ADVERTISEMENT

ಅನಿರೀಕ್ಷಿತ ಮಳೆಗೆ ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2012, 10:20 IST
Last Updated 28 ಏಪ್ರಿಲ್ 2012, 10:20 IST
ಅನಿರೀಕ್ಷಿತ ಮಳೆಗೆ ಜನಜೀವನ ಅಸ್ತವ್ಯಸ್ತ
ಅನಿರೀಕ್ಷಿತ ಮಳೆಗೆ ಜನಜೀವನ ಅಸ್ತವ್ಯಸ್ತ   

ಚಿಕ್ಕಬಳ್ಳಾಪುರ: ಎರಡು ದಿನಗಳ ಹಿಂದೆಯಷ್ಟೇ ನಗರದಲ್ಲಿ ಸುರಿದ ತುಂತುರು ಮಳೆಯು ಇಡೀ ವಾತಾವರಣವನ್ನು ತಂಪಾಗಿಸಿದ್ದಲ್ಲದೇ ಮನಸ್ಸಿಗೆ ಕೊಂಚ ನಿರಾಳಭಾವ ಮೂಡಿಸಿತ್ತು. ಆದರೆ ಶುಕ್ರವಾರ ದಿಢೀರ್‌ನೇ ಸುರಿದ ಭಾರಿ ಮಳೆಯು ಜನಜೀವನ ಅಸ್ತವ್ಯಸ್ತಗೊಳಿಸಿತು. ಬಜಾರ್ ರಸ್ತೆ, ಗಂಗಮ್ಮಗುಡಿ ರಸ್ತೆ ಸೇರಿದಂತೆ ಬಹುತೇಕ ಕಡೆ ಮಳೆ ನೀರು ಮತ್ತು ಚರಂಡಿ ನೀರು ನಿಂತ ಕಾರಣ ವಾಹನ ಸವಾರರು ಪರದಾಡಬೇಕಾಯಿತು.

ಶೆಟ್ಟಹಳ್ಳಿ ಕಾಲೊನಿ, ಎಲೆಪೇಟೆ ಸೇರಿದಂತೆ ತೆಗ್ಗು ಪ್ರದೇಶಗಳ ಬಡಾವಣೆಗಳಲ್ಲಿನ ಮನೆಗಳಲ್ಲಿ ಮಳೆ ನೀರು ಮತ್ತು ಚರಂಡಿ ನೀರು ನುಗ್ಗಿದ ಕಾರಣ ಮಹಿಳೆಯರು, ಮಕ್ಕಳು ಮನೆಗಳಿಂದ ಹೊರಬಂದರು. ಕೆಲವರು ಆತಂಕಕ್ಕೆ ಒಳಗಾದರು. ಮನೆಯೊಳಗೆ ನುಗ್ಗಿದ ನೀರನ್ನು ಹೊರಹಾಕಲು ಪ್ರಯಾಸಪಟ್ಟ ಮಹಿಳೆಯರು ಮಕ್ಕಳಿಗೆ ಧೈರ್ಯ ತುಂಬುತ್ತಿದ್ದರು.

ಬೆಳಿಗ್ಗೆಯಿಂದ ಯಥಾ ರೀತಿ ಅತಿಯಾದ ಬಿಸಿಲಿದ್ದ ಕಾರಣ ಮಳೆ ನಿರೀಕ್ಷೆ ಇರಲಿಲ್ಲ. ಆದರೆ ಮಧ್ಯಾಹ್ನ 3ರ ಸುಮಾರಿಗೆ ಕಾರ್ಮೋಡ ಆವರಿಸಿತೊಡಗಿದಂತೆ ಬಿಸಿಲಿನ ತಾಪ ಕಡಿಮೆಯಾಗತೊಡಗಿತು. ಕೆಲ ನಿಮಿಷಗಳವರೆಗೆ ತುಂತುರು ಮಳೆಯಾಯಿತು. ಆದರೆ ನೋಡು ನೋಡುತ್ತಿದ್ದಂತೆ ಜೋರಾಗಿ ಮೆಯಾಗತೊಡಗಿತು.
 
ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗಳು ಸಮೀಪದ ಅಂಗಡಿ-ಮಳಿಗೆಗಳಲ್ಲಿ ಆಶ್ರಯ ಪಡೆದರು. ವಾಹನ ಸವಾರರು ರಸ್ತೆಬದಿಗಳಲ್ಲಿ ಎಲ್ಲಿ ಬೇಕೆಂದಲ್ಲಿ ವಾಹನಗಳನ್ನು ನಿಲುಗಡೆ ಮಾಡಿ, ಮರಗಳು ಮತ್ತು ಅಂಗಡಿಗಳ ಬಳಿ ನಿಂತುಕೊಂಡರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಸಂತೆ ಬೀದಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ತಮ್ಮ ವ್ಯಾಪಾರವನ್ನು ಸ್ಥಗಿತಗೊಳಿಸಿದರು. ಬಜಾರ್ ರಸ್ತೆಯುದ್ದಕ್ಕೂ ಮಳೆ ನೀರು ನಿಂತ ಕಾರಣ ವಾಹನ ಸವಾರರು ಸುಗಮವಾಗಿ ಸಂಚರಿಸಲು ಪ್ರಯಾಸ ಪಡಬೇಕಾಯಿತು.

ಗಂಗಮ್ಮಗುಡಿ ರಸ್ತೆ, ನಗರಸಭೆ ವೃತ್ತ, ಸಾಧುಮಠದ ರಸ್ತೆ, ಹಳೆಯ ಅಂಚೆಕಚೇರಿ ರಸ್ತೆ, ಬಾಲಕಿಯರ ಶಾಲೆ ರಸ್ತೆ ಮುಂತಾದ ಕಡೆ ವಾಹನ ದಟ್ಟಣೆ ಉಂಟಾದ ಕಾರಣ ವಾಹನ ಸವಾರರು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಯಿತು.

ಹಳೆಯ ಬಸ್ ನಿಲ್ದಾಣದ ಬಳಿಯು ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಾಗೇಪಲ್ಲಿ ಮತ್ತು ಗೌರಿಬಿದನೂರು ಬಸ್ ನಿಲ್ದಾಣಗಳ ಬಳಿ ಬಸ್ ತಂಗುದಾಣವಿಲ್ಲದ ಕಾರಣ ಜನರು ಮಳೆಯಲ್ಲೇ ನೆನೆದುಕೊಂಡೇ ನಿಲ್ಲಬೇಕಾಯಿತು. ಮಳೆಯಿಂದ ತಪ್ಪಿಸಿಕೊಳ್ಳಲು ಬಹು ತೇಕ ಮಂದಿ ಬಳಿ ಛತ್ರಿಯು ಸಹ ಇರಲಿಲ್ಲ. ಟಿ.ಚನ್ನಯ್ಯ ಉದ್ಯಾನದ ಮುಂಭಾಗದ ರಸ್ತೆಯ ತಗ್ಗಿನಲ್ಲಿಯೂ ನೀರು ನಿಂತಿದ್ದರಿಂದ ವಾಹನ ಸವಾರರಿಗೆ ತೊಂದರೆಯಾಯಿತು.

`ಮಳೆಯಾದಾಗಲೆಲ್ಲ ಮನೆಯಲ್ಲಿ ನೀರು ನುಗ್ಗುತ್ತದೆ. ಇಲ್ಲಿ ಸಮರ್ಪಕವಾದ ಚರಂಡಿ ಮತ್ತು ಒಳಚರಂಡಿ ವ್ಯವಸ್ಥೆ ಮಾಡಿರದ ಕಾರಣ ರಸ್ತೆಯ ಮೇಲೆ ಮಳೆನೀರು ನಿಂತುಕೊಳ್ಳುತ್ತದೆ. ಈ ಸಮಸ್ಯೆ ಪರಿಹರಿಸುವಂತೆ ಕೋರಿ ನಗರಸಭೆಗೆ ಹಲವು ಬಾರಿ ಮನವಿಪತ್ರ ಸಲ್ಲಿಸಿದರೂ ಏನೂ ಪ್ರಯೋಜವಾಗಿಲ್ಲ. ನಮ್ಮ ಸಂಕಷ್ಟ ಯಾರ ಮುಂದೆ ಹೇಳಿಕೊಳ್ಳಬೇಕು~ ಎಂದು ಶೆಟ್ಟಹಳ್ಳಿ ಬಡಾವಣೆ ನಿವಾಸಿ ಮಂಜುನಾಥ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.