ADVERTISEMENT

ಆಮದು ರೇಷ್ಮೆ ತೆರಿಗೆ ಇಳಿಕೆ:ಖಂಡನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2011, 8:40 IST
Last Updated 1 ಮಾರ್ಚ್ 2011, 8:40 IST

ಚಿಂತಾಮಣಿ: ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ರೇಷ್ಮೆ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರವು  ಶೇ.31ರಿಂದ ಶೇ. 5ಕ್ಕೆ ಇಳಿಸಿದ ಪರಿಣಾಮವೇ ರಾಜ್ಯದಲ್ಲಿ ಎರಡು ದಿನಗಳಿಂದ ರೇಷ್ಮೆ ಬೆಲೆಯಲ್ಲಿ ದಿಢೀರ್ ಕುಸಿತ ಉಂಟಾಗಲು ಕಾರಣ ಎಂದು ರಾಜ್ಯ ಪ್ರಾಂತ ರೈತ ಸಂಘದ ಕೇಂದ್ರ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಬೈಯ್ಯಾರೆಡ್ಡಿ  ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕೂಡಲೇ ಈ ಹಿಂದಿನ ತೆರಿಗೆಯನ್ನೇ ಮುಂದುವರೆಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಸುಂಕರಹಿತವಾಗಿ ವಿದೇಶಿ ರೇಷ್ಮೆಯನ್ನು ಆಮದು ಮಾಡಿಕೊಳ್ಳುತ್ತಿರುವ ಹಿಂದೆ ದೇಶದ ರೇಷ್ಮೆ ಕೃಷಿಯನ್ನು ನಾಶಪಡಿಸುವ ಸಂಚು ಅಡಗಿದೆ ಎಂದ ಅವರು, 2 ದಿನಗಳಲ್ಲೆ ಕೆ.ಜಿ.ರೇಷ್ಮೆ ಗೂಡಿಗೆ 100 ರಿಂದ 125 ರೂಪಾಯಿ ಕುಸಿದಿದೆ. ರಾಜ್ಯ ಸರ್ಕಾರ ಕೂಡಲೇ ರೇಷ್ಮೆ ಬೆಳೆಗಾರರು, ರೀಲರ್‌ಗಳು, ಉದ್ಯಮಿಗಳ ಸಭೆ ಕರೆದು ಸಮಾಲೋಚಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರವು ಬೆಲೆ ಕುಸಿತವನ್ನು ಲಘುವಾಗಿ ಪರಿಗಣಿಸಿದೆ, ಇದನ್ನು ಗಂಭೀರವಾಗಿ ತೆಗೆದುಕೊಂಡು ಪರಿಸ್ಥಿತಿಯನ್ನು ನಿಭಾಯಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತಿಸಬೇಕು. ಬೆಲೆಯನ್ನು ಸ್ಥಿರೀಕರಿಸುವ ಸಲುವಾಗಿ ಕೆಎಸ್‌ಎಂಡಿ ಮೂಲಕ ನೇರವಾಗಿ ರೇಷ್ಮೆ ಗೂಡನ್ನು ಖರೀದಿಸಬೇಕು. ಇದಕ್ಕೆ ಅಗತ್ಯವಾದ ಹಣಕಾಸಿನ ನೆರವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ತೆರಿಗೆ ಕಡಿಮೆ ಮಾಡುವ ಪ್ರಸ್ತಾವ ಮಾತ್ರ ಮಾಡಿದೆ, ಆದರೆ ರೇಷ್ಮೆ ಉದ್ಯಮದಲ್ಲಿನ ಲಾಬಿ, ದೊಡ್ಡ ದೊಡ್ಡ ಶ್ರೀಮಂತರು ಕಪ್ಪು ಹಣದ ಮೂಲಕ ಇಡೀ ಉದ್ಯಮವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಕೃತಕವಾಗಿ ಬೆಲೆ ಕುಸಿಯುವಂತೆ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಬಚ್ಚೇಗೌಡರಿಗೆ ನಿಜವಾಗಿ ರೈತರ ಮೇಲೆ ಆಸಕ್ತಿ ಇದ್ದರೆ ಉದ್ಯಮವನ್ನು ಹಿಡಿತದಲ್ಲಿಟ್ಟುಕೊಂಡಿರುವವರ ಮೇಲೆ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.

ದೇಶದಲ್ಲಿ ಸುಮಾರು 19 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ 50ರಷ್ಟಾಗಿದೆ. ರಾಜ್ಯದ ಉತ್ಪಾದನೆಯಲ್ಲಿ ಅರ್ಧದಷ್ಟು ಉತ್ಪಾದನೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಆಗುತ್ತಿದೆ.

ಲಕ್ಷಾಂತರ ರೈತರು, ಕೂಲಿ ಕಾರ್ಮಿಕರು, ರೀಲರ್ ಮುಂತಾದವರ ಜೀವನಾಧಾರವಾಗಿರುವ ರೇಷ್ಮೆ ಉದ್ದಿಮೆ ಉಳಿಸಿಕೊಳ್ಳಲು ಪ್ರಾಂತ ರೈತ ಸಂಘ ಹೋರಾಟ ರೂಪಿಸಲಿದೆ ಎಂದು ಮಾಹಿತಿ ನೀಡಿದರು.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಗೋಪಿನಾಥ್, ಹಣವಂತರ ಲಾಬಿಗೆ ಸರ್ಕಾರ ಸಹಕಾರ ನೀಡುತ್ತಿದೆ. ಸರ್ಕಾರ ರೈತರ ಪರವಾಗಿ ಬೊಗಳೆ ಬಿಡುವುದರ ಬದಲಾಗಿ ಕ್ರಮಕೈಗೊಳ್ಳಬೇಕು. ಕೇವಲ ಕಣ್ಣೋರೆಸುವ ತಂತ್ರ ಬೇಡ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.