ADVERTISEMENT

ಊರಿಗೆ ಕರೆತನ್ನಿ: ಸಚಿವರ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2011, 8:50 IST
Last Updated 27 ಆಗಸ್ಟ್ 2011, 8:50 IST
ಊರಿಗೆ ಕರೆತನ್ನಿ: ಸಚಿವರ ಸೂಚನೆ
ಊರಿಗೆ ಕರೆತನ್ನಿ: ಸಚಿವರ ಸೂಚನೆ   

ಚಿಂತಾಮಣಿ: ತಾಲ್ಲೂಕಿನ ಬಾರ‌್ಲಹಳ್ಳಿ, ಯರ‌್ರಕೋಟೆ ಗ್ರಾಮಗಳಲ್ಲಿ ಆಕಸ್ಮಿಕ ಘಟನೆ ನಡೆದಿದ್ದು, ಭೀತಿಯಿಂದ  ಊರು ತೊರೆದಿರುವ ಜನರನ್ನು ಮತ್ತೆ ಕರೆ ತರುವ ಕೆಲಸವನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸೂಚಿಸಿದರು.

ಸಚಿವರು ಶುಕ್ರವಾರ ತಾಲ್ಲೂಕಿನ ಬಾರ‌್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಮಹಿಳೆಯರೊಂದಿಗೆ ಮಾತುಕತೆ ನಡೆಸಿ ಅಧಿಕಾರಿಗಳಿಗೆ ಆದೇಶ ನೀಡಿದರು.

ಅದೊಂದು ನಡೆಯಬಾರದ ಅಮಾನವೀಯ ಘಟನೆ. ಅದನ್ನೇ ನೆಪವಾಗಿಟ್ಟುಕೊಂಡು ಗ್ರಾಮಗಳಲ್ಲಿ ಭೀತಿ ವಾತಾವರಣ ಉಂಟು ಮಾಡುವುದು ತಪ್ಪು.

 ಜಿಲ್ಲಾಡಳಿತ ಮತ್ತು ಪೊಲೀಸರು ಕೂಡಲೇ ಗ್ರಾಮಗಳಲ್ಲಿ ಶಾಂತಿ ಸಭೆ ನಡೆಸಿ ಘಟನೆಯಲ್ಲಿ ಬೇಕಾದವರ ವಿವರ ನೀಡಿದರೆ ಇತರರು ತಾವಾಗಿಯೇ ವಾಪಸ್ ಬರುತ್ತಾರೆ. ಮೊದಲು ಗ್ರಾಮಗಳಲ್ಲಿ ಸಹಜ ವಾತಾವರಣ ಉಂಟು ಮಾಡಬೇಕು ಎಂದರು.

ಬಂಧಿತರಾಗಿರುವವರಲ್ಲಿ ನಿರಪರಾಧಿಗಳು, ಅಮಾಯಕರು, ವಿದ್ಯಾರ್ಥಿಗಳು ಇದ್ದರೆ ಜನಪ್ರತಿನಿಧಿಗಳು, ವಕೀಲರು ಮತ್ತಿತರ ಸಮಾಜ ಸೇವಕರು ಅಗತ್ಯ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿ ಅವರ ಬಿಡುಗಡೆಗೆ ಪ್ರಯತ್ನಿಸಬೇಕು. ಪೊಲೀಸರು ಸಹ ಅಮಾಯಕರ ಬಿಡುಗಡೆಗೆ ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ, ಜಿಲ್ಲಾ ಎಸ್ಪಿ ಡಾ.ಟಿ.ಡಿ.ಪವಾರ್, ತಹಶೀಲ್ದಾರ್ ಕೃಷ್ಣಮೂರ್ತಿ, ಪೌರಾಯುಕ್ತ ರಾಮೇಗೌಡ, ಡಿವೈಎಸ್ಪಿ ನಾಣಯ್ಯ ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.