ADVERTISEMENT

ಅದ್ಧೂರಿ ಸಂಗೀತೋತ್ಸವಕ್ಕೆ ವೈಭವದ ತೆರೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 4:30 IST
Last Updated 4 ಜುಲೈ 2012, 4:30 IST
ಅದ್ಧೂರಿ ಸಂಗೀತೋತ್ಸವಕ್ಕೆ ವೈಭವದ ತೆರೆ
ಅದ್ಧೂರಿ ಸಂಗೀತೋತ್ಸವಕ್ಕೆ ವೈಭವದ ತೆರೆ   

ಚಿಂತಾಮಣಿ: ತಾಲೂಕಿನ ಕೈವಾರದ ಯೋಗಿನಾರೇಯಣ ಮಠದಲ್ಲಿ ಹಮ್ಮಿಕೊಂಡಿದ್ದ ಗುರುಪೂಜಾ ಸಂಗೀತೋತ್ಸವಕ್ಕೆ ಮಂಗಳವಾರ ವೈಭವದ ತೆರೆಬಿತ್ತು. ಧರೆಗಿಳಿದಿದ್ದ `ನಾದಲೋಕ~ಕ್ಕೆ ಸಂಗೀತಾಸಕ್ತರು ಹಾಗೂ ಭಕ್ತರು ಮನಸೋತರು.

 ವಿಶ್ವ ಖ್ಯಾತೀಯ ಸಂಗೀತ ವಿದ್ವಾಂಸರು, ಸಾವಿರಾರು ಭಜನಾ ತಂಡದ ನಿರಂತರ 72 ಗಂಟೆಗಳ ಕಾಲ ಸಂಗೀತ ಸೇವೆ ಎಲ್ಲರ ಮನ ತಣಿಸಿತು.

 ಗುರುಪೌರ್ಣಮಿ ಪ್ರಯುಕ್ತ ಮಂಗಳವಾರ ಯೋಗಿ ನಾರೇಯಣ ಯತೀಂದ್ರ ತಾತಯ್ಯನವರಿಗೆ ಅಭಿಷೇಕ, ರಾಜೋಪಚಾರ, ಅಷ್ಟಾವಧಾನ ಸೇವೆ ಸಮಿರ್ಪಿಸಲಾಯಿತು. ಬೆಳಗ್ಗಿಯಿಂದಲೇ  ದೇಗುಲದಲ್ಲಿ ಪೂಜಾ ಕೈಕಂರ್ಯ ಶಾಸ್ತ್ರೋಕ್ತವಾಗಿ ಹಾಗೂ ಸಾಂಗೋಪಾಂಗವಾಗಿ ನಡೆದವು.

ಮಲ್ಲಾಡಿ ಸಹೋದರರ ಗಾಯನಕ್ಕೆ ಪಕ್ಕವಾದ್ಯದಲ್ಲಿ ಎಂಬಾರ್ ಎಸ್.ಕಣ್ಣನ್ ಪಿಟೀಲು ಮತ್ತು ಮನ್ನಾರ್‌ಗುಡಿ ಈಶ್ವರನ್ ಮೃದಂಗದ ಸಾಥ್ ನೀಡಿದರು.

ಉತ್ಸವದಲ್ಲಿ ತಾತಯ್ಯನವರಿಗೆ ವಿವಿಧ ಫಲ ಪುಷ್ಪ, ಪುನುಗು, ಜವ್ವಾಜಿ ಕೇಸರಿ ಗೋರೋಜನ ಛತ್ರ ಚಮರಾದಿ ಗಳೊಂದಿಗೆ ಪೂಜೆ ನಡೆಯಿತು.  ಆಂಧ್ರಪ್ರದೇಶ, ತಮಿಳುನಾಡು ಇತರೆ ಸ್ಥಳದಿಂದ ಬಂದಿದ್ದ ಸಾವಿರಾರು ಭಕ್ತರು ಗುರುಪೂಜೆಯಲ್ಲಿ ಭಾಗವಹಿಸಿದ್ದರು.

ಯೋಗಿನಾರೇಯಣ ತಾತಯ್ಯ ವಿರಚಿತ ಕೃತಿಗಳ ಗೋಷ್ಠಿ ಗಾಯನ ಏರ್ಪಡಿಸಲಾಗಿತ್ತು. ಎಸ್.ವಿ.ಗಿರಿಧರ್ ನೇತೃತ್ವದಲ್ಲಿತಾಳವಾದ್ಯ ಕಛೇರಿ, ತಿರುಪತಿ ಬಿ.ರಘುನಾಥ್, ಎಂ.ಎಸ್.ವಿದ್ಯಾ, ವಿನಯ್, ಬೆಂಗಳೂರು ಸಹೋದರರಾದ ಅಶೋಕ್ ಹರಿಹರನ್, ಆರ್.ಎಸ್.ರಮಾಕಾಂತ್, ಅಮೃತಾ ವೆಂಕಟೇಶ್ ಅವರಿಂದ ಗಾಯನ ಸಮರ್ಪಣೆ ಮಾಡಲಾಯಿತು.

ಸಂಜೆ ವಿದ್ಯಾಭೂಷಣ್ ಅವರ ಗಾಯನ ಶ್ರೋತೃಗಳ ಮನಸೂರೆಗೊಂಡಿತು. ರುದ್ರಪಟ್ಣಂ ಸಹೋದರರಾದ ಆರ್.ಎನ್.ತ್ಯಾಗರಾಜ್, ರಮಾಕಾಂತ್ ಅವರ ಗಾಯನ, ಸರಸ್ವತಿ ರಾಜಗೋಪಾಲನ್ ದೆಹಲಿ ಅವರ ವೀಣಾವಾದನ, ವೆನ್ನಕೋಟಿ ರಾಮಕುಮಾರಿ ಅವರಿಂದ ಹರಿಕಥೆ, ತುಮಕೂರು ಸಾಗರ್ ತಂಡದವರಿಂದ ಭರತನಾಟ್ಯ ಮನಮೋಹಕವಾಗಿತ್ತು.

ಮೂರು ದಿನ ನಡೆದ ಸಂಗೀತ ಜಾತ್ರೆ ಭಕ್ತರ ಜನಮಾನಸದಲ್ಲಿ ನೆಲೆಯೂರಿತು. ಸಾವಿರಾರು ಭಜನಾ ತಂಡಗಳು ಮಠದ ಆವರಣದಲ್ಲಿ ಗುಂಪುಗಳಾಗಿ ಭಜನೆ, ಕೋಲಾಟಗಳಲ್ಲಿ ಭಾವಪರವಶರಾಗಿ ಹಗಲು, ರಾತ್ರಿ ಎನ್ನದೆ ಹಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಾದಸುಧಾರಸ ಸಂಕೀರ್ತನಾ ಯೋಜನೆ ಸಂಚಾಲಕರಾದ ಬಾಲಕೃಷ್ಣ ಭಾಗವತರ್ ಸಂಗೀತ ಕಾರ್ಯಕ್ರಮ ಆಯೋಜನೆಯ ನೇತೃತ್ವ ವಹಿಸಿದ್ದರು.  ಟ್ರಸ್ಟ್ ಉಪಾಧ್ಯಕ್ಷರಾದ ವಿಭಾಕರರೆಡ್ಡಿ ಹಾಗೂ ಸದಸ್ಯರು,  ವಕೀಲ ಶ್ರೀನಾಥ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.