ADVERTISEMENT

ಉದ್ಯೋಗ ಖಾತ್ರಿ ಶೀಘ್ರ ಆರಂಭ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 8:45 IST
Last Updated 21 ಏಪ್ರಿಲ್ 2012, 8:45 IST

ಚಿಕ್ಕಬಳ್ಳಾಪುರ: `ಜಿಲ್ಲೆಯಾದ್ಯಂತ ಬರಗಾಲ ತಲೆದೋರಿದ್ದು, ಗ್ರಾಮಸ್ಥರು ಗುಳೆ ಹೋಗುತ್ತಿದ್ದಾರೆ. ಬೆಳೆ ಮತ್ತು ಉದ್ಯೋಗಾವಕಾಶವಿಲ್ಲದೇ ಜನರು ಕಂಗಾಲಾಗಿದ್ದಾರೆ. ಈಗಲಾದರೂ ಮಹಾತ್ಮ ಗಾಂಧಿ ಗ್ರಾಮಿಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು.
 
ಎಲ್ಲರಿಗೂ ಉದ್ಯೋಗ ದೊರೆಯುವಂತಹ ವಾತಾವರಣ ನಿರ್ಮಾಣವಾಗಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಬಾರದು~ ಎಂದು ಕೇಂದ್ರ ಕಂಪನಿ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, `ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಲ್ಲಿ, ಬರಗಾಲದ ಬಹುತೇಕ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ~ ಎಂದರು.

`ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳಬೇಕು. ಯೋಜನೆ ಅನುಷ್ಠಾನಗೊಳಿಸದ ಮತ್ತು ಉದ್ಯೋಗಾವಕಾಶ ಕಲ್ಪಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕನಿಷ್ಠ ಒಂದು ವಾರದೊಳಗೆ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಗೊಳ್ಳಬೇಕು. ಗ್ರಾಮಸ್ಥರಿಗೆ ಉದ್ಯೋಗ ದೊರೆಯಬೇಕು~ ಎಂದು ಅವರು ಸೂಚಿಸಿದರು.

`ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ನಿಷೇಧಿಸಲಾಗಿದೆಯಾದರೂ ದುಬಾರಿ ದರಕ್ಕೆ ಮಾರಲಾಗುತ್ತಿದೆ. ಒಂದು ಟ್ರ್ಯಾಕ್ಟರ್ ಲೋಡ್‌ನಷ್ಟು ಮರಳು 1,800 ರೂಪಾಯಿಗೆ ಮಾರಲಾಗುತ್ತಿದೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು. ಅಕ್ರಮ ಗಣಿಗಾರಿಕೆ ಮತ್ತು ಸಾಗಾಣಿಕೆ ನಿಷೇಧ ಹೇರಲಾಗಿದೆ~ ಎಂದು ಅವರು ತಿಳಿಸಿದರು.

`ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದ್ದು, ರಸ್ತೆಗಳ ನಿರ್ವಹಣೆಗೂ ವಿಶೇಷ ಗಮನ ನೀಡಬೇಕು. ಆರಂಭದಲ್ಲಿ ಕಾಮಗಾರಿ ಕೈಗೊಂಡು ಕೊನೆಗೆ ನಿರ್ವಹಣೆಯನ್ನೂ ಮಾಡದೇ ನಿರಾಸಕ್ತಿ ತೋರುವುದು ಸರಿಯಲ್ಲ~ ಎಂದು ಅವರು ತಿಳಿಸಿದರು.

ಶಾಸಕರಾದ ಎನ್.ಎಚ್.ಶಿವಶಂಕರ ರೆಡ್ಡಿ, ಕೆ.ಪಿ.ಬಚ್ಚೇಗೌಡ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ, ಉಪವಿಭಾಗಾಧಿಕಾರಿ ಸತೀಶ್‌ಕುಮಾರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.