ADVERTISEMENT

ಇಂದಿರಾ ಕ್ಯಾಂಟೀನ್‌ಗೆ ನೀತಿ ಸಂಹಿತೆ ‘ಬಿಸಿ’

ತರಾತುರಿಯಲ್ಲಿ ನಡೆದ ಕಾಮಗಾರಿಗೆ ಬ್ರೇಕ್ ಹಾಕಿದ ಚುನಾವಣೆ, ಕಡಿಮೆ ಬೆಲೆ ಊಟ ಮತ್ತು ಉಪಾಹಾರ ಸವಿಯುವವರ ಕನಸಿಗೆ ತಾತ್ಕಾಲಿಕ ತಡೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 7:01 IST
Last Updated 9 ಏಪ್ರಿಲ್ 2018, 7:01 IST

ಚಿಕ್ಕಬಳ್ಳಾಪುರ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ನಿರ್ಮಾಣ ಹಂತ ದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಚುನಾವಣೆಯ ನೀತಿ ಸಂಹಿತೆಯ ಬಿಸಿ ತಟ್ಟಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಶುಚಿ ರುಚಿಯಾದ ಊಟ, ಉಪಾಹಾರ ಸವಿಯಲು ಆಸೆಪಟ್ಟ ಕಾರ್ಮಿಕರು, ಬಡಜನರಿಗೆ ನಿರಾಸೆಯಾಗಿದೆ.

ಎಪಿಎಂಸಿ ಕ್ಯಾಂಟೀನ್ ತೆರೆದರೆ ಸಾಕಷ್ಟು ಜನರಿಗೆ ಪ್ರಯೋಜನವಾಗಲಿದೆ ಎಂದು ನಿರ್ಧರಿಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಅಂಚೆ ಇಲಾಖೆಗೆ ಮೀಸಲಾಗಿಡಲಾಗಿದ್ದ ಜಾಗವನ್ನು ಜನವರಿ ಕೊನೆಯ ವಾರದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಹಸ್ತಾಂತರಿಸಲಾಗಿತ್ತು.

ಫೆಬ್ರುವರಿ ಮೊದಲ ವಾರದಲ್ಲಿ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ದೆಹಲಿ ಮೂಲದ ಕಂಪನಿಯೊಂದಕ್ಕೆ ನಿರ್ಮಾಣ ಮತ್ತು ನಿರ್ವಹಣೆ ಗುತ್ತಿಗೆ ನೀಡಲಾಗಿದೆ. ಈಗಾಗಲೇ ತ್ವರಿತಗತಿಯಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಕೆಲವೇ ದಿನಗಳಲ್ಲಿ ಕ್ಯಾಂಟೀನ್‌ ಕಾರ್ಯಾರಂಭ ಮಾಡಲಿದೆ ಎನ್ನುವ ಹೊತ್ತಿಗೆ ನೀತಿ ಸಂಹಿತೆ ಘೋಷಣೆಯಾಯಿತು.

ADVERTISEMENT

ಸದ್ಯ ಕ್ಯಾಂಟೀನ್‌ ಕಾಮಗಾರಿ ಸ್ಥಗಿತಗೊಂಡಿದೆ. ಕಟ್ಟಡ ಹೊರಗೋಡೆಯಲ್ಲಿರುವ ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಮುಸುಕು ಹೊದಿಸಲಾಗಿದೆ. ನನೆಗುದಿಗೆ ಬಿದ್ದಿರುವ ಕಾಮಗಾರಿ ಪೂರ್ಣಗೊಂಡು ಕ್ಯಾಂಟೀನ್ ಯಾವಾಗ ಕಾರ್ಯಾರಂಭ ಮಾಡುತ್ತದೆ ಎನ್ನುವುದಕ್ಕೆ ಸದ್ಯ ಯಾರಲ್ಲಿಯೂ ಉತ್ತರವಿಲ್ಲ.

‘ಮಾರುಕಟ್ಟೆಯಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಗೊಂಡರೆ ರೈತರು, ಕಾರ್ಮಿಕರಿಗೆ ಕಡಿಮೆ ದರದಲ್ಲಿ ಊಟ ಹಾಗೂ ಉಪಾಹಾರ ಸಿಗುತ್ತದೆ. ಅದರಲ್ಲೂ ದೂರದಿಂದ ಬಂದ ರೈತರು ಮಾರುಕಟ್ಟೆಯಿಂದ ಮನೆಗೆ ಹೋಗಲು ಇಡೀ ದಿನ ಕಳೆದು ಹೋಗುತ್ತದೆ. ಅಂತಹವರಿಗೆ ಕ್ಯಾಂಟೀನ್‌ನಿಂದ ಅನುಕೂಲವಾಗಲಿದೆ’ ಎಂದು ಹೇಳುವರು ಚೀಡಚಿಕ್ಕನಹಳ್ಳಿ ರೈತ ಮಂಜುನಾಥ್‌.

‘ರಾಜ್ಯ ಸರ್ಕಾರ ಬೆಂಗಳೂರಿಗಿಂತ ಮೊದಲು ಜಿಲ್ಲಾ ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಬೇಕಿತ್ತು. ಜಿಲ್ಲೆಯಲ್ಲಿ ಈವರೆಗೂ ಒಂದೇ ಒಂದು ಕ್ಯಾಂಟೀನ್‌ ಆರಂಭವಾಗಿಲ್ಲ ಎನ್ನುವುದು ಬೇಸರದ ಸಂಗತಿ’ ಎಂದು ಹೇಳಿದರು.

‘ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕ್ಯಾಂಟೀನ್‌ ನಿರ್ಮಿಸಲಾಗುತ್ತಿದೆ. ಆರಂಭವಾಗುವ ಕೊನೆ ಕ್ಷಣದಲ್ಲಿ ನೀತಿ ಸಂಹಿತೆ ಬಿಸಿ ತಟ್ಟಿದ್ದು ಬೇಸರ ತಂದಿದೆ. ಬೇಗ ಕ್ಯಾಂಟೀನ್ ಆರಂಭಿಸಿದರೆ ಹಸಿವಿನಿಂದ ಬಳಲುವ ಬಡವರಿಗೆ ಪ್ರಯೋಜನವಾಗುತ್ತದೆ’ ಎಂದು ಚದಲಪುರ ರೈತ ಕಿರಣ್‌ ತಿಳಿಸಿದರು.

‘ಜಿಲ್ಲೆಯ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್‌ ತೆರೆಯಲಾಗುತ್ತಿದೆ. ಅದರ ನಿರ್ಮಾಣದ ಜಾಗದ ತೀರ್ಮಾನ ತೆಗೆದುಕೊಳ್ಳುವಲ್ಲಿ ವಿಳಂಬವಾದ ಕಾರಣಕ್ಕೆ ಸಮಸ್ಯೆಯಾಗಿದೆ. ಚುನಾವಣೆ ನೀತಿ ಸಂಹಿತೆ ಮುಗಿಯುತ್ತಿದಂತೆ ಕ್ಯಾಂಟೀನ್‌ ಕಾರ್ಯಾರಂಭ ಮಾಡಲಿವೆ’ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

**

ಬೆಂಗಳೂರಿನಲ್ಲಿ ಕ್ಯಾಂಟೀನ್‌ಗಳು ಬಾಗಿಲು ಮುಚ್ಚಿಲ್ಲ. ಹಾಗಿದ್ದ ಮೇಲೆ ತಾಲ್ಲೂಕು ಕೇಂದ್ರಗಳಲ್ಲಿನ ಕ್ಯಾಂಟೀನ್‌ಗಳಿಗೆ ಏಕೆ ತಡೆ ಹಾಕಿದರೋ ತಿಳಿಯುತ್ತಿಲ್ಲ – ಅವಿನಾಶ್, ಪ್ರಶಾಂತ್ ನಗರ ನಿವಾಸಿ.

**

ಕೆಂಪೇಗೌಡ ಎನ್.ವೆಂಕಟೇನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.