ADVERTISEMENT

ಉಪಾಧ್ಯಕ್ಷೆ ವಿರುದ್ಧ ಅವಿಶ್ವಾಸ ಮಂಡನೆ ಇಂದು

ರಾಹುಲ ಬೆಳಗಲಿ
Published 25 ಫೆಬ್ರುವರಿ 2012, 10:40 IST
Last Updated 25 ಫೆಬ್ರುವರಿ 2012, 10:40 IST

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ ಅವರ ವಿರುದ್ಧ ಜಿಲ್ಲಾ ಪಂಚಾಯಿತಿ ಸದಸ್ಯರು ಶನಿವಾರ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧರಿಸಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಅವಿಶ್ವಾಸ ನಿರ್ಣಯ ಕೈಗೊಳ್ಳಲು ಸ್ಪಷ್ಟವಾದ ಕಾರಣಗಳನ್ನು ಹೇಳದ ಜಿಲ್ಲಾ ಪಂಚಾಯಿತಿ ಸದಸ್ಯರು ದಿಢೀರನೇ ಈ ಕ್ರಮಕ್ಕೆ ಮುಂದಾಗಿದ್ದು, ಅಚ್ಚರಿ ಮೂಡಿಸಿದೆ.
 
ಉಪಾಧ್ಯಕ್ಷೆ ಸ್ಥಾನದ ಅಧಿಕಾರಾವಧಿ ಪೂರ್ಣಗೊಳ್ಳಲು ಇನ್ನೂ ಎಂಟು ತಿಂಗಳು ಬಾಕಿಯಿದ್ದು, ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಹಿಂದುಳಿದ ವರ್ಗ -ಎ (ಮಹಿಳೆ) ಮೀಸಲಾತಿಯಡಿ ಚುನಾವಣೆಯಲ್ಲಿ ಸ್ಪರ್ಧಿಸಿ ಉಪಾಧ್ಯಕ್ಷೆ ಸ್ಥಾನ ಪಡೆದ ಬಿ.ಸಾವಿತ್ರಮ್ಮ ಅವರಿಗೂ ಈ ಬೆಳವಣಿಗೆ ಆಶ್ಚರ್ಯ ಮೂಡಿಸಿದೆ. ಒಂದು ವರ್ಷದ ಕಾಲ ಮೌನವಾಗಿದ್ದ ಸದಸ್ಯರು ಯಾವ ಕಾರಣದ ಹಿನ್ನೆಲೆಯಲ್ಲಿ ತಮ್ಮ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತಿಲ್ಲ ಎಂದು ಅವರು ಹೇಳುತ್ತಾರೆ. ಅವಿಶ್ವಾಸ ಮಂಡನೆಗಾಗಿ ಸದಸ್ಯರು ಈಗಾಗಲೇ ಸಹಿ ಸಂಗ್ರಹಣೆ ಮಾಡಿದ್ದು, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ ಅವರ ಗಮನಕ್ಕೂ ತಂದಿದ್ದಾರೆ.

ಅವಿಶ್ವಾಸ ಮಂಡನೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ 11ಕ್ಕೆ ವಿಶೇಷ ಸಭೆ ಕರೆಯಲಾಗಿದ್ದು, ಸಾವಿತ್ರಮ್ಮ ಅವರಿಗೆ ನೋಟಿಸ್ ಹೊರಡಿಸಲಾಗಿದೆ. ಪ್ರಮುಖವಾದ ಈ ಸಭೆಯಲ್ಲಿ ಎಲ್ಲ ಸದಸ್ಯರು ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಲಾಗಿದೆ. ಜಿಲ್ಲಾ ಪಂಚಾಯಿತಿಯ ಎಲ್ಲ 27 ಸದಸ್ಯರು ಸಭೆಗೆ ಹಾಜರಾಗಿ, ಅವಿಶ್ವಾಸ ನಿರ್ಣಯ ಮಂಡಿಸುವುದು ಬಹುತೇಕ ಖಚಿತವಾಗಿದೆ. ಯಾವ ವಿಷಯದ ಆಧಾರದ ಮೇಲೆ ಅವಿಶ್ವಾಸ ಮಂಡಿಸಲಾಗುವುದು ಎಂಬುದರ ಬಗ್ಗೆ ಸದಸ್ಯರು ಸ್ಪಷ್ಟಪಡಿಸುತ್ತಿಲ್ಲ.

ಅವಿಶ್ವಾಸ ಮಂಡನೆಗೆ ಕಾರಣ: ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಿಪಿಎಂನಿಂದ ಸ್ಪರ್ಧಿಸಿ ಬಿ.ಸಾವಿತ್ರಮ್ಮ ಮತ್ತು ನಾರಾಯಣಮ್ಮ ಇಬ್ಬರೂ ಆಯ್ಕೆಯಾದರು. ಉಪಾಧ್ಯಕ್ಷೆ ಸ್ಥಾನವು ಹಿಂದುಳಿದ ವರ್ಗ -ಎ (ಮಹಿಳೆ) ವರ್ಗಕ್ಕೆ ಮೀಸಲಾದ ಕಾರಣ ಸಾವಿತ್ರಮ್ಮ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಜಿಲ್ಲಾ ಪಂಚಾಯಿತಿಯಲ್ಲಿ ಸಿಪಿಎಂಗೆ ಹೆಚ್ಚಿನ ಬಹುಮತ ಇಲ್ಲದಿದ್ದರೂ ಬಿ.ಸಾವಿತ್ರಮ್ಮ ಉಪಾಧ್ಯಕ್ಷೆಯಾಗಿ ಅಧಿಕಾರ ಚಲಾಯಿಸುತ್ತಿರುವುದು ಕೆಲ ಸದಸ್ಯರಿಗೆ ಅಸಮಾಧಾನ ಉಂಟು ಮಾಡಿದೆ ಎಂದು ತಿಳಿದು ಬಂದಿದೆ.

`ತಾವು ಆಯ್ಕೆಯಾದ ಕ್ಷೇತ್ರಕ್ಕೆ ಮಾತ್ರವೇ ಸೀಮಿತವಾಗುವುದರ ಬದಲು ಸಾವಿತ್ರಮ್ಮ ಇತರ ಸದಸ್ಯರ ಪಂಚಾಯಿತಿ ಕ್ಷೇತ್ರಗಳಿಗೂ ಭೇಟಿ ನೀಡುತ್ತಿರುವುದು ಕೆಲವರಿಗೆ ಕೋಪ ತರಿಸಿದೆ. ಆಯಾ ಕ್ಷೇತ್ರಗಳ ಲೋಪ-ದೋಷಗಳನ್ನು ಮತ್ತು ಸಮಸ್ಯೆಗಳನ್ನು ಬೆಳಕಿಗೆ ತರುವ ಮೂಲಕ ಅವರು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರ ವಿರುದ್ಧ ಅವಿಶ್ವಾಸ ಮಂಡನೆ ಮಾಡಿದಲ್ಲಿ, ಅವರ ಅಧಿಕಾರ ಚಲಾವಣೆಗೆ ಕಡಿವಾಣ ಹಾಕಬಹುದು ಎಂಬ ಭಾವನೆಯನ್ನು ಸದಸ್ಯರು ಹೊಂದಿದ್ದಾರೆ~ ಎಂದು ಮೂಲಗಳು ತಿಳಿಸಿವೆ.

`ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಮತ್ತು ಸಾಮಾನ್ಯ ಸಭೆಗಳಲ್ಲಿ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಕುರಿತು ಪ್ರಶ್ನಿಸುವ ಸಾವಿತ್ರಮ್ಮ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಅನುದಾನ ಬಳಕೆ ಮತ್ತು ದುರ್ಬಳಕೆ ಬಗ್ಗೆಯೂ ಕೇಳುತ್ತಾರೆ. ಇದರಿಂದ ಸದಸ್ಯರಿಗೆ, ಅಧಿಕಾರಿಗಳಿಗೆ ಮುಜುಗರವಾಗುತ್ತಿದ್ದು, ಇದು ಕೂಡ ಅವಿಶ್ವಾಸ ಮಂಡನೆಗೆ ಕಾರಣ~ ಎಂದು ಹೇಳಲಾಗುತ್ತಿದೆ.

`ಬಾಗೇಪಲ್ಲಿ ತಾಲ್ಲೂಕಿನ ಜೂಲಪಾಳ್ಯದ ಸರ್ಕಾರಿ ಬಾಲಕರ ಮೆಟ್ರಿಕ್‌ಪೂರ್ವ ವಸತಿ ನಿಲಯಕ್ಕೆ ಸಾವಿತ್ರಮ್ಮ ಇತ್ತೀಚೆಗೆ ಭೇಟಿ ನೀಡಿರುವುದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ ಅವರಿಗೆ ಸಿಟ್ಟು ತಂದಿದೆ. ಕೃಷ್ಣಪ್ಪ ಅವರ ಸಹೋದರ ಆ ವಸತಿ ನಿಲಯದ ವಾರ್ಡನ್ ಆಗಿದ್ದು, ನಾಲ್ಕು ದಿನಗಳಿಂದ ಬಾಲಕರಿಗೆ ಊಟ ಪೂರೈಕೆಯಾಗಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಅವಿಶ್ವಾಸ ಮಂಡನೆಗೆ ಇದು ಕೂಡ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ~ ಎಂದು ತಿಳಿದು ಬಂದಿದೆ.

`ನನ್ನದೇನೂ ತಪ್ಪಿಲ್ಲ~

ಚಿಕ್ಕಬಳ್ಳಾಪುರ:  `ನನ್ನ ಕಾರ್ಯನಿರ್ವಹಣೆ ಬಗ್ಗೆ ವಿಶ್ವಾಸವಿಲ್ಲದ ಕಾರಣ ಅವಿಶ್ವಾಸ ನಿರ್ಣಯ ಮಂಡಿಸಲು ಜಿಲ್ಲಾ ಪಂಚಾಯಿತಿ ಸದಸ್ಯರು ಮುಂದಾಗಿದ್ದಾರೆ. ಆದರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಅಥವಾ ಸದಸ್ಯರು ನನ್ನನ್ನು ಯಾವಾಗ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ? ಸರ್ಕಾರಿ ಯೋಜನೆ ಮತ್ತು ಅನುದಾನ ಸದ್ಬಳಕೆಗೆ ಸಂಬಂಧಿಸಿದಂತೆ ಅವರು ಯಾವತ್ತೂ ನನ್ನಂದಿಗೆ ಚರ್ಚಿಸಿಲ್ಲ~ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ `ಪ್ರಜಾವಾಣಿ~ಗೆ ತಿಳಿಸಿದರು.

`ಸರ್ಕಾರಿ ಯೋಜನೆಗಳ ಅನುಷ್ಠಾನ ಮತ್ತು ಸದ್ಬಳಕೆಯ ವಿಷಯ ಬಂದಾಗಲೆಲ್ಲ, ನನ್ನನ್ನು ದೂರ ಇಡಲಾಗುತ್ತದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರೇ ಚರ್ಚಿಸಿಕೊಳ್ಳುತ್ತಾರೆ. ಹೀಗಿದ್ದರೂ ಇದಕ್ಕೆ ಆಕ್ಷೇಪಿಸದೇ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಅವಿಶ್ವಾಸ ಮಂಡನೆಗೆ ಆಸ್ಪದ ನೀಡುವಂತಹ ಯಾವ ತಪ್ಪು ಮಾಡಿಲ್ಲ~ ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.