ADVERTISEMENT

ಖಾಸಗಿ ವಿ.ವಿ.ಗೆ ಅವಕಾಶ: ಎಬಿವಿಪಿ ಸಂಪು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 6:39 IST
Last Updated 4 ಡಿಸೆಂಬರ್ 2012, 6:39 IST

ಚಿಂತಾಮಣಿ: ಸರ್ಕಾರ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ನೀಡಬಾರದು, ನೀಡಲೇಬೇಕು ಎನ್ನುವ ಪರಿಸ್ಥಿತಿ ಬಂದರೆ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿ ಸೋಮವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.  

ನಗರದ ಪಿಯು ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಬೆಂಗಳೂರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ನಂತರ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಜ್ಯದಾದ್ಯಂತ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಎಲ್.ಕೆ.ಜಿ ಮತ್ತು ಯು.ಕೆ.ಜಿ ಶಾಲೆಗಳನ್ನು ಅವುಗಳ ಪ್ರವೇಶ ನೀತಿ, ಶುಲ್ಕ ನೀತಿಗಳನ್ನು ಸ್ಪಷ್ಟವಾಗಿ ರೂಪಿಸದೆ ವಿದ್ಯಾರ್ಥಿಗಳು, ಪೋಷಕರು ಶೋಷಣೆಗೊಳಗಾಗಿದ್ದಾರೆ. ಈ ಸಮಸ್ಯೆಯನ್ನೆ ತಡೆಗಟ್ಟಲಾಗದ ಸರ್ಕಾರಕ್ಕೆ ಖಾಸಗಿ ವಿ.ವಿ.ಗಳ ವ್ಯಾಪಾರೀಕರಣ ತಡೆಗಟ್ಟಲು ಸಾಧ್ಯವೇ ಎಂದು ಪ್ರತಿಭಟನಾಕಾರರು ಟೀಕಿಸಿದರು.

ಖಾಸಗಿ ವಿ.ವಿ.ಗೆ ಅನುಮತಿ ನೀಡುವ ಮುನ್ನ ಈಗಿನ ಸಿ.ಇ.ಟಿ. ಮಾದರಿಯಂತೆ ಶುಲ್ಕ ನೀತಿ, ಪ್ರವೇಶ ನೀತಿ ಒಂದೇ ಪ್ರವೇಶ ಪರೀಕ್ಷೆ, ಕುಲಪತಿ, ಕುಲಸಚಿವರ ನೇಮಕಾತಿಗಳಲ್ಲಿ ಶೇ 50 ರಷ್ಟು ಅಧಿಕಾರ ಸರ್ಕಾರದ ಕೈಯಲ್ಲಿ ಇರುವಂತೆ ಕಾಯ್ದೆ ರೂಪಿಸಬೇಕು. ನಂತರ ಖಾಸಗಿ ವಿ.ವಿ.ಗಳಿಗೆ ಅನುಮತಿ ನೀಡುವ ಬಗ್ಗೆ ಯೋಚಿಸಬಹುದು ಎಂದರು.

ಪೂರ್ವ ತಯಾರಿ, ಸ್ಪಷ್ಟ ಮಾರ್ಗಸೂಚಿಗಳಿಲ್ಲದೆ ಖಾಸಗಿ ವಿವಿ ಪ್ರಾರಂಭಕ್ಕೆ ಅನುಮತಿ ನೀಡಲು ಹೊರಟಿರುವ ಸರ್ಕಾರದ ಕ್ರಮ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈಗಾಗಲೇ ಯು.ಜಿ.ಸಿ ಕಪ್ಪು ಪಟ್ಟಿಯಲ್ಲಿ ಸೇರಿರುವ ಹಲವು ಡೀಮ್ಡ ವಿ.ವಿ.ಗಳು ಬೇರೆ ಬೇರೆ ಹೆಸರಿನಲ್ಲಿ ಖಾಸಗಿ ವಿವಿಗಳ ಸ್ಥಾಪನೆಗೆ ಮುಂದಾಗಿರುವ ಮಾಹಿತಿಯಿದ್ದು, ಸರ್ಕಾರ ಈ ವಿಚಾರವನ್ನು ಲಘುವಾಗಿ ಪರಿಗಣಿಸಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ವಿದ್ಯಾರ್ಥಿ ಮುಖಂಡರಾದ ಮಂಜುನಾಥರೆಡ್ಡಿ, ವಿವೇಕ್, ಲಕ್ಷ್ಮಣ್, ಟಿಪ್ಪು, ರಾಜೀವ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.