ADVERTISEMENT

ಕಟ್ಟೆಚ್ಚರ ನಡುವೆ ಸಂಹಿತೆ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 8:59 IST
Last Updated 25 ಏಪ್ರಿಲ್ 2013, 8:59 IST

ಬಾಗೇಪಲ್ಲಿ: ವಿಧಾನಸಭಾ ಚುನಾವಣೆ ಪ್ರಚಾರದ ರಂಗು ದಿನದಿಂದ ದಿನಕ್ಕೆ ವಿಶೇಷ ಕಳೆ ಪಡೆಯಕೊಳ್ಳತೊಡಗಿದ್ದು, ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಅತ್ತ ಚುನಾವಣಾಧಿಕಾರಿಗಳು ನಿಗಾ ವಹಿಸಿದ್ದರೆ, ಇತ್ತ ಚುನಾವಣಾ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅಭ್ಯರ್ಥಿಗಳಿಗೆ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದ್ದು, ಎಲ್ಲ ಅಭ್ಯರ್ಥಿಗಳು ಚುನಾವಣೆ ವಿಷಯವನ್ನೇ ಧ್ಯಾನಿಸುತ್ತಿದ್ದಾರೆ.

ಈ ಬಾರಿ ಸಿಪಿಎಂ-1, ಕಾಂಗ್ರೆಸ್-1, ಜೆಡಿಎಸ್-1, ಕೆಜೆಪಿ-1, ಬಿಎಸ್‌ಆರ್ ಕಾಂಗ್ರೆಸ್-1, ಬಿಜೆಪಿ-1 ಹೊರತುಪಡಿಸಿ ಉಳಿದಂತೆ 17 ಮಂದಿ ಪಕ್ಷೇತರರು ಚುನಾವಣೆ ಕಣದಲ್ಲಿ ಇದ್ದಾರೆ. ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳು ವಾಹನಗಳಿಗೆಲ್ಲ ಧ್ವಜ ಕಟ್ಟಿಕೊಂಡು ಮತ್ತು ಪೋಸ್ಟರ್ ಫಲಕಗಳನ್ನು ಕಟ್ಟಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ.

ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಸಿಪಿಎಂ ಒಟ್ಟು 18 ವಾಹನಗಳಿಗೆ ಅನುಮತಿ ಪಡೆದುಕೊಂಡಿದೆ. ಕಾಂಗ್ರೆಸ್-25, ಜೆಡಿಎಸ್-16, ಪಕ್ಷೇತರರ ಅಭ್ಯರ್ಥಿ ಎಸ್.ಎನ್.ಸುಬ್ಬಾರೆಡ್ಡಿ-21, ಬಿಎಸ್‌ಪಿ-2, ಬಿಎಸ್‌ಆರ್ ಕಾಂಗ್ರೆಸ್-14, ಕೆಜೆಪಿ-14, ಬಿಜೆಪಿ-18 ಮತ್ತು ಜೆಡಿಯು-3 ವಾಹನಗಳಿಗೆ ಅನುಮತಿ ಪಡೆದುಕೊಂಡಿದೆ. ಆದರೆ ಈ ವಾಹನಗಳು ಅಲ್ಲದೇ ಇತರ ವಾಹನಗಳು ಚುನಾವಣಾಧಿಕಾರಿಗಳ ಅನುಮತಿ ಪಡೆದೇ ಕ್ಷೇತ್ರದಾದ್ಯಂತ ಸುತ್ತುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ.

`ಚುನಾವಣಾ ಪ್ರಚಾರಕ್ಕೆಂದೇ ಅನುಮತಿ ಪಡೆದು ಬಳಸಲಾಗುವ ವಾಹನಗಳ ಗಾಜಿನ ಮೇಲೆ ಅನುಮತಿ ಪತ್ರ ಅಂಟಿಸಲಾಗಿರುತ್ತದೆ. ಆಯಾ ವಾಹನಗಳನ್ನು ಮಾತ್ರವೇ ಚುನಾವಣಾ ಪ್ರಚಾರಕ್ಕೆ ಬಳಕೊಳ್ಳಬೇಕು. ಆದರೆ ಅವುಗಳಲ್ಲದೇ ಇತರ ವಾಹನಗಳನ್ನು ಬಳಸುವ ಮೂಲಕ ಕೆಲ ಅಭ್ಯರ್ಥಿಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುವ ಅಭ್ಯರ್ಥಿ ಮತ್ತು ಅವರ ಬೆಂಬಲಿಗರನ್ನು ಪತ್ತೆ ಮಾಡಬೇಕು. ಅವರ ವಿರುದ್ಧ ಕ್ರಮ ಜರುಗಿಸಬೇಕು' ಎಂದು ಪಟ್ಟಣದ ನಿವಾಸಿ ಚಂದ್ರಶೇಖರ್ `ಪ್ರಜಾವಾಣಿ'ಗೆ ತಿಳಿಸಿದರು.

ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳನ್ನುಒಳಗೊಂಡಿರುವ ಬಾಗೇಪಲ್ಲಿ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಯಲು ಪ್ರಾದೇಶಿಕ ಸಾರಿಗೆ (ಆರ್‌ಟಿಓ) ಕಚೇರಿ ತೆರಿಗೆ ಬಳಿ, ಜಿ.ಮದ್ದೇಪಲ್ಲಿ, ನಿಮ್ಮಕಾಯಲಪಲ್ಲಿ, ಬಿಳ್ಳೂರ ಮತ್ತು ವೀರಾಪುರದ ಬಳಿ ಜಿಲ್ಲಾಮಟ್ಟದ ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳು ಒಳಗೊಂಡ 5 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಪ್ರತಿಯೊಂದು ವಾಹನವನ್ನು ಪರಿಶೀಲಿಸಿದ ನಂತರವಷ್ಟೇ ಮುಂದೆ ಸಾಗಲು ಅವಕಾಶ ನೀಡಲಾಗುತ್ತಿದೆ.

ದೂರು ದಾಖಲು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ಈವರೆಗೆ 8 ಪ್ರಕರಣಗಳು ದಾಖಲಾಗಿವೆ. ಎಪಿಎಂಸಿ ಬಳಿ ಸೂಕ್ತ ದಾಖಲೆಪತ್ರ ಹೊಂದಿರದ 2.10 ಲಕ್ಷ ರೂಪಾಯಿ ಪತ್ತೆಯಾಗಿತ್ತು. ಪಾತಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಾರ‌್ಲಪಲ್ಲಿ ಗ್ರಾಮದ ವ್ಯಕ್ತಿಯೊಬ್ಬರ ಮನೆಯಲ್ಲಿ ಅಕ್ರಮವಾಗಿ ಶೇಖರಿಸಿಡಲಾಗ್ದ್ದಿದ ಮದ್ಯ ವಶಪಡಿಸಿಕೊಳ್ಳಲಾಗಿತ್ತು.

ಅಬಕಾರಿ ಇಲಾಖೆ ವ್ಯಾಪ್ತಿಯಲ್ಲಿ  ಈವರೆಗೆ 17 ದೂರು ದಾಖಲಾಗಿವೆ. ಮಾರ್ಚ್ 13ರಿಂದ 18ರವರೆಗೆ ವಿವಿಧ ಚೆಕ್‌ಪೋಸ್ಟ್ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರಕರಣಗಳಿಗೆ ಕಳ್ಳಭಟ್ಟಿ ಸಾರಾಯಿ, ಸೇಂದಿ, ಮದ್ಯ, ಬಿಯರ್, ವಾಹನಗಳು, ಬೆಲ್ಲ, ಬೆಲ್ಲದ ಕೊಳೆ ಸೇರಿದಂತೆ ಸುಮಾರು 17 ಪ್ರಕರಣಗಳು ದಾಖಲಾಗಿದೆ ಎಂದು ಅಬಕಾರಿ ಇಲಾಖೆಯ ನಿರೀಕ್ಷಕ ಬಿ.ನಾಗೇಂದ್ರಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.