ADVERTISEMENT

ಜನರ ಸಮಸ್ಯೆ ನಿವಾರಣೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 10:14 IST
Last Updated 21 ಡಿಸೆಂಬರ್ 2012, 10:14 IST
ಬಾಗೇಪಲ್ಲಿ: ವಿಕಲಚೇತನ, ವೃದ್ಯಾಪ್ಯ, ಸಂಧ್ಯಾಸುರಕ್ಷಾ, ವಿಧವಾ ವೇತನಗಳ ಅರ್ಹ ಫಲಾನುಭವಿಗಳಿಗೆ ಕೆಲವೇ ದಿನಗಳಲ್ಲಿ ವೇತನಗಳನ್ನು ಕಲ್ಪಿಸಲಾಗುವುದು ಎಂದು ತಹಶೀಲ್ದಾರ್ ಟಿ.ಎನ್.ಕೃಷ್ಣಮೂರ್ತಿ ತಿಳಿಸಿದರು. 

ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಗುರುವಾರ ನಡೆದ ಸಾರ್ವಜನಿಕರ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, `ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸಾಕಷ್ಟು ಅರ್ಜಿಗಳು ಬಂದಿವೆ. ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಮುಗಿಯುವ ಹಂತದಲ್ಲಿ ಇದೆ. ರೈತರಿಗೆ ಬೆಲೆ ವಿಮೆ ಜಾರಿಗೊಳಿಸಲು ಕ್ರಮ ಜರುಗಿಸಲಾಗುವುದು' ಎಂದರು. 

`ಪಟ್ಟಣದಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಸಾರಿಗೆ ಮತ್ತು ಖಾಸಗಿ ವಾಹನಗಳನ್ನು ಪಾದಚಾರಿ ಮಾರ್ಗದ ಮೇಲೆಯೇ ನಿಲುಗಡೆ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಕಿರಕಿರಿ ಮತ್ತು ತೊಂದರೆ ಆಗುತ್ತದೆ. ವಾಹನದಟ್ಟಣೆಯಿಂದಲೂ ಸಮಸ್ಯೆ ಹೆಚ್ಚಾಗಿದೆ' ಎಂದು ಬಿಜೆಪಿ ಮುಖಂಡ ಟಿ.ರಾಮಪ್ಪ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಬ್‌ಇನ್ಸ್‌ಪೆಕ್ಟರ್ ವಿ.ಮುನಿರೆಡ್ಡಿ, `ಪಟ್ಟಣದಲ್ಲಿ ಚರಂಡಿ ಕಾಮಗಾರಿ ಮುಗಿದ ಕೂಡಲೇ ವಾಹನಗಳಿಗೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಮಾಡಲಾಗುವುದು. ವಾಹನಗಳ ಸಂಚಾರ ಮತ್ತು ನಿಲುಗಡೆ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು' ಎಂದರು.

`ತಾಲ್ಲೂಕಿನಲ್ಲಿ ಬರದ ಛಾಯೆ ಇದೆ. ಆರ್ಥಿಕ ನಷ್ಟಕ್ಕೆ ತುತ್ತಾಗಿರುವ ರೈತರಿಗೆ ಬೆಳೆ ನಷ್ಟ ಪರಿಹಾರ ಕಲ್ಪಿಸಬೇಕು' ಎಂದು ರೈತ ಮುಖಂಡ ಎನ್.ಎಸ್.ಚಲಪತಿ ಕೋರಿದರು. `ಸರ್ಕಾರದ ಅನುದಾನದಡಿ ಬೆಳೆ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವನಾಗಪ್ಪ ತಿಳಿಸಿದರು. ಅಹವಾಲು ಮತ್ತು ದೂರುಗಳಿಗೆ ಸಂಬಂಧಿಸಿದಂತೆ ಪರಿಹಾರ ಕೋರಿ ಎಂಟು ಮಂದಿ ಅರ್ಜಿ ಸಲ್ಲಿಸಿದರು. ವಿವಿಧ ಇಲಾಖೆಗಳಿಂದ ಕೆಲವೇ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.