ADVERTISEMENT

ಚಿಂತಾಮಣಿ: ರಂಗು ಪಡೆದ ಚುನಾವಣಾ ಕಣ

ಹಳ್ಳಿಗಳಲ್ಲಿ ಅಭ್ಯರ್ಥಿಗಳ ಬಿಡುವಿಲ್ಲದ ಪ್ರಚಾರ, ಎದುರಾಳಿ ಮಣಿಸಲು ನಾನಾ ತಂತ್ರಗಳಿಗೆ ಮೊರೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 9:40 IST
Last Updated 26 ಏಪ್ರಿಲ್ 2018, 9:40 IST

ಚಿಂತಾಮಣಿ: ವಿಧಾನಸಭಾ ಚುನಾವಣೆಗೆ ವಿವಿಧ ಅಭ್ಯರ್ಥಿಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸು ತ್ತಿದ್ದಂತೆ ಚುನಾವಣಾ ಕಣ ರಂಗೇರಿದ್ದು, ರಾಜಕಾರಣಿಗಳು ಮೈಕೊಡವಿ ಕೊಂಡು ಭರ್ಜರಿ ಪ್ರಚಾರಕ್ಕೆ ಮತ್ತು ಮತದಾರರನ್ನು ಸೆಳೆಯಲು ನಾನಾ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯ ನಂತರ ಸ್ಥಗಿತಗೊಂಡಿದ್ದ ರಾಜಕೀಯ ಚಟುವಟಿಕೆಗಳು ಸದ್ಯ ರಂಗೇರಿವೆ. ಹಳ್ಳಿ ಹಳ್ಳಿಗಳಲ್ಲಿ ಮತ ಯಾಚನೆ ಜತೆಗೆ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಜೋರಾಗಿ ನಡೆಯುತ್ತಿದೆ. ಎದುರಾಳಿಗಳನ್ನು ಮಣಿಸಲು ಯುದ್ಧ ಕಾಲದ ತಂತ್ರ ರೂಪಿಸುವ ಕೆಲಸ ಕೂಡ ಬಿರುಸಿನಿಂದಲೇ ನಡೆದಿದೆ.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ವಾಣಿ ಕೃಷ್ಣಾರೆಡ್ಡಿ, ಜೆಡಿಎಸ್‌ ಹುರಿಯಾಳು ಎಂ.ಕೃಷ್ಣಾರೆಡ್ಡಿ, ಬಿಜೆಪಿಯಿಂದ ವಕೀಲ ನಾ.ಶಂಕರ್‌ ಹಾಗೂ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಕಾದಾಡಲು ಅಣಿಗೊಳ್ಳುತ್ತಿದ್ದಾರೆ. ಕಳೆದ ಬಾರಿ ಪ್ರಮುಖವಾಗಿದ್ದ ಮುಖಗಳೇ ಈ ಬಾರಿ ಕೂಡ ಎದುರು ಬದರಾಗಿದ್ದು, ಇವುಗಳ ನಡುವೆ ಶಂಕರ್ ಹೊಸದಾಗಿ ರಂಗಪ್ರವೇಶ ಮಾಡಿದ್ದಾರೆ.

ADVERTISEMENT

ರಾಜಕೀಯವಾಗಿ ಜಿದ್ದಾ ಜಿದ್ದಿ ಹಾಗೂ ಅತಿ ಸೂಕ್ಷ್ಮವಾಗಿರುವ ಚಿಂತಾಮಣಿ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮಣೆ ಹಾಕುವ ಮನೋಭಾವವೇ ಹೆಚ್ಚು. ಸ್ವಾತಂತ್ರ್ಯಪೂರ್ವದಿಂದಲೂ ಟಿ.ಕೆ.ಗಂಗಿರೆಡ್ಡಿ ಮತ್ತು ಆಂಜನೇಯರೆಡ್ಡಿ ಕುಟುಂಬಗಳ ನಡುವೆ ಗಿರಕಿ ಹೊಡೆಯುತ್ತಿದ್ದ ರಾಜಕೀಯ ಸುಳಿ ಕಳೆದ ಚುನಾವಣೆಯಲ್ಲಿ ತನ್ನ ವರ್ತುಲ ದಾಟಿ ಬಂದಿತ್ತು.

ಬೆಂಗಳೂರಿನಿಂದ ಬಂದ ಉದ್ಯಮಿ ಎಂ.ಕೃಷ್ಣಾರೆಡ್ಡಿ ಅವರು ಮೊದಲ ಯತ್ನದಲ್ಲೇ ಕ್ಷೇತ್ರದಲ್ಲಿ ‘ಅದೃಷ್ಟ’ ಒಲಿಸಿಕೊಳ್ಳುವ ಮೂಲಕ ಗಂಗಿರೆಡ್ಡಿ ಕುಟುಂಬದಿಂದ ರಾಜಕೀಯ ಶಕ್ತಿ ಕಸಿದುಕೊಂಡು ಕ್ಷೇತ್ರದ ಇತಿಹಾಸದಲ್ಲಿ ನೂತನ ದಾಖಲೆ ಬರೆದರು. ಕ್ಷೇತ್ರದಲ್ಲಿ ತಮ್ಮದೇ ನೆಲೆ ರೂಪಿಸಿ ಕೊಂಡಿದ್ದಾರೆ.

ಸುಧಾಕರ್‌ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ವಲ್ಪ ಮತಗಳ ಅಂತರದಿಂದ ಸೋತರೂ ನಂತರ ನಡೆದ ಗ್ರಾಮ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುವ ಮೂಲಕ ಕ್ಷೇತ್ರದಲ್ಲಿರುವ ತಮ್ಮ ಹಿಡಿತ ಮತ್ತಷ್ಟು ಬಿಗಿ ಮಾಡಿಕೊಂಡಿದ್ದರು. ಇದೀಗ ಊರೂರು ಸುತ್ತಿ ಈ ಹಿಂದಿನ ತಮ್ಮ ಅವಧಿಯ ಅಭಿವೃದ್ಧಿಯ ಮೆಲುಕು ಹಾಕುವ ಜತೆಗೆ ಶಾಸಕರ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಆರೋಪಗಳನ್ನು ಮಾಡುತ್ತಿದ್ದಾರೆ.

‘ಬಿಜೆಪಿ ಅಭ್ಯರ್ಥಿಯದು ಸದಾ ಪ್ರಧಾನಿ ಮೋದಿ ಅವರ ಜಪವಾಗಿದ್ದು, ಬೇರೆ ರಾಜ್ಯಗಳಂತೆ ರಾಜ್ಯದಲ್ಲಿ ಕೂಡ ಮೋದಿ ಅಲೆ ತನ್ನ ಕೆಲಸ ಮಾಡಲಿದೆ ಎಂದು ನಂಬಿರುವ ಅವರು ದೊಡ್ಡ ಭರವಸೆಯೊಂದಿಗೆ ಪ್ರಚಾರಕ್ಕೆ ಧುಮುಕಿದ್ದಾರೆ. ಮನೆ ಮನೆಗೆ ಭೇಟಿ ನೀಡಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮತದಾರರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳುತ್ತಾರೆ.

ಜೆಡಿಎಸ್‌ ಶಾಸಕ ಎಂ.ಕೃಷ್ಣಾರೆಡ್ಡಿ ಕ್ಷೇತ್ರದ ಎಲ್ಲ ಹೋಬಳಿಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ನೆಪದಲ್ಲಿ ಎಲ್ಲ ಪಂಚಾಯಿತಿಗಳಲ್ಲೂ ಪ್ರವಾಸ ಮಾಡಿ ತಮ್ಮ ಬೆಂಬಲಿಗರನ್ನು ಹೋರಾಟಕ್ಕೆ ಹುರಿದುಂಬಿಸಿದ್ದಾರೆ. ಜಯಂತಿಗಳಿಗೆ, ಸಂಘ ಸಂಸ್ಥೆಗಳಿಗೆ ಹಣಕಾಸಿನ ಸಹಾಯ ಮಾಡುವ ಮೂಲಕ ಮತದಾರರ ಓಲೈಕೆಗೆ ಮುಂದಾಗಿದ್ದಾರೆ ಎನ್ನುತ್ತಾರೆ ಸ್ಥಳೀಯ ರಾಜಕಾರಣ ಬಲ್ಲವರು.

ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ವಾಣಿ ಕೃಷ್ಣಾರೆಡ್ಡಿ ಹಿಂದಿನಂತೆ ಸಂಸದ ಕೆ.ಎಚ್‌.ಮುನಿಯಪ್ಪ ಬೆಂಬಲ ನೆಚ್ಚಿಕೊಂಡು ಎರಡನೇ ಸುತ್ತಿನ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲ್ಲಬೇಕು ಎನ್ನುವ ಛಲವಿಲ್ಲ. ಜೆಡಿಎಸ್‌ಗೆ ಪರೋಕ್ಷವಾಗಿ ಬೆಂಬಲಿಸಿ ಹಿಂದಿನಂತೆ ಎಂ.ಸಿ.ಸುಧಾಕರ್ ಅವರನ್ನು ಮಣಿಸುವುದು ಕೆಲಸ ರಾಜಕೀಯ ತಂತ್ರ ಹೆಣೆಯಲಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಎಂ.ರಾಮಕೃಷ್ಣಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.