದ್ಯ ಬೀಡು ಬಿಟ್ಟಿರುವ ಮೂಲತಃ ಬಾಗೇಪಲ್ಲಿ ತಾಲ್ಲೂಕಿನ ಚೇಳೂರು ಗ್ರಾಮದ ಆಂಜಿನಪ್ಪ ಮತ್ತು ನರಸಿಂಹಲು ಅವರ ಕುಟುಂಬಗಳು ಒಂದೆಡೆ ನೆಲೆ ನಿಲ್ಲದೆ ಸದಾ ಅಲೆಯುತ್ತಲೇ ಬದುಕು ಸವೆಸುವ ಹಾದಿಯಲ್ಲಿವೆ.

ADVERTISEMENT

ಹರಕಲು ಬಟ್ಟೆಗಳ ಗುಡಾರವನ್ನೇ ಮನೆಯನ್ನಾಗಿಸಿಕೊಂಡು ಐದು ಮಕ್ಕಳೊಂದಿಗೆ ಬದುಕುವ ಈ ಕುಟುಂಬಗಳಿಗೆ ಚೆಂದನೆಯ ಮನೆಯ ಕನಸಿಲ್ಲ. ಬಿಸಿಲು ಮಳೆಗೆ ಮೈವೊಡ್ಡಿ ಜೀವನ ಸಾಗಿಸುತ್ತಿರುವ ಇವರು ತಮ್ಮ ಜೀವನೊಪಾಯಕ್ಕೆ ಒಂದಿಷ್ಟು ಕುರಿ, ಮೇಕೆಗಳು ಸಾಕಿಕೊಂಡಿದ್ದಾರೆ. ಹೋದೆಡೆಯೆಲ್ಲ ಕೂಲಿ ಕೆಲಸ ಮಾಡುವ ಇವರು ಕೆಲಸ ಸಿಗದಿದ್ದಾಗ ಭಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಾರೆ.

ಎಲ್ಲಿಯೇ ಹೋದರೂ ಎರಡು ಮೂರು ತಿಂಗಳಲ್ಲಿ ಅಲ್ಲಿಯೇ ಉಳಿಯುವ ಇವರದು ಸಂಚಾರಿ ಬದುಕು. ಪೋಷಕರಿಗೆ ಇಲ್ಲದ ಅಕ್ಷರ ಜ್ಞಾನ ಮಕ್ಕಳಿಂದ ಬಹು ದೂರದಲ್ಲಿದೆ. ಇವರ ಮಕ್ಕಳಿಗೆ ಶಾಲೆ ಎನ್ನುವುದು ಸುಂದರ ಸ್ವಪ್ನ.

‘ನಮಗೆ ಊರಿನಲ್ಲಿ ಯಾವುದೇ ಆಸ್ತಿ ಪಾಸ್ತಿಯಿಲ್ಲ. ನಾವು ಬದುಕೇ ಹೀಗೆ ಅಲೆಯುವುದರಲ್ಲಿ ಕಳೆದು ಹೋಗಿದೆ. ನಮ್ಮ ಪಾಡು ನಮ್ಮ ಮಕ್ಕಳಿಗೆ ಬೇಡ ಅವರಾದರೂ ನಮ್ಮ ಊರಿನಲ್ಲಿ ಬದುಕು ಕಟ್ಟಿಕೊಳ್ಳಲಿ ಎನ್ನುವ ಆಸೆ ನಮ್ಮದು. ಆದರೆ ಚೇಳೂರು ಗ್ರಾಮ ಪಂಚಾಯಿತಿಗೆ ಮನೆಗಾಗಿ ಅನೇಕ ಬಾರಿ ಅರ್ಜಿ ಸಲ್ಲಿಸಿದ್ದರೂ ನಮ್ಮ ಅಳಲು ಯಾರೂ ಆಲಿಸಲಿಲ್ಲ.

ನಾವು ಈವರೆಗೆ ಸರ್ಕಾರದ ಯಾವುದೇ ಯೋಜನೆಯಿಂದ ಒಂದೇ ಒಂದು ಪೈಸೆಯಷ್ಟು ಸಹಾಯ ಪಡೆದಿಲ್ಲ’ ಎಂದು ನರಸಿಂಹಲು ಬೇಸರ ವ್ಯಕ್ತಪಡಿಸಿದರು.
‘ನಾವು 21 ನೇ ಶತಮಾನದಲ್ಲಿದ್ದರೂ ಇಂದಿಗೂ ನಮ್ಮ ನಡುವೆ ಅನೇಕ ಜನರು ಪ್ರಾಣಿಗಿಂತಲೂ ಕಡೆಯಾಗಿ ಜೀವನ ಮಾಡುವುದು ನೋಡಿದಾಗ ತುಂಬಾ ಬೇಸರವಾಗುತ್ತದೆ.

ಇದು ನಾಚಿಕೆಗೇಡಿನ ವಿಚಾರ. ಸರ್ಕಾರ ಯೋಜನೆಗಳಿಗೆ ಇವರಿಗಿಂತಲೂ ಅರ್ಹ ಫಲಾನುಭವಿಗಳು ಯಾರು ಇದ್ದಾರೆ? ದುರಂತವೆಂದರೆ ಅಧಿಕಾರಿಗಳಲ್ಲಿ ಮಾನವೀಯತೆ ಮರೆಯಾಗಿ, ಸ್ವಾರ್ಥ ಮನೆ ಮಾಡಿದೆ. ಹೀಗಾಗಿ ಇಂತಹ ಅಮಾಯಕರ ಬದುಕು ಇಂದಿಗೂ ಬದಲಾಗಿಲ್ಲ’ ಎಂದು ಬಿಳ್ಳೂರು ನಿವಾಸಿ ಅವಿನಾಶ್‌ ಅಸಮಾಧಾನ ವ್ಯಕ್ತಪಡಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.