ADVERTISEMENT

‘ಕೆ.ವಿ.ನಾಗರಾಜ್‌ಗೆ ವಸೂಲಿ ಮಾಡುವುದು ಗೊತ್ತು’

ಜೆಡಿಎಸ್‌ ಮುಖಂಡರ ಆರೋಪಕ್ಕೆ ಕೇಶವರೆಡ್ಡಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 7:33 IST
Last Updated 12 ಅಕ್ಟೋಬರ್ 2017, 7:33 IST

ಚಿಕ್ಕಬಳ್ಳಾಪುರ: ‘ಜೆಡಿಎಸ್‌ ಮುಖಂಡ ಕೆ.ವಿ.ನಾಗರಾಜ್‌ ಅವರಿಗೆ ಅಧಿಕಾರಿಗಳಿಂದ ಯಾವ ರೀತಿ ಹಣ ವಸೂಲಿ ಮಾಡಬೇಕು ಎನ್ನುವುದು ಗೊತ್ತಿದೆ. ನಮಗೆ ಅಂತಹದ್ದು ಗೊತ್ತಿಲ್ಲ. ನಾವು ಯಾವತ್ತೂ ಅಕ್ರಮ ಕೆಲಸ ಮಾಡಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಆರೋಪಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಪ್ರಶ್ನೆಯೊಂದಕ್ಕೆ ಈ ರೀತಿ ಉತ್ತರಿಸಿದ ಅವರು, ‘ನಾಗರಾಜ್‌ ಅವರಿಗೆ ವಸೂಲಿ ಕಲೆ ಗೊತ್ತು ಏಕೆಂದರೆ ಅವರಿಗೆ ಅದರಲ್ಲಿ ಅನುಭವವಿದೆ. ನಾನಾಗಲಿ ಅಥವಾ ಶಾಸಕರಾಗಲಿ ಮಾಡಿದ ಒಂದೇ ಒಂದು ಅವ್ಯವಹಾರವಾಗಲಿ, ದುಡ್ಡು ವಸೂಲಿ ಮಾಡಿದ ನಿದರ್ಶನವನ್ನು ಅವರು ತೋರಿಸಲಿ. ಇಲ್ಲವೇ, ಅವರು ಬಹಿರಂಗ ವೇದಿಕೆ ಸಿದ್ಧಪಡಿಸಲಿ ನಾನು ಬರುತ್ತೇನೆ. ಅದರಲ್ಲಿ ನಾಗರಾಜ್‌ ನಮ್ಮ ವಿರುದ್ಧದ ಆರೋಪ ಸಾಬೀತು ಮಾಡಲಿ’ ಎಂದು ಸವಾಲು ಹಾಕಿದರು.

‘ಮೆಗಾ ಡೇರಿ ಕಾಮಗಾರಿ ಟೆಂಡರ್‌ ಪಡೆದ ಗುತ್ತಿಗೆದಾರರನ್ನು ಒದ್ದು ಓಡಿಸಿದ ನಾಗರಾಜ್‌, ಆ ಗುತ್ತಿಗೆ ಕೆಲಸಕ್ಕೆ ತಮ್ಮ ಮಗನನ್ನು ಬಿಟ್ಟಿದ್ದಾರೆ. ಅವರ ರೀತಿ ನಾವು ಮಕ್ಕಳನ್ನು ಬಿಟ್ಟು ಕೆಲಸ ಮಾಡಿಸುವುದಿಲ್ಲ. ಇವತ್ತು ಮೆಗಾ ಡೇರಿಯಲ್ಲಿ ಕೆಲಸ ಕೊಡಿಸಲು ಒಬ್ಬರಿಗೆ ₨8 ಲಕ್ಷ ಕೇಳುತ್ತಿದ್ದಾರೆ. ಹಿಂದೆ ಕೂಡ ಇಂತಹ ಕೆಲಸ ಮಾಡಿದ್ದಾರೆ. ಇವರು ಯಾರ, ಯಾರ ಬಳಿ ₨3 ಲಕ್ಷ ವಸೂಲಿ ಮಾಡಿದ್ದಾರೆ ಎನ್ನುವುದಕ್ಕೆ ನನ್ನ ಬಳಿ ಸಾಕ್ಷಿ ಇವೆ’ ಎಂದು ಹೇಳಿದರು.

ADVERTISEMENT

‘ಹಿಂದೆ ಎಚ್‌.ಡಿ.ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದ ಜಿಲ್ಲೆಯಲ್ಲಿ ಇವರದೇ ದರ್ಬಾರ್‌. ಅಧಿಕಾರಿಗಳಿಗೆ ವರ್ಗಾವಣೆಗೆ ಮಾಡಿಸುವುದಾಗಿ ಹೆದರಿಕೆ ಹಾಕುತ್ತಿದ್ದರು. ಐದಾರು ವರ್ಷ ರೇವಣ್ಣನ ಹೆಸರು ಹೇಳಿಕೊಂಡು ಜೀವನ ಮಾಡಿದ್ದಾರೆ. ನಾವು ಆ ರೀತಿ ಜೀವನ ಮಾಡುವುವರಲ್ಲ. ಯಾರ ಬಳಿ ದುಡ್ಡಿಗೆ ಬೇಡಿಕೆ ಇಟ್ಟಿದ್ದೇವೆ. ಯಾರು ನಮಗೆ ಹಣ ಕೊಟ್ಟಿದ್ದಾರೆ ತೋರಿಸಲಿ’ ಎಂದು ಕೇಳಿದರು.

‘ಗಣಿಗಾರಿಕೆಯನ್ನು ನಾವು ಮಾಡುತ್ತಿಲ್ಲ. ನಾವು ಗಣಿಗಾರಿಕೆ ಮಾಡಬಾರದು ಎಂದು ಕಾನೂನೇನಾದರೂ ಇದೆಯಾ? ಈವರೆಗೆ ನಾವು ಯಾವ ಗುತ್ತಿಗೆದಾರರಿಗೂ ತೊಂದರೆ ಮಾಡಿಲ್ಲ. ನಾಗರಾಜ್‌ ಅವರ ಮಗನೇ ಅಣಕನೂರು, ನಂದಿ ಬಳಿ ಕೆಲಸ ಮಾಡಿಸಿದ್ದಾನೆ. ಕೇಳಿ ಅವರನ್ನು ನಾವು ತೊಂದರೆ ಮಾಡಿದ್ದೇವಾ’ ಎಂದು ಮರು ಪ್ರಶ್ನಿಸಿದರು.

‘ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ನಿರ್ದೇಶಕರಾಗಿರುವ ನಾಗರಾಜ್‌ ಇತ್ತೀಚೆಗೆ ಹಾಲಿನ ಡೇರಿಗಳಿಂದ ಕಾನೂನುಬಾಹಿರವಾಗಿ ಹಣ ವಸೂಲಿ ಮಾಡಿ ಸನ್ಮಾನ ಮಾಡಿಸಿಕೊಂಡಿದ್ದಾರೆ. ಅಭಿಮಾನಿಗಳು ಬೇಕಾದರೆ ಕೈಯಿಂದ ದುಡ್ಡು ಹಾಕಿ ಸನ್ಮಾನ ಮಾಡಲಿ. ಅದು ಬಿಟ್ಟು ಡೇರಿಗಳಿಂದ ಹಣ ವಸೂಲಿ ಮಾಡಿ ಸನ್ಮಾನ ಮಾಡಿಸಿಕೊಳ್ಳುವುದು ಅಷ್ಟು ಸಮಂಜಸವಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.