ADVERTISEMENT

ಗೋಶಾಲೆ ತೆರೆಯಲು ಆಗ್ರಹ: ಸಿಪಿಎಂ ಧರಣಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 8:50 IST
Last Updated 17 ಏಪ್ರಿಲ್ 2012, 8:50 IST

ಚಿಂತಾಮಣಿ: ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿರುವುದರಿಂದ ಗೋಶಾಲೆಗಳನ್ನು ತೆರೆಯಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸೋಮವಾರ ತಹಶೀಲ್ದಾರ್ ಮೂಲಕ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿದರು.

ಬರಗಾಲದ ಘೋಷಣೆ ಮಾಡಿ ತಿಂಗಳುಗಳು ಕಳೆದರೂ ಜನತೆ ಮತ್ತು ಜಾನುವಾರಿಗೆ ಅನುಕೂಲವಾಗುವಂತಹ ಯಾವುದೇ ಯೋಜನೆ ಜಾರಿಗೆ ತಂದಿಲ್ಲ. ಜಾನುವಾರಿಗೆ ಮೇವು-ನೀರು ಸಿಗದೆ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ತಾಲ್ಲೂಕಿನ ರೈತರು, ಕಾರ್ಮಿಕರು ಮೂರು ಹೊತ್ತು ಊಟ ಮಾಡಿ ಜೀವನ ನಡೆಸುವುದು ದುಸ್ತರವಾಗಿದೆ. ಕೆರೆಗಳ ಹೂಳು ತೆಗೆಯುವುದು ಮತ್ತಿತರ ಕೆಲಸಗಳನ್ನು ಒದಗಿಸಬೇಕು. ತಾಲ್ಲೂಕಿನಲ್ಲಿ ಸುಮಾರು 15 ವರ್ಷಗಳಿಂದ ಮಳೆ-ಬೆಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಮತ್ತು ತರಕಾರಿಗಳ ಕಮಿಷನ್ ಏಜಂಟರು ಮತ್ತು ಅಧಿಕಾರಿಗಳು ಒಪ್ಪಂದ ಮಾಡಿಕೊಂಡು 100 ರೂಪಾಯಿಗೆ 10ರೂಪಾಯಿ ಕಮಿಷನ್ ಪಡೆಯುತ್ತಿದ್ದಾರೆ. ಕೂಡಲೆ ಇದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದ್ದಾರೆ.

ರೈತರಿಗೆ ಅಗತ್ಯವಾದ ಟ್ರಾನ್ಸ್ ಫಾರ್ಮರ್‌ಗಳನ್ನು ಒಂದು ವಾರದೊಳಗೆ ಹಾಕಿಸಿಕೊಡಬೇಕು, ಸುಟ್ಟುಹೋದ ಟ್ರಾನ್ಸ್‌ಫಾರ್ಮರ್‌ಗಳನ್ನು ಒಂದು ದಿನದೊಳಗೆ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಬೆಳೆ ನಷ್ಟವನ್ನು ಬೆಸ್ಕಾಂ ಭರಿಸಬೇಕು. ಜಿಲ್ಲೆಗೆ ಶಾಶ್ವತ ನೀರಾವರಿಯನ್ನು ಒದಗಿಸುವಂಥ ಡಾ.ಪರಮಶಿವಯ್ಯ ವರದಿಯನ್ನು ಶೀಘ್ರ ಜಾರಿಗೆ ತರಬೇಕೆಂದು ಒತ್ತಾಯಿಸಲಾಯಿತು.

ಉದ್ಯೋಗ ಖಾತರಿ ಯೋಜನೆಯ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಯೋಜನೆಯಡಿಯಲ್ಲಿ ಮತ್ತೆ ಅವಕಾಶ ನೀಡಬೇಕು. ಈ ಬೇಡಿಕೆಗಳು ಈಡೇರದಿದ್ದರೆ ಏ.30ಂದು ಬಂದ್ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಸಂಘ ಹಾಗೂ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ರಘುನಾಥರೆಡ್ಡಿ, ಕಾರ್ಯದರ್ಶಿ ಎಂ.ನಾರಾಯಣಸ್ವಾಮಿ ಮುಖಂಡರಾದ ಎಸ್.ವೆಂಕಟಸುಬ್ಬಾರೆಡ್ಡಿ, ಶ್ರಿರಾಮರೆಡ್ಡಿ, ಪಾರ್ವತಮ್ಮ, ವೆಂಕಟಮ್ಮ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.