ADVERTISEMENT

ದೆಹಲಿ ವಿದ್ಯಾರ್ಥಿನಿ ಅತ್ಯಾಚಾರ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 6:04 IST
Last Updated 24 ಡಿಸೆಂಬರ್ 2012, 6:04 IST

ಗುಡಿಬಂಡೆ: ನವದೆಹಲಿಯ ವಸಂತ್ ವಿಹಾರ್ ಪ್ರದೇಶದಲ್ಲಿ ಚಲಿಸುತ್ತಿರುವ ಬಸ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ಈಚೆಗೆ ಪಟ್ಟಣದ ಶಾಲೆ, ಕಾಲೇಜು ವಿದ್ಯಾರ್ಥಿನಿಯರು ಮತ್ತು ಜೀವಿಕ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.

ಅತ್ಯಾಚಾರ ಘಟನೆಯಿಂದಾಗಿ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಅದೇ ದಿನ ರಾಜ್ಯದಲ್ಲೂ 4 ಅತ್ಯಾಚಾರ ಪ್ರಕರಣ ವರದಿಯಾಗಿರುವುದು ದುಃಖದ ಸಂಗತಿ. ರಾಜ್ಯದಲ್ಲೂ ಅತ್ಯಾಚಾರಿಗಳ ಸಂಖ್ಯೆ ಹೆಚ್ಚುತ್ತಿದ್ದು, ಮಹಿಳೆಯರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಆರೋಪಿಗಳಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ನೀಡಬೇಕು, ತನಿಖಾ ವರದಿಯನ್ನು ಒಂದು ತಿಂಗಳ ಒಳಗೆ ಪೂರ್ಣಗೊಳಿಸಬೇಕು, ನ್ಯಾಯಾಲಯ ಪ್ರಕರಣಗಳನ್ನು 6 ತಿಂಗಳಲ್ಲಿ ಪೂರ್ಣಗೊಳಿಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಕಾನೂನು ತಿದ್ದುಪಡಿ ಮಾಡಬೇಕು, ಮಹಿಳೆಯರು ಕಾರ್ಯ ನಿರ್ವಹಿಸುವ ಕಾರ್ಖಾನೆಗಳು, ಶಿಕ್ಷಣ ಸಂಸ್ಥೆಗಳು ಮತ್ತಿತರ ಸ್ಥಳಗಳಲ್ಲಿ ಪೊಲೀಸ್ ಗಸ್ತು ಪಡೆ ನೇಮಿಸಿ ಸೂಕ್ತ ಭದ್ರತೆ ಒದಗಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು. ವಿದ್ಯಾರ್ಥಿಗಳು ಕೆಲ ಹೊತ್ತು ರಸ್ತೆ ತಡೆ ನಡೆಸಿದರು. ನಂತರ ಗ್ರೇಡ್-2 ತಹಶೀಲ್ದಾರ್ ನಂಜಪ್ಪ ಅವರಿಗೆ ಮನವಿ ಪತ್ರ ನೀಡಿದರು.

ಜೀವಿಕ ಮಹಿಳಾ ಸಂಚಾಲಕಿ ರತ್ನಮ್ಮ, ತಾಲ್ಲೂಕು ಸಂಚಾಲಕಿ ಅಮರಾವತಿ, ಹೋಬಳಿ ಸಂಚಾಲಕರಾದ ಚೆನ್ನರಾಯಪ್ಪ, ರಾಮಾಂಜಿ ಪ್ರತಿಭಟನೆ ನೇತೃತ್ವವನ್ನು ವಹಿಸಿದ್ದರು. ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.