ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಟೋಲ್ ವಸೂಲಾತಿ ವಿರೋಧಿ ಒಕ್ಕೂಟದ ಸದಸ್ಯರು ಗುರುವಾರ ಪ್ರತಿಭಟಿಸಿದರು.
ನಗರದ ಹೊರವಲಯದಲ್ಲಿ ಪ್ರತಿಭಟಿಸಿದ ಪ್ರತಿಭಟನಾಕಾರರು, ಶುಲ್ಕ ಸಂಗ್ರಹ ನೆಪದಲ್ಲಿ ವಾಹನ ಸವಾರರ ಶೋಷಣೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಕಾಲದಲ್ಲಿ ತೆರಿಗೆ ಪಾವತಿಸಿದ ನಂತರವೂ ವಾಹನ ಸವಾರರಿಂದ ಶುಲ್ಕ ಸಂಗ್ರಹಿಸುತ್ತಿರುವುದು ತಪ್ಪು ಎಂದರು.
ಟೋಲ್‌ನ ಪ್ರಮಾಣ ಮತ್ತು ಕಾಲಮಿತಿಗೆ ಇರುವ ಮಾನದಂಡಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. ಅವಧಿ ಮುಗಿದ ನಂತರವೂ ಟೋಲ್ ಸಂಗ್ರಹ ಮುಂದುವರಿಯುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಹೆದ್ದಾರಿ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಗುತ್ತಿಗೆದಾರರು ಹಾಗೂ ನಿರ್ಮಾಣ ಕಂಪೆನಿಗಳು ಬ್ಯಾಂಕ್ಗಳಿಂದ ಸಾಲ ಪಡೆದು ಕಾಮಗಾರಿ ನಿರ್ವಹಿಸುತ್ತವೆ. ಅದನ್ನೇ ನೆಪವಾಗಿಸಿಕೊಂಡು ವಾಹನ ಸವಾರರಿಂದ ನಿರಂತರ ಟೋಲ್ ಸಂಗ್ರಹಿಸುವುದು ಅವೈಜ್ಞಾನಿಕ ಕ್ರಮ. ಸರ್ಕಾರ ಈ ಪ್ರಕ್ರಿಯೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನೆಲಮಂಗಲದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮತ್ತು ಇತರ ನಾಯಕರು ನೇತೃತ್ವ ವಹಿಸಲಿದ್ದಾರೆ. ಸರ್ಕಾರ ನಮ್ಮ ಬೇಡಿಕೆ ಆಲಿಸಿ, ಟೋಲ್ ಸಂಗ್ರಹ ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ತೀವ್ರಗೊಳ್ಳಲಿದೆ ಎಂದು ಹೇಳಿದರು.
ಒಕ್ಕೂಟದ ಮುಖಂಡರಾದ ಅಂಗರೇಖನಹಳ್ಳಿ ರವಿ, ಚಲಪತಿ, ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಸು.ದಾ.ವೆಂಕಟೇಶ್ ಇತರರು ಪಾಲ್ಗೊಂಡಿದ್ದರು.
ಬಾಗೇಪಲ್ಲಿಯಲ್ಲೂ ಪ್ರತಿಭಟನೆ
ಬಾಗೇಪಲ್ಲಿ: ಪಟ್ಟಣ ಹೊರವಲಯದ ಟೋಲ್ ಪ್ಲಾಜಾ ಸಮೀಪ ಗುರುವಾರ ಕರವೇ ಕಾರ್ಯಕರ್ತರು ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟಿಸಿದರು.
ದಿನಗೂಲಿ ಕಾರ್ಮಿಕರು, ರೈತರು, ಗ್ರಾಮಸ್ಥರು ದಿನನಿತ್ಯದ ಕಾರ್ಯ ಚಟುವಟಿಕೆಗಳಿಗೂ ಇದೇ ರಸ್ತೆ ಬಳಸಬೇಕಿದೆ. ರಸ್ತೆಯಲ್ಲಿ ಸಾಗುವ ಸ್ಥಳೀಯರಿಂದಲೂ ಟೋಲ್ ಸಂಗ್ರಹಿಸುತ್ತಿರುವುದು ತಪ್ಪು. ಸ್ಥಳೀಯರಿಗೆ ವಿನಾಯ್ತಿ ನೀಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಪ್ರತಿಭಟನೆಯಿಂದ ಪಟ್ಟಣದಿಂದ ಬೆಂಗಳೂರು ಹಾಗೂ ಆಂಧ್ರಕ್ಕೆ ತೆರಳುವ ಪ್ರಯಾಣಿಕರು ಕೆಲ ಕಾಲ ತೊಂದರೆ ಅನುಭವಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಯಂತ್ ಮಾತನಾಡಿ ಟೋಲ್ ಸಂಗ್ರಹ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಕರವೇ ಜಿಲ್ಲಾ ಘಟಕದ ಸಂಚಾಲಕ ರವಿಕುಮಾರ್, ಸುಬ್ರಮಣ್ಯಾಚಾರಿ, ಮುಖಂಡರಾದ ಜೆ.ಮುಸ್ತಾಫಾ, ಗಂಗಾಧರರಾಜ, ವೆಂಕಟೇಶ್‌ಬಾಬು, ಇಲಿಯಾಜ್ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.