ADVERTISEMENT

ಜನರ ಸಮಸ್ಯೆ ಪರಿಹಾರಕ್ಕೆ ಆದ್ಯತೆ: ಸಂಪಂಗಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 6:20 IST
Last Updated 3 ಫೆಬ್ರುವರಿ 2011, 6:20 IST

ಬಾಗೇಪಲ್ಲಿ: ಪಟ್ಟಣದ ಅಭಿವೃದ್ದಿಗೆ ಚುನಾಯಿತ ಪ್ರತಿನಿಧಿಗಳು ಪಕ್ಷಭೇದ ಮರೆತು ಜನರಿಗೆ ನೆರವಾಗಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸಲು ಮುಂದಾಗಬೇಕು ಎಂದು ಶಾಸಕ ಎನ್.ಸಂಪಂಗಿ ತಿಳಿಸಿದರು.ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಪಟ್ಟಣದ ರಸ್ತೆ ಇದೀಗ ರಾಜ್ಯದ ಹೆದ್ದಾರಿಯಾಗಿರುವ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ 9 ಕೋಟಿ ರೂಪಾಯಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
 
ಪಟ್ಟಣದ ಮುಖ್ಯರಸ್ತೆಯ ರಸ್ತೆ ವಿಭಜಕಗಳಲ್ಲಿನ ವಿದ್ಯುತ್ ಕಂಬಗಳನ್ನು ತೆಗೆಯಲು ಈಗಾಗಲೇ ಬೆಸ್ಕಾಂ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಯಿಂದ ಹಣ ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ’ ಎಂದರು.ಪರಗೋಡು ಚಿತ್ರಾವತಿ ಬ್ಯಾರೇಜಿನಿಂದ ಬಾಗೇಪಲ್ಲಿ ಹಾಗೂ ಗುಡಿಬಂಡೆ ಪಟ್ಟಣಗಳಿಗೆ ನೀರು ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 124 ಗ್ರಾಮಗಳಿಗೆ ನೀರು ನೀಡಲಾಗುವುದು. ಸರ್ಕಾರಿ ಜಮೀನುಗಳನ್ನು ಗುರುತಿಸಿ ನಿವೇಶನ ಹಾಗೂ ಮನೆಗಳನ್ನು ಕಟ್ಟಿಸಿಕೊಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

‘ಕುಡಿಯುವ ನೀರು ಇಲ್ಲ’:ಪುರಸಭಾ ಸದಸ್ಯ ಪಿ.ಎಲ್.ಗಣೇಶ್ ಮಾತನಾಡಿ, ‘ಪಟ್ಟಣದ 3 ಹಾಗೂ 4 ನೇ ವಾರ್ಡ್‌ಗಳಿಗೆ ಚಿತ್ರಾವತಿ ನೀರು ಕೊಡಲು ಸಾಧ್ಯವಾಗಿಲ್ಲ.ಇನ್ನು ಉಳಿದಂತೆ 124 ಗ್ರಾಮಗಳಿಗೆ ನೀರು ಹೇಗೆ ಕೋಡುತ್ತೀರಿ? ಸುಮಾರು 3 ವರ್ಷಗಳಿಂದ ಪುರಸಭಾ ಮುಖ್ಯಾಧಿಕಾರಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ತಿಳಿಸಲಾಗುತ್ತಿದೆ.ಆದರೆ ಇಲ್ಲಿನ ಅಧಿಕಾರಿಗಳು ಚಕಾರವೆತ್ತುತ್ತಿಲ್ಲ’ ಎಂದು ಪ್ರಶ್ನಿಸಿದರು.

ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಸುಧಾಕರ್, ಅಧ್ಯಕ್ಷೆ ಸುಜಾತಮ್ಮಬಾಬುರೆಡ್ಡಿ, ಉಪಾಧ್ಯಕ್ಷ ಮಹಮದ್ ಜಾಕೀರ್, ಸದಸ್ಯರಾದ ವಿ.ನಾರಾಯಣ ಬಿ.ಆರ್.ನರಸಿಂಹನಾಯ್ಡು ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.