ADVERTISEMENT

ಖಾಲಿ ಪುಸ್ತಕ ಪ್ರದರ್ಶನ: ಸಂಪು

​ಪ್ರಜಾವಾಣಿ ವಾರ್ತೆ
Published 28 ಜನವರಿ 2016, 8:50 IST
Last Updated 28 ಜನವರಿ 2016, 8:50 IST
ಚಿಂತಾಮಣಿಯಲ್ಲಿ ಬುಧವಾರ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಚಿಂತಾಮಣಿಯಲ್ಲಿ ಬುಧವಾರ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.   

ಚಿಂತಾಮಣಿ: ಮುಷ್ಕರ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಬೇಕು ಎಂದು ಒತ್ತಾಯಿಸಿ ಬುಧವಾರ ನಗರದಲ್ಲಿ ವಿದ್ಯಾರ್ಥಿಗಳು ರಸ್ತೆ ತಡೆ, ಖಾಲಿ ಪುಸ್ತಕಗಳ ಪ್ರದರ್ಶನ ನಡೆಸಿ ಒತ್ತಾಯಿಸಿದರು.

ನಗರದ ಸರ್ಕಾರಿ ಬಾಲಕರ ಹಾಗೂ ಮಹಿಳಾ ಕಾಲೇಜಿನ ನೂರಾರು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಖಾಲಿ ಪುಸ್ತಕಗಳನ್ನು ಪ್ರದರ್ಶಿಸುತ್ತಾ, ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ತಾಲ್ಲೂಕು ಕಚೇರಿ ಮುಂದಿನ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.

ಎಬಿವಿಪಿ ವಿಭಾಗೀಯ ಸಂಚಾಲಕ ಮಂಜುನಾಥರೆಡ್ಡಿ ಮಾತನಾಡಿ, ಅತಿಥಿ ಉಪನ್ಯಾಸಕರ ಮುಷ್ಕರದಿಂದಾಗಿ ಪಾಠಗಳು ನಡೆಯದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಶಿಕ್ಷಣ ಇಲಾಖೆ ಮತ್ತು ಸರ್ಕಾರ ಸಮಸ್ಯೆಯ ಕಡೆಗೆ ಗಮನಹರಿಸದೆ ನಿದ್ದೆ ಮಾಡುತ್ತಿವೆ ಎಂದು ಟೀಕಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಬಾಲಕರ ಮತ್ತು ಬಾಲಕಿಯರ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರಿಗಿಂತ ಅತಿಥಿ ಉಪನ್ಯಾಸಕರ ಸಂಖ್ಯೆಯೇ ಹೆಚ್ಚು. ಮಹಿಳಾ ಕಾಲೇಜಿನಲ್ಲಿ 76 ಉಪನ್ಯಾಸಕರ ಹುದ್ದೆಗಳಿದ್ದು ಕೇವಲ 33 ಜನ ಕಾಯಂ ಉಪನ್ಯಾಸಕರಿದ್ದಾರೆ. ಬಾಲಕರ ಕಾಲೇಜಿನಲ್ಲಿ 49 ಉಪನ್ಯಾಸಕ ಹುದ್ದೆಗಳಿದ್ದು ಕೇವಲ 19 ಕಾಯಂ ಉಪನ್ಯಾಸಕರಿದ್ದಾರೆ ಎಂದು ತಿಳಿಸಿದರು.

ಒಬ್ಬ ಕಾಯಂ ಉಪನ್ಯಾಸಕರ ಸ್ಥಾನಕ್ಕೆ ಇಬ್ಬರು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗುತ್ತದೆ. ಎರಡೂ ಕಾಲೇಜುಗಳು ಸೇರಿ ಸುಮಾರು 140 ಅತಿಥಿ ಉಪನ್ಯಾಸಕರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ. ತರಗತಿಗಳು ನಡೆಯದೆ ವಿದ್ಯಾರ್ಥಿಗಳ ಭವಿಷ್ಯವೇ ಹಾಳಾಗುತ್ತಿದೆ  ಎಂದು ದೂರಿದರು.
ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.

ವಿದ್ಯಾರ್ಥಿ ಮುಖಂಡರಾದ ಸುರೇಶ್‌, ಕಿಶೋರ್‌, ಮಲ್ಲಿಕಾರ್ಜುನ, ಮಂಜುನಾಥ್‌, ರೋಷನ್‌ ಜಮೀರ್‌, ಸೌಂದರ್ಯ, ಲಾವಣ್ಯ, ಸಂಗೀತ, ಅಂಬಿಕಾ, ಮೌನಿಕಾ, ಜಾಹ್ನವಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.