ADVERTISEMENT

ಅನಿರ್ದಿಷ್ಟಾವಧಿ ಧರಣಿ ಆರಂಭ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 6:25 IST
Last Updated 3 ಅಕ್ಟೋಬರ್ 2012, 6:25 IST
ಅನಿರ್ದಿಷ್ಟಾವಧಿ ಧರಣಿ ಆರಂಭ
ಅನಿರ್ದಿಷ್ಟಾವಧಿ ಧರಣಿ ಆರಂಭ   

ಚಿಕ್ಕಬಳ್ಳಾಪುರ: ಅಂತರ್ಜಲ ಪ್ರಮಾಣ ವೃದ್ಧಿಸುವುದು, ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸುವುದು, ಮರಳು ಗಣಿಗಾರಿಕೆ ನಿಷೇಧಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿವಿಧ ಸಂಘಸಂಸ್ಥೆಗಳ ನೇತೃತ್ವದ ಶಾಶ್ವತ ನೀರಾವರಿ ಹೋರಾಟ ಸಮಿತಿಯು ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿತು.

ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ಆರಂಭಿಸಿದ ಸದಸ್ಯರು, `ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರವು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಧರಣಿಯನ್ನು ಗಂಭೀರವಾಗಿ ಪರಿಗಣಿಸಿ ಬೇಡಿಕೆಗಳ ಈಡೇರಿಕೆಗೆ ಶೀಘ್ರವೇ ಕ್ರಮ ಜರುಗಿಸಬೇಕು~ ಎಂದರು.

ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, `ಶಾಶ್ವತ ನೀರಾವರಿ ಯೋಜನೆಗಾಗಿ ಜಿಲ್ಲೆಯಲ್ಲಿ ಬಹುವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಸರ್ಕಾರವು ನಿರ್ಲಕ್ಷ್ಯ ಮತ್ತು ನಿರಾಸಕ್ತಿ ಧೋರಣೆ
ಅನುಸರಿಸುತ್ತಿರುವುದರಿಂದಲೇ ಜಿಲ್ಲೆಯಲ್ಲಿ ಇದುವರೆಗೆ ಯೋಜನೆ ಜಾರಿಗೊಂಡಿಲ್ಲ~ ಎಂದು ಆರೋಪಿಸಿದರು.

`ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ, ಸಚಿವರೆಲ್ಲ ಈವರೆಗೆ ಭರವಸೆಗಳ ಮಹಾಪೂರವನ್ನೇ ಹರಿಸಿದ್ದಾರೆಯೇ ಇಲ್ಲಿ ಶಾಶ್ವತವಾಗಿ ನೀರು ಹರಿಸುವ ಬಗ್ಗೆ ಯಾವುದೇ ಕ್ರಮವನ್ನು ಜರುಗಿಸಿಲ್ಲ. ಬಯಲುಸೀಮೆ ಬರಪೀಡಿತ ಜಿಲ್ಲೆಗಳ ಜನರ ಕಡೆಗೂ ಸರ್ಕಾರದವರು ಕೊಂಚ ಗಮನಹರಿಸಬೇಕು~ ಎಂದು ಒತ್ತಾಯಿಸಿದರು.

ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಮಾತನಾಡಿ, `ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೈಗೊಳ್ಳಲಾಗಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ವಿವಿಧ ಸಂಘಸಂಸ್ಥೆಗಳ ಮುಖಂಡರು ಮತ್ತು ಸದಸ್ಯರು ಭಾಗವಹಿಸಲಿದ್ದಾರೆ. ಬೇಡಿಕೆ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು~ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ, ರೈತ ಮುಖಂಡರಾದ ಯಲುವಹಳ್ಳಿ ಎನ್.ರಮೇಶ್, ಯಲುವಹಳ್ಳಿ ಸೊಣ್ಣೇಗೌಡ, ಬಿಜೆಪಿ ಮುಖಂಡ ಅಗಲಗುರ್ಕಿ ಚಂದ್ರಶೇಖರ್, ಕ್ರೀಡಾಪಟು ಮಂಚನಬಲೆ ಕೆ.ಶ್ರೀನಿವಾಸ್, ಜೀತ ವಿಮುಕ್ತಿ ಕರ್ನಾಟಕ ಸಂಘಟನೆಯ ರತ್ನಮ್ಮ, ರಾಣಿ  ಅಬ್ಬಕ್ಕ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಷ್ಮಾ ಶ್ರೀನಿವಾಸ್ ಅವರುಗಳು ಅನಿರ್ದಿಷ್ಟಾವಧಿ  ಧರಣಿ ಯಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.