ADVERTISEMENT

ಎಫ್‌ಡಿಎ ಪರೀಕ್ಷೆ: ಪ್ರಶ್ನೆಪತ್ರಿಕೆ ಬದಲಿಗೆ ಯತ್ನಿಸಿದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 10:45 IST
Last Updated 20 ಜೂನ್ 2011, 10:45 IST

ಚಿಕ್ಕಬಳ್ಳಾಪುರ: ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗೆ ಪರೀಕ್ಷೆ ಬರೆಯುತ್ತಿದ್ದ ಮಹಿಳಾ ಅಭ್ಯರ್ಥಿಯೊಬ್ಬರ ಪ್ರಶ್ನೆ ಪತ್ರಿಕೆಯನ್ನು ಕಾಲೇಜು ಸಿಬ್ಬಂದಿಯೊಬ್ಬರು ಬದಲಾಯಿಸಲು ಯತ್ನಿಸಿದ ಘಟನೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ನಡೆಯಿತು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷಾ ಕೇಂದ್ರದ ಕೋಣೆ ಸಂಖ್ಯೆ 24ರಲ್ಲಿ ಮಹಿಳಾ ಅಭ್ಯರ್ಥಿಯೊಬ್ಬರು ಎಫ್‌ಡಿಎ ಪರೀಕ್ಷೆ ಬರೆಯುತ್ತಿದ್ದರು. ಕೆಲ ಹೊತ್ತಿನ ನಂತರ ಅಲ್ಲಿಗೆ ಬಂದ ಕಾಲೇಜು ಸಿಬ್ಬಂದಿಯೊಬ್ಬರು, ಈಗಾಗಲೇ ವಿತರಿಸಲಾಗಿರುವ ಪ್ರಶ್ನೆ ಪತ್ರಿಕೆಯಲ್ಲಿ ದೋಷವಿದೆ. ಬೇರೆ ತಂದುಕೊಡುತ್ತೇನೆ~ ಎಂದು ಪ್ರಶ್ನೆ ಪತ್ರಿಕೆ ಒಯ್ದರು. ಇದನ್ನು ಕಂಡ ಇತರ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದರು. ದುರುದ್ದೇಶದಿಂದ ಪ್ರಶ್ನೆ ಪತ್ರಿಕೆಯನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಿದರು. ಪ್ರತಿಭಟನೆಗೆ ಮುಂದಾದರು. ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿರುವುದು ಅರಿತ ಪರೀಕ್ಷಾ ವೀಕ್ಷಕರು ಸ್ಥಳಕ್ಕೆ ಆಗಮಿಸಿದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು.

ಮಹಿಳಾ ಅಭ್ಯರ್ಥಿ ಮತ್ತು ಕಾಲೇಜು ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದರು.
`ಪ್ರಶ್ನೆಪತ್ರಿಕೆ ಬದಲಾಯಿಸಿದ ಘಟನೆಗೂ ಮತ್ತು ನನಗೂ ಯಾವುದೇ ರೀತಿಯ ಸಂಬಂಧವಿಲ್ಲ~ ಎಂದು ಕಾಲೇಜು ಸಿಬ್ಬಂದಿ ಲಿಖಿತ ಹೇಳಿಕೆ ನೀಡಿದರು.

ಆದರೆ ಮಹಿಳಾ ಅಭ್ಯರ್ಥಿಯು ಬೇರೆಯದ್ದೇ ಉತ್ತರ ನೀಡಿದರು. `ಮೂಲ ಪ್ರಶ್ನೆಪತ್ರಿಕೆಯ ಬದಲು ಬೇರೆ ಪ್ರಶ್ನೆಪತ್ರಿಕೆಯನ್ನು ಕಾಲೇಜು ಸಿಬ್ಬಂದಿ ನೀಡಿರುವುದು ನಿಜ~ ಎಂದು ಅವರು ವಿಚಾರಣೆ ವೇಳೆ ತಿಳಿಸಿದರು.

ಪರೀಕ್ಷಾ ವೀಕ್ಷಕರಾದ ಸದಾಶಿವ ಮಿರ್ಜಿ ಮತ್ತು ಸಿ.ಯು.ಚಂದ್ರಶೇಖರ್ ಅವರು ಪ್ರಕರಣದ ಕುರಿತು ಮಾಹಿತಿಯನ್ನು ಪಡೆದರು. ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ವಿ.ಕೃಷ್ಣಪ್ಪ ಅವರಿಂದಲೂ  ಮಾಹಿತಿ ಪಡೆದರು.
ಕೆಲ ದಿನಗಳ ಹಿಂದೆಯಷ್ಟೇ ಇದೇ ಕಾಲೇಜಿನಲ್ಲಿ ಪದವಿ ಪರೀಕ್ಷೆಯಲ್ಲಿ ಡಿಬಾರ್‌ಗೊಂಡಿದ್ದ ವಿದ್ಯಾರ್ಥಿನಿಯನ್ನು ಡಿಬಾರ್ ಆಗದಂತೆ ರಕ್ಷಿಸಲು ಯತ್ನಿಸಿದ ಘಟನೆ ನಡೆದಿತ್ತು.

ಪ್ರಕರಣದಲ್ಲಿ ಬಿ.ವಿ.ಕೃಷ್ಣಪ್ಪ ಅವರು ಪ್ರಮುಖವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ತನಿಖೆ ಮುಂದುವರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.