ADVERTISEMENT

ಒಂದೂವರೆ ವರ್ಷದಲ್ಲಿ ಎತ್ತಿನಹೊಳೆ ನೀರು

ಮೂರು ಹಂತದಲ್ಲಿ ಶುದ್ಧೀಕರಿಸಿದ ನೀರು ಪೂರೈಕೆ: ಸಂಸದ ವೀರಪ್ಪ ಮೊಯಿಲಿ ಭರವಸೆ

​ಪ್ರಜಾವಾಣಿ ವಾರ್ತೆ
Published 4 ಮೇ 2018, 8:24 IST
Last Updated 4 ಮೇ 2018, 8:24 IST

ಚಿಕ್ಕಬಳ್ಳಾಪುರ: ‘ಒಂದೂವರೆ ವರ್ಷಗಳಲ್ಲಿ ಎತ್ತಿನಹೊಳೆ ನೀರು ಜಿಲ್ಲೆಗೆ ಹರಿದು ಕೆರೆಗಳನ್ನು ತುಂಬಲಿದೆ. ಜತೆಗೆ ಜಿಲ್ಲೆಯ ನದಿಗಳು ಜೀವಂತಗೊಂಡು ಹರಿಯಲಿವೆ. ಹೆಬ್ಬಾಳ ಮತ್ತು ನಾಗವಾರ ಕಣಿವೆ ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲಿ ಶುದ್ಧೀಕರಿಸಿ ನೀಡಲಾಗುತ್ತದೆ’ ಎಂದು ಸಂಸದ ವೀರಪ್ಪ ಮೊಯಿಲಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಎಸ್.ಪಿ ಕಚೇರಿ, ಬಸ್‌ ನಿಲ್ದಾಣ, ಆಸ್ಪತ್ರೆ, ಜಿಲ್ಲಾ ಗ್ರಂಥಾಲಯ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ನಾವು ಸಾಕಷ್ಟು ಕೆಲಸ ಮಾಡಿದ್ದೇವೆ. ಇತ್ತೀಚೆಗೆ ಬಿಡುಗಡೆಗೊಳಿಸಿದ ಪ್ರಣಾಳಿಕೆಯಲ್ಲಿ ಜಿಲ್ಲೆಗೆ ಸಾಕಷ್ಟು ಯೋಜನೆಗಳನ್ನು ಘೋಷಿಸಲಾಗಿದೆ’ ಎಂದು ಹೇಳಿದರು.

‘ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ 500 ಎಕರೆಯಲ್ಲಿ ಔಷಧಿ, ಸಿದ್ಧ ಉಡುಪು ತಯಾರಿಕೆ, ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಮಾಡಲಾಗುತ್ತದೆ. ಚಿಕ್ಕಬಳ್ಳಾಪುರದಲ್ಲಿ ದೊಡ್ಡ ಪ್ರಮಾಣದ ಕೈಗಾರಿಕೆಗಳನ್ನು ನಿರ್ಮಾಣ ಮಾಡುತ್ತದೆ. ನಂದಿ ಬೆಟ್ಟ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ರಚಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಚಿಕ್ಕಬಳ್ಳಾಪುರದಲ್ಲಿ ರೇಷ್ಮೆ ಮತ್ತು ಆಹಾರ ಸಂಸ್ಕರಣ ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಆಹಾರ ಸಂಸ್ಕರಣಾ ಘಟಕ ಒಳಗೊಂಡ ಕೃಷಿ ಆಧಾರಿತ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿದೆ. ಉಪ ನಗರ ರೈಲು, ಹೊರವರ್ತುಲ ರಸ್ತೆಗಳು ಮುಂದಿನ ವರ್ಷಗಳಲ್ಲಿ ನಿರ್ಮಾಣ ಮಾಡಲಿದ್ದೇವೆ’ ಎಂದರು.

‘ನೀರಾವರಿ ಇತಿಹಾಸದಲ್ಲಿ ನಾವು ಭಾಷಣ ಮಾಡದೆ ಕೆಲಸ ಮಾಡಿದ್ದೇವೆ. ನಾವು ಕೈಗಾರಿಕೆ, ವಿದ್ಯುತ್ ಒದಗಿಸುವಲ್ಲಿ ಸಾಕಷ್ಟು ಆದ್ಯತೆ ಕೊಟ್ಟಿದ್ದೇವೆ. ದಾಬೋಲ್ ನಿಂದ ಬೆಂಗಳೂರುವರೆಗೆ 8000 ಕೋಟಿ ಅಡುಗೆ ಅನಿಲ ಪೈಪ್‌ಮಾರ್ಗ ನಿರ್ಮಿಸಿದ್ದೇವೆ. ಇದೀಗ ಕೋಚಿನ್‌ನಿಂದ ವರೆಗೆ ಮತ್ತೊಂದು ಮಾರ್ಗ ನಿರ್ಮಾಣ ಹಂತದಲ್ಲಿದೆ. ಕೈಗಾರಿಕೆ, ಕೃಷಿ, ನೀರಾವರಿಗೆ ಬಿಜೆಪಿ, ಜೆಡಿಎಸ್ ಕೊಡುಗೆ ಏನು’ ಎಂದು ಪ್ರಶ್ನಿಸಿದರು.

‘ಕಳೆದ ಐದು ವರ್ಷಗಳಲ್ಲಿ ನಮ್ಮ ಸರ್ಕಾರ ನೀರಾವರಿ ಯೋಜನೆಗಳಿಗೆ ₹ 58 ಸಾವಿರ ಕೋಟಿ ಖರ್ಚು ಮಾಡಿ, 6.50 ಲಕ್ಷ ಎಕರೆ ಜಮೀನಿಗೆ ನೀರು ಕೊಟ್ಟಿದ್ದೇವೆ. ಅದೇ ಬಿಜೆಪಿ ಸರ್ಕಾರದಲ್ಲಿ ನೀರಾವರಿ ಯೋಜನೆಗಳಿಗೆ ₹ 16 ಸಾವಿರ ಕೋಟಿ ಮಾತ್ರ ನೀಡಲಾಗಿತ್ತು. ನಾವು ಮುಂಬರುವ ವರ್ಷಗಳಲ್ಲಿ ನೀರಾವರಿಗೆ ₹ 1.25 ಲಕ್ಷ ಕೋಟಿ ಖರ್ಚು ಮಾಡುವವರಿದ್ದೇವೆ’ ಎಂದು ಭರವಸೆ ನೀಡಿದರು.

‘ಎಚ್‌ಎಎಲ್ ಮೂಲಕ ವಿಮಾನ ತಯಾರಿಕೆ ಮಾಡುವ ಯೋಜನೆ ಅನುಷ್ಠಾನಕ್ಕೆ ತಂದಿದ್ದರೆ ಕನ್ನಡಿಗರಿಗೆ ಸುಮಾರು 3 ಲಕ್ಷ ಉದ್ಯೋಗಗಳು ದೊರೆಯುತ್ತಿದ್ದವು. ಆದರೆ ನರೇಂದ್ರ ಮೋದಿ ಅವರು ಖಾಸಗಿ ಉದ್ಯಮಿಗಳ ಜತೆಗೆ ಹೊಂದಾಣಿಕೆ ಮಾಡಿಕೊಂಡು ಕನ್ನಡಿಗರ ಉದ್ಯೊಗ ಅಪಹರಿಸಿದರು. ಕರ್ನಾಟಕಕ್ಕೆ ಮಾಡಿದ ದೊಡ್ಡ ದ್ರೋಹ ಮಾಡಿದರು’ ಎಂದು ಆರೋಪಿಸಿದರು.

ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ‘ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಅವರು, ‘ಮೊದಲು ಎತ್ತಿನಹೊಳೆ ನಿಲ್ಲಿಸುತ್ತೇನೆ ಎಂದು ಹೇಳಿದ್ದರು. ಇತ್ತೀಚೆಗೆ ಚಿಂತಾಮಣಿಗೆ ಬಂದಾಗ ನಾನು ಹಾಗೆ ಹೇಳಿಯೇ ಇಲ್ಲ ಎಂದರು. ನೀರಿನಲ್ಲಿ ಯಾರೂ ರಾಜಕೀಯ ಮಾಡಬಾರದು. ಕೇವಲ ಎರಡು ವರ್ಷದಲ್ಲಿ ನೀರಾವರಿ ಯೋಜನೆಗೆ ₹ 4 ಸಾವಿರ ಕೋಟಿ ಕೊಟ್ಟ ಇತಿಹಾಸವಿಲ್ಲ’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ನಗರಸಭೆ ಉಪಾಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ಎಚ್.ವಿ.ಗೋವಿಂದಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್, ಮುಖಂಡ ಶಿವಾನಂದ, ಕೆ.ವಿ.ನಾಗರಾಜ್, ಶ್ರೀಧರ್, ಮರಳುಕುಂಟೆ ಕೃಷ್ಣಮೂರ್ತಿ, ಗಜೇಂದ್ರ ಉಪಸ್ಥಿತರಿದ್ದರು.

**
ಸಾಮಾಜಿಕ ನ್ಯಾಯದ ಬಗ್ಗೆ ನಾವು ಬೇರೆಯವರಿಂದ ಕಲಿಯಬೇಕಿಲ್ಲ. ದೇಶದಲ್ಲಿ ನಾವು ಸೋತರೂ ಪರವಾಗಿಲ್ಲ. ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುತ್ತೇವೆ
– ಡಾ.ಕೆ.ಸುಧಾಕರ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.