ADVERTISEMENT

ಕುಂದಲಗುರ್ಕಿಯಲ್ಲಿ ಕಣಜದ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 7:55 IST
Last Updated 17 ಅಕ್ಟೋಬರ್ 2012, 7:55 IST

ಶಿಡ್ಲಘಟ್ಟ: ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದ ರಾಮಾಂಜನೇಯರೆಡ್ಡಿ ಅವರ ತೋಟದಲ್ಲಿರುವ ಗೇರುಹಣ್ಣಿನ ಮರದಲ್ಲಿ ದೊಡ್ಡ ಗಾತ್ರದ ಕಣಜದ ಗೂಡೊಂದು ನಿರ್ಮಾಣವಾಗಿದ್ದು, ಗ್ರಾಮದಲ್ಲಿ ಆಕರ್ಷಣೆ ಕೇಂದ್ರವಾಗಿದೆ.

 ಸುಮಾರು ಎರಡು ತಿಂಗಳಿಂದ ಈ ಗೂಡು ಇಲ್ಲಿದೆ. ಹುಡುಗರ ತಂಟೆ ಇಲ್ಲಿ ಜಾಸ್ತಿ. ನಾವು ಆದಷ್ಟೂ ಯಾರನ್ನೂ ಗೂಡಿನ ಹತ್ತಿರಕ್ಕೆ ಬಿಡೊಲ್ಲ. ಅಕಸ್ಮಾತ್ ಯಾರನ್ನಾದರೂ ಹುಳಗಳು ಕಚ್ಚಿ ಅನಾಹುತ ಆದರೆ ಕಷ್ಟ. ಕೆಲವರು ಬೆಂಕಿ ಹೊತ್ತಿಸಲು ಪ್ರಯತ್ನಿಸಿದ್ದರು. ನಂತರವೂ ಸುಟ್ಟಿದ್ದ ಗೂಡನ್ನು ಹುಳುಗಳು ಪುನಃ ನಿರ್ಮಿಸಿಕೊಂಡವು. ಅವುಗಳ ಸಂಘ ಜೀವನ ಮತ್ತು ಶ್ರಮಿಕ ಬದುಕು ಮಾದರಿಯಾಗಿದೆ ಎಂದು ಕುಂದಲಗುರ್ಕಿಯ ರಾಮಾಂಜನೇಯರೆಡ್ಡಿ `ಪ್ರಜಾವಾಣಿ~ಗೆ ತಿಳಿಸಿದರು.

 ಇಂಗ್ಲಿಷ್‌ನಲ್ಲಿ ಹಾರ್ನೆಟ್ ಎಂದು ಕರೆಯುವ ಗುಂಪಿನ ಕಣಜಗಳು ತಮ್ಮ ಗೂಡಿನ ಸುತ್ತ ಚೆಂಡಿನಂತಹ ಕವಚ ನಿರ್ಮಿಸಿ, ರಕ್ಷಿಸಿಕೊಳ್ಳುತ್ತವೆ. ಗೂಡುಗಳಲ್ಲಿ ನೂರಾರು, ಕೆಲವೊಮ್ಮೆ ಸಾವಿರಾರು ಕಣಜ ಜೀವನ ನಡೆಸುತ್ತವೆ.
ಗೆದ್ದಲು, ಜೇನುಗಳಂತೆ ರಾಣಿಯ ಆಡಳಿತ ವ್ಯವಸ್ಥೆಯಲ್ಲಿರುವ ಈ ಕಣಜಗಳು ಗೂಡು ಕಟ್ಟುವ ರೀತಿಯೇ ವಿಚಿತ್ರ.

ಒಣ ಮರ ಮತ್ತು ತೊಗಟೆಗಳನ್ನು ಜಗಿದು ತಮ್ಮ ಜೊಲ್ಲಿನೊಂದಿಗೆ ಮಿಶ್ರಣ ಮಾಡಿಕೊಂಡು ಆರು ಮುಖಗಳಿರುವ ಮನೆಗಳನ್ನು ಕಟ್ಟುತ್ತಾ ಹೋಗುತ್ತವೆ. ಒಂದೇ ಅಳತೆಯ, ಒಂದರ ಪಕ್ಕ ಒಂದು, ಮೇಲೆ ಕೆಳಗೆ, ಸುತ್ತ ಮುತ್ತ ಹೀಗೆ ಗೂಡು ಕಟ್ಟುವ ಇವುಗಳ ತಾಂತ್ರಿಕ ಕೌಶಲಕ್ಕೆ ಯಾರಾದರೂ ತಲೆದೂಗಲೇಬೇಕು.

ಸೊಳ್ಳೆಗಳಂತೆ ಕಣಜಗಳಲ್ಲೂ ಹೆಣ್ಣುಗಳಿಗೆ ಮಾತ್ರ ಮುಳ್ಳುಗಳಿರುತ್ತವೆ. ಇವು ಮಾತ್ರ ಕಚ್ಚುತ್ತವೆ. ತಮ್ಮನ್ನು ರಕ್ಷಿಸಿಕೊಳ್ಳಲು ಇವು ಕುಟುಕುತ್ತವೆಯೆ ಹೊರತು, ಸುಮ್ಮಸುಮ್ಮನೆ ಆಕ್ರಮಣ ಮಾಡುವುದಿಲ್ಲ. ಗೂಡಿನ ರಕ್ಷಣೆ ಹೊಣೆ ಮುಳ್ಳುಗಳನ್ನು ಹೊಂದಿರುವ ಹೆಣ್ಣು ಕಣಜಗಳಿರುತ್ತವೆ. ಇವುಗಳ ಕೊಂಡಿ ಅಥವಾ ಮುಳ್ಳು ವಿಷಕಾರಿ. ಈ ಮುಳ್ಳುಗಳಲ್ಲಿ ಕೆಂಪು ರಕ್ತ ಕಣಗಳನ್ನು ಕರಗಿಸುವ ಹಿಸ್ಟಮಿನ್ ರಾಸಾಯನಿಕ ಬಿಡುಗಡೆ ಮಾಡುವ ಕೋಶಗಳಿರುತ್ತವೆ. ಗುಂಪಾಗಿ ದಾಳಿ ಮಾಡಿದಾಗ, ಇವುಗಳ ಕಡಿತಕ್ಕೊಳಗಾದ ವ್ಯಕ್ತಿ ಸಾವಿಗೀಡಾಗುವ ಸಾಧ್ಯತೆಯೂ ಇದೆ.

ಬೆಳೆಗಳಿಗೆ ಮಾರಕವಾದ ಹಲವು ಕ್ರಿಮಿಕೀಟಗಳನ್ನು ತಿನ್ನುವ ಕಣಜ ರೈತರಿಗೆ ಉಪಕಾರಿ. ಹೂಗಳ ಮಕರಂದವನ್ನು ಹೀರುತ್ತಾ ಪರಾಗ ಸ್ಪರ್ಶವನ್ನೂ ಅಚ್ಚುಕಟ್ಟಾಗಿ ಮಾಡುತ್ತವೆ  ಎಂದು ಶಿಕ್ಷಕ ಶಾಮಣ್ಣ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.