ADVERTISEMENT

ತಡೆ ರಹಿತ ಅಭಿವೃದ್ಧಿಗೆ ಶಾಸಕರ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 10:40 IST
Last Updated 8 ಅಕ್ಟೋಬರ್ 2011, 10:40 IST

ಗೌರಿಬಿದನೂರು: ತಾಲ್ಲೂಕಿನಲ್ಲಿ ವಿವಿಧ ಇಲಾಖೆಗಳ ವತಿಯಿಂದ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಯಾವುದೇ ರೀತಿಯ ಅಡೆತಡೆಗೆ ಅವಕಾಶ ನೀಡದೇ ಸುಗಮ ರೀತಿಯಲ್ಲಿ ಮುಂದುವರೆಸಬೇಕು. ಜನರಿಗೆ ಅನುಕೂಲ ಕಲ್ಪಿಸಲು ಪ್ರಥಮ ಆದ್ಯತೆ ನೀಡಬೇಕು ಎಂದು ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯಸೌಧದಲ್ಲಿ ಶುಕ್ರವಾರ ನಡೆದ ಪಂಚಾಯಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, `ಅಭಿವೃದ್ಧಿ ಕಾರ್ಯಗಳ ಪ್ರಗತಿಗೆ ಅಧಿಕಾರಿಗಳು ವಿಶೇಷ ಗಮನ ನೀಡಬೇಕು~ ಎಂದರು.

ಕೃಷಿ ಇಲಾಖೆಯ ಪ್ರಗತಿ ವಿವರಗಳನ್ನು ನೀಡಿದ ಕೃಷಿ ಇಲಾಖೆ ಅಧಿಕಾರಿ ಅನುರೂಪಾ ಮಾತನಾಡಿ, `ಸುವರ್ಣ ಭೂಮಿ ಯೋಜನೆಯಡಿ ಪರಿಶಿಷ್ಟ ಜಾತಿ -715, ಪರಿಶಿಷ್ಟ ಪಂಗಡ-473 ಮತ್ತು ಸಾಮಾನ್ಯ-1300 ಸೇರಿದಂತೆ ಒಟ್ಟು 2507 ಫಲಾನುಭವಿಗಳನ್ನು ತಾಲ್ಲೂಕಿನಲ್ಲಿ ಆಯ್ಕೆ ಮಾಡಲಾಗಿದೆ. ಅವರಲ್ಲಿ ಮೊದಲ ಕಂತಿನಲ್ಲಿ 2555 ಫಲಾನುಭವಿಗಳು ಬ್ಯಾಂಕ್ ಮುಖಾಂತರ ಚೆಕ್‌ಗಳನ್ನು ಪಡೆದಿದ್ದಾರೆ. ಸಮರ್ಪಕ ದಾಖಲಾತಿಗಳನ್ನು ಒದಗಿಸದ ಕಾರಣ ಇನ್ನೂ ಕೆಲ ಫಲಾನುಭವಿಗಳಿಗೆ ಚೆಕ್‌ಗಳನ್ನು ವಿತರಿಸಲಾಗಿಲ್ಲ. ಪ್ರಸಕ್ತ ವರ್ಷ 52.61 ಮಿ.ಮೀಟರ್ ಮಳೆಯಾಗಿದ್ದು, ಸಾಮಾನ್ಯ ಮಳೆಗಿಂತ 99.29 ಮಿ.ಮೀಟರ್ ಕಡಿಮೆ ಮಳೆಯಾಗಿರುವುದರಿಂದ ಇಳುವರಿ ಕಡಿಮೆ  ಬರುವ ಸಾಧ್ಯತೆಯಿದೆ. ತಾಲ್ಲೂಕಿನಲ್ಲಿ ರೈತರಿಗೆ ರಸಗೊಬ್ಬರಗಳು ಕೊರತೆಯಿಲ್ಲದಂತೆ ಪೂರೈಸಲಾಗಿದೆ~ ಎಂದರು.

ತಾಲ್ಲೂಕಿನಲ್ಲಿ ಒಟ್ಟು 345ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, 194 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿವೆ. ಪಂಚಾಯಿತಿ ಕಟ್ಟಡಗಳಲ್ಲಿ -19, ಸಮುದಾಯ ಭವನಗಳಲ್ಲಿ-19 ಡೈರಿಗಳಲ್ಲಿ -2 ಭಜನೆ ಮಂದಿರಗಳಲ್ಲಿ-6, ದೇವಸ್ಥಾನಗಳಲ್ಲಿ-9, ಶಾಲೆಗಳಲ್ಲಿ -47, ತಾತ್ಕಾಲಿಕ ಕೇಂದ್ರಗಳಲ್ಲಿ 17 ಮತ್ತು ಬಾಡಿಗೆ ಕಟ್ಟಡಗಳಲ್ಲಿ- 36  ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ತೊಂಡೇಬಾವಿ ಪಂಚಾಯಿತಿ ತಪಸಮಾಕನಹಳ್ಲಿ ದೇವರಕೊಂಡಹಳ್ಳಿ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡಗಳನ್ನು ಇನ್ನೂ ನಿರ್ಮಿಸಲಾಗಿಲ್ಲ. ಹೊಸೂರು ಕಾಲೋನಿಯಲ್ಲಿ ನಿವೇಶನ ಗುರುತಿಸಲಾಗಿದ್ದು, ಕಾಮಗಾರಿ ಆರಂಭವಾಗಬೇಕಿದೆ. ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಕಡ್ಡಾಯವಾಗಿ ಬಿಪಿಎಲ್ ಕಾರ್ಡ್ ಹೊಂದಿರಬೇಕು. ಮಗು ಹುಟ್ಟಿದ ಮೂರು ತಿಂಗಳೊಳಗೆ ಇಲಾಖೆಗೆ ಅರ್ಜಿಯನ್ನು ಸಲ್ಲಿಸಬೇಕು~ ಎಂದು ಶಿಶು ಮತ್ತು ಮಕ್ಕಳ ಇಲಾಖೆಯ ಅಧಿಕಾರಿ ಜಯಲಕ್ಷ್ಮಮ್ಮ  ತಿಳಿಸಿದರು.

ಇಡಗೂರು ರಸ್ತೆಯಲ್ಲಿರುವ ಮೊರಾರ್ಜಿ ವಸತಿ ಶಾಲೆಗೆ ಪಟ್ಟಣದ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಗ್ರಾಮೀಣ ಪ್ರದೇಶ ವ್ಯಾಪ್ತಿಯ ವಿದ್ಯುತ್ ಸಂಪರ್ಕ ಇರುವ ಕಾರಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ರಾತ್ರಿ ವೇಳೆ ವಿದ್ಯುತ್ ಕಡಿತಗೊಳಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ನೂತನ ಕಟ್ಟಡ ಉದ್ಘಾಟನೆಗೊಂಡು ಹಲವು ತಿಂಗಳುಗಳೇ ಕಳೆದರೂ ವಿದ್ಯಾರ್ಥಿಗಳಿಗೆ ಇನ್ನೂ ಸಮರ್ಪಕವಾಗಿ ಸೌಕರ್ಯಗಳು ಸಿಕ್ಕಿಲ್ಲ. ಮಂಚ, ಹಾಸಿಗೆ ಮತ್ತು ಹೊದಿಕೆಯನ್ನು ಇನ್ನೂ ವಿತರಿಸಲಾಗಿಲ್ಲ~ ಎಂದು ಸಮಾಜ ಕಲ್ಯಾಣಾಧಿಕಾರಿ ತಿಳಿಸಿದರು.

ತಾಲ್ಲೂಕಿನಲ್ಲಿ ಎಲ್ಲಾ ಪ್ರೌಢಶಾಲೆಗಳಿಗೆ ಸೈಕಲ್‌ಗಳನ್ನು ವಿತರಿಸಲಾಗಿದೆ.  2010-11 ನೇ ಸಾಲಿನಲಗಲಿ 3823, 2011-2012ನೇ ಸಾಲಿನಲ್ಲಿ  3719 ಸೈಕಲ್‌ಗಳನ್ನು ವಿತರಿಸಲಾಗಿದೆ. ವಸತಿ ನಿಲಯಗಳಲ್ಲಿನ  ವಿದ್ಯಾರ್ಥಿಗಳಿಗೆ ಸೈಕಲ್ ನೀಡಬಾರದು ಎಂಬ ಆದೇಶ ಇರುವುದರಿಂದ ಉಳಿದ ಸೈಕಲ್‌ಗಳನ್ನು ಆಯಾಯ ಶಾಲೆಗಳಲ್ಲಿ ಇಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸಪ್ಪ, ಉಪಾಧ್ಯಕ್ಷೆ ಚೇತನಾ, ಕಾರ್ಯನಿರ್ವಣಾಧಿಕಾರಿ ರೆಡ್ಡಪ್ಪ ಮತ್ತಿತರರು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.