ADVERTISEMENT

ಜನಮನ ತಣಿಸಿದ ಗಡಿನಾಡು ಉತ್ಸವ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 10:12 IST
Last Updated 18 ಡಿಸೆಂಬರ್ 2013, 10:12 IST

ಚಿಂತಾಮಣಿ: ಸಿನಿಮಾ, ಖಾಸಗಿ ದೂರದರ್ಶನ ಚಾನೆಲ್‌ಗಳು ಹಾಗೂ ಕೆಲ ಸಮೂಹ ಮಾಧ್ಯಮಗಳು ನಮ್ಮ ಸಾಂಸ್ಕೃತಿಕ ಪರಂಪರೆಯನ್ನೇ ನುಂಗಿ ಹಾಕಿದ್ದು, ವಿದ್ಯಾರ್ಥಿ ಮತ್ತು ಯುವಜನರ ಮೇಲೆ ಕೆಟ್ಟ ಪ್ರಭಾವ ಬೀರುತ್ತಿವೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ರೆಡ್ಡಪ್ಪ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಬಟ್ಲಹಳ್ಳಿಯಲ್ಲಿ ಮಂಗಳವಾರ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ದೊಡ್ಡಬಳ್ಳಾಪುರದ ಜಾನಪದ ಸಾಂಸ್ಕೃತಿಕ ಕಲಾ ಸಂಘ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಗಡಿನಾಡ ಸಾಂಸ್ಕೃತಿಕ ಉತ್ಸವದಲ್ಲಿ ಅವರು ಮಾತನಾಡಿದರು.
ಸಮಾಜವು ವೈಜ್ಞಾನಿಕವಾಗಿ ಮುಂದುವರಿದಂತೆ ದೃಶ್ಯ ಮಾದ್ಯಮಗಳ ಪ್ರಭಾವದಿಂದ ಸನಾತನ ಕಲೆ, ಸಂಸ್ಕೃತಿಗೆ ಧಕ್ಕೆಯಾಗಿದೆ.

ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ಪರಂಪರೆಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ. ಜಾನಪದ ಕಲೆಗಳು ವಿನಾಶದ ಅಂಚಿನಲ್ಲಿವೆ. ಬೇಸಿಗೆಯ ಕಾಲದಲ್ಲಿ ಹಳ್ಳಿಗಳಲ್ಲಿ ಕಂಡುಬರುತ್ತಿದ್ದ ನಾಟಕ, ಕೋಲಾಟ, ಹುಲಿವೇಷ, ಗೀಗೀಪದಗಳು ಮಾಯವಾಗುತ್ತಿವೆ ಎಂದು ವಿಷಾದಿಸಿದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವಕುಮಾರ್‌ ಮತನಾಡಿ ಸಂಸ್ಕೃತಿ ಉಳಿದರೆ ಮಾತ್ರ ಭಾಷೆ ಉಳಿಯುತ್ತದೆ. ಕನ್ನಡ ಭಾಷೆ ಶ್ರೀಮಂತವಾಗವಾಗಬೇಕಾದರೆ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸಬೇಕು. ಗಡಿಪ್ರದೇಶಗಳಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ ಕನ್ನಡದ ವಾತಾವರಣ ಸ್ವಲ್ಪ ಮಟ್ಟಿಗೆ ಉತ್ತಮಗೊಳ್ಳುತ್ತಿದ್ದರೂ ಬೆಂಗಳೂರಿನಲ್ಲಿ ಮಾತ್ರ ಕನ್ನಡಕ್ಕೆ ಧಕ್ಕೆಯಾಗುತ್ತಿದೆ ಎಂದರು.

ಜಾನಪದ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ವಿ.ರಾಮಚಂದ್ರ ಮಾತನಾಡಿ ವಿನಾಶದ ಅಂಚಿನಲ್ಲಿರುವ ಕಲಾ ಪ್ರಕಾರಗಳನ್ನು ಇಂದಿನ ವಿದ್ಯಾರ್ಥಿ, ಯುವಜನರಿಗೆ ಪರಿಚಯಿಸುವ ದೃಷ್ಟಿಯಿಂದ ಗಡಿನಾಡು ಪ್ರಾಧಿಕಾರದ ಸಹಯೋಗದಲ್ಲಿ ರಾಗ್ಯದ ಗಡಿ ಭಾಗಗಳಲ್ಲಿ ಗಡಿನಾಡ ಉತ್ಸವಗಳನ್ನು ನಡೆಸುತ್ತಿರುವುದಾಗಿ ತಿಳಿಸಿದರು.

ಗಡಿನಾಡ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಆಕರ್ಷಕ ಸಾಂಸ್ಕೃತಿಕ ಕಲಾ ಪ್ರಕಾರಗಳು ಸಾರ್ವಜನಿಕರಿಗೆ ಉತ್ತಮ ಮನರಂಜನೆ ನೀಡಿದವು.

ದೊಡ್ಡಬಳ್ಳಾಪುರದ ಕೆಂಪ ಅರಸಪ್ಪ ತಂಡ ಪ್ರದರ್ಶಿಸಿದ ಸೋಮನಕುಣಿತ, ಬೆಂಗಳೂರಿನ ಕಡಲು ಶ್ರೀನಿವಾಸ್‌ ಮತ್ತು ತಂಡವು ನಡೆಸಿಕೊಟ್ಟ ಜನಪದ ಜಾದೂ ಪ್ರದರ್ಶನ, ಚಿತ್ರದುರ್ಗದ ಮೈಲಾರಪ್ಪ ಸಂಗಡಿಗರು ನಡೆಸಿಕೊಟ್ಟ ಗೊರವರ ಕುಣಿತ, ಶಿವಮೊಗ್ಗದ ಸಂತೋಷ್‌ ತಂಡದ ಆಕರ್ಷಕ ಡೊಳ್ಳುಕುಣಿತವು ಸಾವಿರಾರು ಜನರ ಮನಸೂರೆಗೊಂಡಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಾರೆಡ್ಡಿ ಗಡಿನಾಡ ಉತ್ವವ ಉದ್ಘಾಟಿಸಿದರು. ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರ್‌.ಜನಾರ್ಧನ್‌ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.