ADVERTISEMENT

ಎಲ್ಲೆಡೆ ತ್ಯಾಜ್ಯ, ಸಾಂಕ್ರಾಮಿಕ ರೋಗದ ಭೀತಿ

10 ಮತ್ತು 14ನೇ ವಾರ್ಡ್‌ನಲ್ಲಿ ಕಸದ ಗುಡ್ಡೆ

ಪಿ.ಎನ್.ಶಿವಣ್ಣ
Published 30 ಆಗಸ್ಟ್ 2016, 7:07 IST
Last Updated 30 ಆಗಸ್ಟ್ 2016, 7:07 IST
ಬಾಗೇಪಲ್ಲಿ ಪಟ್ಟಣದ ಡಿವಿಜಿ ಮುಖ್ಯರಸ್ತೆಯಿಂದ 10 ಮತ್ತು 14ನೇ ವಾರ್ಡ್‌ ಗಳಿಗೆ ಸಂಪರ್ಕ ಕಲ್ಪಿಸುವ ಸರ್ಕಾರಿ ಬಾಲಕರ ಪ್ರೌಢಶಾಲೆ ಪಕ್ಕದ ಖಾಲಿ ನಿವೇಶನದಲ್ಲಿರುವ  ತ್ಯಾಜ್ಯವಸ್ತುಗಳು
ಬಾಗೇಪಲ್ಲಿ ಪಟ್ಟಣದ ಡಿವಿಜಿ ಮುಖ್ಯರಸ್ತೆಯಿಂದ 10 ಮತ್ತು 14ನೇ ವಾರ್ಡ್‌ ಗಳಿಗೆ ಸಂಪರ್ಕ ಕಲ್ಪಿಸುವ ಸರ್ಕಾರಿ ಬಾಲಕರ ಪ್ರೌಢಶಾಲೆ ಪಕ್ಕದ ಖಾಲಿ ನಿವೇಶನದಲ್ಲಿರುವ ತ್ಯಾಜ್ಯವಸ್ತುಗಳು   

ಬಾಗೇಪಲ್ಲಿ: ಪಟ್ಟಣದ ಡಿವಿಜಿ ಮುಖ್ಯರಸ್ತೆಯಿಂದ 10 ಮತ್ತು 14ನೇ ವಾರ್ಡ್‌ಗಳಿಗೆ ಸಂಪರ್ಕ ಕಲ್ಪಿಸುವ ಪಿಎಲ್‌ಡಿ ಬ್ಯಾಂಕ್ ರಸ್ತೆಯ ಎದುರು ಇರುವ ಖಾಲಿ ನಿವೇಶನದಲ್ಲಿ ತ್ಯಾಜ್ಯವಸ್ತುಗಳ ಗುಡ್ಡೆ ಹಾಕಲಾಗುತ್ತಿದೆ.

ತ್ಯಾಜ್ಯ ಕೊಳೆತಿರುವ ಕಾರಣ  ಈ ನಿವೇಶಣ ಪಕ್ಕ ಇರುವ ಶಾಲೆ, ಕಾಲೇಜುಗಳು, ಬ್ಯಾಂಕ್‌, ಪುರಸಭೆಅಂಗಡಿ ಮಳಿಗೆಯವರು ಮೂಗು ಮುಚ್ಚಿಕೊಂಡು ಕೆಲಸ ಮಾಡಬೇಕಾಗಿದೆ. ದುರ್ನಾಯ ಬೀರುತ್ತಿರುವುದರಿಂದ  ರೋಗ ಹರಡುವ ಭೀತಿಯಲ್ಲಿ ಜನರು ವ್ಯಕ್ತಪಡಿಸುತ್ತಿದ್ದಾರೆ.

ತೆರೆದ ಚರಂಡಿ, ಚರಂಡಿಯಲ್ಲಿ ಬಿದ್ದಿರುವ ತ್ಯಾಜ್ಯವಸ್ತುಗಳಿಂದಾಗಿ ಕೆಟ್ಟ ವಾಸನೆ ಬರುತ್ತಿರುತ್ತದೆ ಎಂದು  ಮೂಗುಮುಚ್ಚಿಕೊಂಡು ಓಡಾಡಬೇಕಾಗಿದೆ. ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಶಾಪಹಾಕುವ ಪರಿಸ್ಥಿತಿ ಉಂಟಾಗಿದೆ ಎಂದು ನಿವೃತ್ತ ಶಿಕ್ಷಕ ಸುಧಾಕರ ಹೇಳಿದರು.

ಹಲವು ಸಲ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಧಿಕಾರಿಗಳು ಭರವಸೆ ನೀಡಿ ಕೈತೊಳೆದುಕೊಳ್ಳುತ್ತಾರೆ. ಆದರೆ ಸಮಸ್ಯೆ ಮಾತ್ರ ಬಗೆಹರಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದರು.

ಶಾಲಾ ಮಕ್ಕಳು ಓಡಾಡಲು ಇರುವ ಏಕೈಕ ಮಾರ್ಗ ಇದಾಗಿದೆ.  ಮಕ್ಕಳು ಸೊಳ್ಳೆಗಳ-ನೊಣಗಳ ಕಾಟಕ್ಕೆ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು  ಆರ್.ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದರು.

ಅಲ್ಪಸ್ವಲ್ಪ ಮಳೆಬಿದ್ದರೆ ಈ ಪ್ರದೇಶದಲ್ಲಿ ನಾಲ್ಕೈದು ಅಡಿ ನೀರು ನಿಲ್ಲುತ್ತದೆ. ಆಗ ವಾಹನ ಸಂಚಾರ ಕಷ್ಟವಾಗಲಿದೆ ಎಂದು ಶಿಕ್ಷಕರೊಬ್ಬರು ತಿಳಿಸಿದರು. ನೊಣ, ಸೊಳ್ಳೆಗಳ ಕಾಟದಿಂದಾಗಿ ಮನೆ ಬಾಗಿಲು, ಕಿಟಕಿ ತೆಗೆಯಲೇ ಭಯವಾಗುತ್ತದೆ. ಚೇಳು, ಹಾವಿನ ಭಯವೂ ಇದೆ ಎಂದು ಗೃಹಿಣಿಯರು ಹೇಳಿದರು. ಪಟ್ಟಣದ ಖಾಲಿ ನಿವೇಶಗಳ ತ್ಯಾಜ್ಯ, ಗಿಡಗಂಟೆ ತೆಗೆಯುವಂತೆ ನಿವೇಶನಗಳ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಸಮಸ್ಯೆಯನ್ನು ಎರಡು-ಮೂರು ದಿನದಲ್ಲಿ ಸರಿಪಡಿಸವುದಾಗಿ  ಪುರಸಭೆ ಮುಖ್ಯಾಧಿಕಾರಿ ಜಿ.ಎನ್.ಚಲಪತಿ ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.