ADVERTISEMENT

ಅನಂತಪದ್ಮನಾಭನ ದರ್ಶನಕ್ಕೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 8:30 IST
Last Updated 12 ಸೆಪ್ಟೆಂಬರ್ 2011, 8:30 IST
ಅನಂತಪದ್ಮನಾಭನ ದರ್ಶನಕ್ಕೆ ಜನಸಾಗರ
ಅನಂತಪದ್ಮನಾಭನ ದರ್ಶನಕ್ಕೆ ಜನಸಾಗರ   

ಶಿಡ್ಲಘಟ್ಟ: ಸುತ್ತ ಬೆಟ್ಟಗಳ ಸಾಲು, ನೀರು ತುಂಬಿರುವ ಕೆರೆ, ಎಲ್ಲೆಡೆಯೂ ಹಸಿರು ಗಿಡ ಮರಗಳು, ಅಲ್ಲಲ್ಲಿ ರಕ್ತವರ್ಣದ ಪುಷ್ಪಗಳನ್ನು ಅರಳಿಸಿ ನಿಂತಿರುವ ಮುತ್ತುಗದ ಮರಗಳು ಒಂದೆಡೆಯಿದ್ದರೆ, ಸಾಗರೋಪಾದಿಯಲ್ಲಿ ರಾಜ್ಯ ದೆಲ್ಲೆಡೆಯಿಂದ ಆಗಮಿಸುತ್ತಿರುವ ಸಾವಿರಾರು ಜನರು. ಇದಕ್ಕೆ ಕಾರಣವಾಗಿದ್ದು ತಾಲ್ಲೂಕಿನ ಕಂಬಾಲಹಳ್ಳಿಯ ಒಡೆಯನ ಕೆರೆಯ ಅನಂತ ಪದ್ಮನಾಭ ಸ್ವಾಮಿ.

ಅಪಾರ ಬಂಗಾರ ಸಿಕ್ಕ ಕೇರಳದ ತಿರುವನಂತ ಪುರದ ಅನಂತಪದ್ಮನಾಭ ದೇವಾಲಯ ಬಿಟ್ಟರೆ ಅನಂತಪದ್ಮನಾಭ ಸ್ವಾಮಿ ದೇಗುಲ ಇರುವುದು ತಾಲ್ಲೂಕಿನ ಒಡೆಯನ ಕೆರೆಯಲ್ಲಿ ಮಾತ್ರ ಎಂಬ ಹೆಗ್ಗಳಿಕೆ ಇದೆ.

 ದೇಗುಲದ ಟ್ರಸ್ಟ್ ವಿನೂತನ ರೀತಿಯಲ್ಲಿ ದೇವಾಲಯದ ಸುತ್ತ ಕಟ್ಟಲು ಉದ್ದೇಶಿಸಿರುವ ರೂಪುರೇಷೆಗಳಿಂದ ಬಾರಿ ಅಪಾರ ಜನರನ್ನು ದೇಗುಲ ಆಕರ್ಷಿಸಿದೆ.

 ದೇವರ ಕೀರ್ತನೆಗಳು, ಭಜನೆ, ಸಂಗೀತ ಕಛೇರಿ, ವೇಷಧಾರಿ ಮಕ್ಕಳಿಂದ ರಾಮಾಯಣ ಗೀತ ನಾಟಕ ಪ್ರದರ್ಶನ, ಭಕ್ತರಿಗೆ ಅನ್ನಸಂತರ್ಪಣೆ, ದೇವರ ಗೀತೆಗಳ ಸಿಡಿ ಮತ್ತು ಪುಸ್ತಕಗಳ ಮಾರಾಟ, ಬತ್ತಾಸ್, ಕಡಲೆಪುರಿ, ಕರಿದ ತಿಂಡಿ ತಿನಿಸುಗಳ ಮಾರಾಟ, ಮಕ್ಕಳ ಆಟಿಕೆಗಳು, ಸೀತಾಫಲ, ಸೀಬೆಹಣ್ಣು, ಸೌತೆಕಾಯಿ, ಬಣ್ಣಬಣ್ಣದ ಬೆಲೂನುಗಳು, ಬುರ್‌ಬುರ್ ಗಂಗಮ್ಮ ಮುಂತಾದ ದೃಶ್ಯಗಳಿಂದಾಗಿ ರಮಣೀಯ ನಿಸರ್ಗದ ನಡುವೆ ಜಾತ್ರೆಯ ಸಂಭ್ರಮ ಕಂಡುಬರುತ್ತಿತ್ತು.

 ಏಳು ಹೆಡೆಯ ಸರ್ಪ ಆದಿಶೇಷ ದೇವಾಲಯದ ಆವರಣವನ್ನು ಸುತ್ತಿಕೊಂಡಿರುವಂತೆ ಕೆರೆಯಲ್ಲಿರುವ ದೇವಾಲಯದ ಸುತ್ತ ಬೃಹತ್ತಾದ ಆವರಣ ಮತ್ತು ಏಳು ಹೆಡೆಯ ಸರ್ಪದ ಗೋಪುರವನ್ನು ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಟ್ರಸ್ಟ್ ಕಾರ್ಯಾರಂಭ ಮಾಡಿದೆ. ದೇವಾಲಯಕ್ಕೆ ಹೋಗುವ ನಾಲ್ಕು ಪ್ರಮುಖ ದಾರಿಗಳಲ್ಲಿ ಮಹಾದ್ವಾರಗಳ ನಿರ್ಮಾಣ, ವೃದ್ಧಾಶ್ರಮ, ಅನಾಥಾಶ್ರಮ, ಯೋಗ, ಸಂಸ್ಕೃತ ಆಗಮ ವೇದ ಪಾಠಶಾಲೆ, ಗೋಶಾಲೆ, ಅನ್ನ ಅಕ್ಷರ ಆಶ್ರಯ ಎಂಬ ತ್ರಿವಿಧ ದಾಸೋಹ ನಿರಂತರವಾಗಿ ನಡೆಯಲು ಯೋಜನೆಗಳನ್ನು ಟ್ರಸ್ಟ್ ವತಿಯಿಂದ ರೂಪಿಸಲಾಗಿದೆ.

 `ದೇವಾಲಯವನ್ನು ನಿರ್ಮಿಸಲು ಕೆರೆಯನ್ನು ಅತಿಕ್ರಮಣಮಾಡಿರುವುದು ಸರಿಯಲ್ಲ. ಕೆರೆಯಲ್ಲಿ ಕಂಬಗಳನ್ನು ನಿರ್ಮಿಸಿ ಸೇತುವೆಯ ಮೇಲೆ ದೇವಾಲಯಕ್ಕೆ ಹೋಗುವಂತೆ ಅಥವಾ ಕೂಡಲಸಂಗಮದಲ್ಲಿ ನಿರ್ಮಿಸಿರುವ ಮಾದರಿಯಲ್ಲಿ ನಿರ್ಮಿಸಬಹುದಿತ್ತು. ಅಂತರ್ಜಲ ಹೆಚ್ಚಿಸುವ ಕೆರೆಯನ್ನೇ ದೇವಾಲಯದ ಹೆಸರಿನಲ್ಲಿ ಅತಿಕ್ರಮಣ ಮಾಡಿರುವುದು ಸರಿಯಲ್ಲ~ ಎನ್ನುತ್ತಾರೆ ಪರಿಸರವಾದಿಗಳು.

 ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮುಜರಾಯಿ ಇಲಾಖೆಯಿಂದ  ಈ ಪ್ರದೇಶದ ಅಭಿವೃದ್ಧಿಗಾಗಿ ಹಣ ಬಿಡುಗಡೆ ಮಾಡಲು ಕೋರುತ್ತೇವೆ. ಇತ್ತೀಚಿನ ವರ್ಷ ಗಳಲ್ಲಿ ಈ ದೇವಾಲಯಕ್ಕೆ ಭೇಟಿ ನೀಡುವವರು ಹೆಚ್ಚಾಗಿದ್ದಾರೆ. ಪ್ರವಾಸ ಯೋಗ್ಯ ತಾಣವನ್ನಾಗಿಸಲು ಈ ಪ್ರದೇಶದ ಅಭಿವೃದ್ಧಿ ಮಾಡಲಾಗುವುದು~ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.