ADVERTISEMENT

ಚಿಂತಾಮಣಿ: ಪಡಿತರ ಚೀಟಿಗಾಗಿ ನೂಕು ನುಗ್ಗಲು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 7:16 IST
Last Updated 13 ಮಾರ್ಚ್ 2018, 7:16 IST

ಚಿಂತಾಮಣಿ: ಪಡಿತರ ಚೀಟಿ ಪಡೆಯಲು ಜನರು ತಾಲ್ಲೂಕು ಕಚೇರಿ ಎದುರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪರಿಪಾಟಲು ಪಡುವ ಸ್ಥಿತಿ ವಾರದಿಂದ ಮಾಮೂಲು ಸಂಗತಿಯಾಗಿದೆ. ನೂಕು ನುಗ್ಗಲು, ವಾಗ್ವಾದಗಳೂ ಇಲ್ಲಿ ಸಾಮಾನ್ಯವಾಗಿವೆ.

ಶನಿವಾರ ಮತ್ತು ಭಾನುವಾರ ರಜೆ ಇದ್ದುದರಿಂದ ಸೋಮವಾರ ಹೆಚ್ಚಿನ ಜನರು ಕಚೇರಿಗೆ ಬಂದಿದ್ದರು. ಇದರಿಂದಾಗಿ ಒತ್ತಡ ಅಧಿಕವಾಗಿತ್ತು. ಅರ್ಜಿ ಸಲ್ಲಿಸಿ ವರ್ಷಾನುಗಟ್ಟಲೆ ಕಾಯುತ್ತಿದ್ದವರಿಗೆ ಆದಾಯ ಪ್ರಮಾಣ ಪತ್ರ ನೀಡಿದರೆ ಸ್ಥಳದಲ್ಲೇ ಪಡಿತರ ಚೀಟಿ ಮುದ್ರಿಸಿ ಕೊಡಲಾಗುತ್ತಿದೆ. ಹೀಗಾಗಿ ಜನರು ಚೀಟಿ ಪಡೆಯಲು ಮುಗಿ ಬೀಳುತ್ತಿದ್ದಾರೆ.

ಚುನಾವಣೆಯ ಪ್ರಯುಕ್ತ ಈ ವ್ಯವಸ್ಥೆ ಮಾಡಲಾಗಿದೆ. ಯಾವುದೇ ವಿವರ ಪರಿಶೀಲಿಸಿ ನೋಡದೆ ಆದಾಯ ಪ್ರಮಾಣ ಪತ್ರ ನೀಡಿದವರಿಗೆಲ್ಲ ಪಡಿತರ ಚೀಟಿ ನೀಡಲಾಗುತ್ತಿದೆ. ಹೀಗಾಗಿ ಜನರು 2–3 ಕಾರ್ಡ್‌ ಪಡೆಯುತ್ತಿದ್ದಾರೆ ಎಂದು ಹಿರಿಯರೊಬ್ಬರು ಆರೋಪಿಸಿದರು.

ADVERTISEMENT

ಸಾಧ್ಯವಾದಷ್ಟು ಪಡಿತರ ಚೀಟಿಗಳನ್ನು ಮುದ್ರಿಸಿ ಕೊಡುತ್ತಿದ್ದೇವೆ. ಆದರೂ ಸಾಲು ಕಡಿಮೆಯಾಗುತ್ತಿಲ್ಲ. ಜನರೂ ಸಹ ತಾಳ್ಮೆಯಿಂದ ಸಹಕರಿಸುತ್ತಿಲ್ಲ. ಇದರಿಂದ ತೊಂದರೆಯಾಗಿದೆ. ಶೀಘ್ರ ಸಮಸ್ಯೆ ನಿವಾರಿಸಲಾಗುವುದು ಎಂದರು.

ಚುನಾವಣೆಯವರೆಗೆ ಮಾತ್ರ ಈ ಕಾರ್ಡ್‌ ಇರುತ್ತದೆ. ನಂತರ ರದ್ದು ಪಡಿಸುವರೇ ಎಂದು ಸರತಿ ಯಲ್ಲಿ ನಿಂತಿದ್ದ ರಾಮಯ್ಯ ಶಂಕೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.