ADVERTISEMENT

ಉದ್ಯಾನ ಸಮಗ್ರ ಅಭಿವೃದ್ಧಿ ಶೀಘ್ರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 12:34 IST
Last Updated 22 ಜೂನ್ 2013, 12:34 IST
ಚಿಕ್ಕಬಳ್ಳಾಪುರ ಹಳೆ ಬಸ್ ನಿಲ್ದಾಣದ ಬಳಿಯಿರುವ ಟಿ.ಚನ್ನಯ್ಯ ಉದ್ಯಾನವನ್ನು ನಿರ್ಮಿತಿ ಕೇಂದ್ರ ಅಭಿವೃದ್ಧಿಪಡಿಸುತ್ತಿದ್ದು, ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಚಿಕ್ಕಬಳ್ಳಾಪುರ ಹಳೆ ಬಸ್ ನಿಲ್ದಾಣದ ಬಳಿಯಿರುವ ಟಿ.ಚನ್ನಯ್ಯ ಉದ್ಯಾನವನ್ನು ನಿರ್ಮಿತಿ ಕೇಂದ್ರ ಅಭಿವೃದ್ಧಿಪಡಿಸುತ್ತಿದ್ದು, ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ.   

ಚಿಕ್ಕಬಳ್ಳಾಪುರ: ನೀರು ಪೂರೈಕೆ ಮತ್ತು ಸೌಕರ್ಯ ಕೊರತೆಯಿಂದ ಚೈತನ್ಯವನ್ನೇ ಕಳೆದುಕೊಂಡಂತಿದ್ದ ನಗರದ ಟಿ.ಚನ್ನಯ್ಯ ಉದ್ಯಾನಕ್ಕೆ ಜೀವ ತುಂಬುವ ಪ್ರಯತ್ನ ನಡೆದಿದ್ದು, ಕೆಲವೇ ದಿನಗಳಲ್ಲಿ ಹಸಿರಾದ ವಾತಾವರಣದಿಂದ ಕಂಗೊಳಿಸಲಿದೆ.

ಉದ್ಯಾನ ಅಭಿವೃದ್ಧಿ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರ ವಹಿಸಿಕೊಂಡಿದ್ದು, ಒಂದು ತಿಂಗಳ ಅವಧಿಯೊಳಗೆ ಪೂರ್ಣಪ್ರಮಾಣದಲ್ಲಿ ಸಿದ್ಧಗೊಳ್ಳುವ ನಿರೀಕ್ಷೆಯಿದೆ. ಉದ್ಯಾನವನ್ನು ಆಕರ್ಷಣೀಯವಾಗಿಸುವ ಉದ್ದೇಶದಿಂದ ಬಗೆಬಗೆ ವಿನ್ಯಾಸಗಳಲ್ಲಿ ಹೂ- ಗಿಡಗಳನ್ನು ಬೆಳೆಸಲಾಗುತ್ತಿದೆ.

ಸುಮಾರು 11 ಲಕ್ಷ ರೂಪಾಯಿ ವೆಚ್ಚದಲ್ಲಿ ಉದ್ಯಾನ ಅಭಿವೃದ್ಧಿಪಡಿಸುತ್ತಿದ್ದು, ಜಿಲ್ಲಾಡಳಿತ ಈಗಾಗಲೇ ಅಗತ್ಯ ಅನುದಾನ ಬಿಡುಗಡೆ ಮಾಡಿದೆ. ಇನ್ನಷ್ಟು ಅನುದಾನ ಬಿಡುಗಡೆಯಾಗಬೇಕಿದೆ. ಜೆಸಿಬಿ ವಾಹನ, ಅತ್ಯಾಧುನಿಕ ಸಾಧನ ಮತ್ತು ಕುಶಲಕರ್ಮಿಗಳನ್ನು ಬಳಸಿಕೊಂಡು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಉದ್ಯಾನದ ನವೀಕರಣ ಕಾರ್ಯ ಶೇ 80ರಷ್ಟು ಪೂರ್ಣಗೊಳಿಸಿದ್ದಾರೆ. ಅಗತ್ಯ ಅನುದಾನ, ಸಾಧನಗಳು ಮುಂತಾದವು ಸಕಾಲಕ್ಕೆ ಲಭ್ಯವಾದಲ್ಲಿ ಅಭಿವೃದ್ಧಿ ಕಾಮಗಾರಿ ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸುವ ವಿಶ್ವಾಸ ನಿರ್ಮಿತಿ ಕೇಂದ್ರದವರು ಹೊಂದಿದ್ದಾರೆ.

`ಉದ್ಯಾನ ನವೀಕರಣ ಸುಲಭ ಸಂಗತಿಯಾಗಿರಲಿಲ್ಲ. ಕೊಳವೆಬಾವಿ ದುರಸ್ತಿಯಲ್ಲಿದ್ದ ಕಾರಣ ನೀರು ಲಭ್ಯವಿರಲಿಲ್ಲ. ಸಮೀಪದಲ್ಲೇ ನೀರಿನ ವ್ಯವಸ್ಥೆ ಮಾಡಿಕೊಂಡೆವು. ಹೂವಿನ ಗಿಡಗಳನ್ನು ನೆಟ್ಟೆವು. ನಂತರ ಹನಿ ನೀರಾವರಿ ಮೂಲಕ ನೀರುಣಿಸಿದೆವು.

ಉದ್ಯಾನದ ನಾಲ್ಕು ದಿಕ್ಕುಗಳಲ್ಲಿಯೂ ಮೆಟ್ಟಿಲು ಆಕಾರದ ವಿನ್ಯಾಸ ಮಾಡಿದ್ದೇವೆ. ಅಲ್ಲಲ್ಲಿ ವಿವಿಧ ಬಣ್ಣದ ಹೂಗಳನ್ನು ಬೆಳೆಸುತ್ತೇವೆ. ಚೆಂದನೆ ಹುಲ್ಲುಹಾಸು, ಬೃಹದಾಕಾರದ ಆಕರ್ಷಕ ಕಲ್ಲುಗಳ್ನು ಅಚ್ಚುಕಟ್ಟಾಗಿ ಜೋಡಿಸಿಡುತ್ತೇವೆ' ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದರು.

ನಿರೀಕ್ಷಿತ ಮಟ್ಟದಲ್ಲಿ ಉದ್ಯಾನ ಅಭಿವೃದ್ಧಿಪಡಿಸಿದರೆ ಸಾಲದು, ಅದರ ನಿರ್ವಹಣೆಯೂ ತುಂಬ ಮುಖ್ಯ. ಉದ್ಯಾನ ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿಪಡಿಸಿ ಜಿಲ್ಲಾಡಳಿತಕ್ಕೆ ಒಪ್ಪಿಸುತ್ತೇವೆ. ಯಾವ ಇಲಾಖೆಗಾದರೂ ಅವರು ನಿರ್ವಹಣೆಗೆ ಕೊಡಬಹುದು. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಪುನರ್‌ನಿರ್ಮಾಣಗೊಂಡ ಉದ್ಯಾನಕ್ಕೆ ಸೂಕ್ತ ನಿರ್ವಹಣೆ ಬೇಕು ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.