ADVERTISEMENT

ನಂದಿ ಗಿರಿಧಾಮದ ಸಮಗ್ರ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 6:40 IST
Last Updated 15 ಜೂನ್ 2011, 6:40 IST

ಚಿಕ್ಕಬಳ್ಳಾಪುರ: ನಂದಿ ಗಿರಿಧಾಮದ ಸಮಗ್ರ ಅಭಿವೃದ್ಧಿ ಮತ್ತು ಪ್ರವಾಸಿಗರ ಸೌಲಭ್ಯಗಳಿಗಾಗಿ ರಾಜ್ಯ ಸರ್ಕಾರವು ಸುಮಾರು 17 ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ಮೀಸಲಿಟ್ಟಿದ್ದು, ಗಿರಿಧಾಮವನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ನಂದಿ ಗಿರಿಧಾಮದ ನೆಹರು ನಿಲಯದಲ್ಲಿ ಮಂಗಳವಾರ ನಡೆದ ನಂದಿ ಗಿರಿಧಾಮದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, `ಗಿರಿಧಾಮಕ್ಕೆ ಬರುವ ಪ್ರವಾಸಿಗರಿಗೆ ಅತ್ಯುನ್ನತ ಸೌಕರ್ಯಗಳನ್ನು ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ~ ಎಂದರು.

`17 ಕೋಟಿ ರೂಪಾಯಿ ಹಣ ಹೊರತುಪಡಿಸಿ ಗಿರಿಧಾಮದ ಟಿಪ್ಪು ಡ್ರಾಪ್ ಮತ್ತು ಆವರಣದ ಸುತ್ತಲೂ 50 ಲಕ್ಷ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗುತ್ತಿದೆ. 80 ಲಕ್ಷ ರೂಪಾಯಿ ವೆಚ್ಚದಲ್ಲಿ ಇತರ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರವೇ ಕೈಗೊಳ್ಳಲಾಗುವುದು~ ಎಂದು ಅವರು ತಿಳಿಸಿದರು.

`ಗಾಂಧಿ ನಿಲಯದ ಬಳಿ ನೂತನ ಉಪಾಹಾರ ಮಂದಿರ, ಗಾಂಧಿ ನಿಲಯ ಮತ್ತು ಇತರ ಕಟ್ಟಡಗಳ ನವೀಕರಣ, ನಿಸರ್ಗದ ರಮ್ಯತೆ ಸವಿಯಲು ಅಚ್ಚುಕಟ್ಟಾದ ಸ್ಥಳ, ಕೃತಕ ಜಲಪಾತ, ಮಕ್ಕಳಿಗೆ ಆಟದ ಉದ್ಯಾನ, ವಾಹನಗಳ ಪಾರ್ಕಿಂಗ್ ಸ್ಥಳ, ಶೌಚಾಲಯ ಸೌಲಭ್ಯ ಮುಂತಾದ ಕಾಮಗಾರಿಗಳಿಗಾಗಿ 17 ಕೋಟಿ ರೂಪಾಯಿ ಹಣವನ್ನು ವೆಚ್ಚ ಮಾಡಲಾಗುವುದು. ಹಂತಹಂತವಾಗಿ ಕಾಮಗಾರಿಗೆ ಚಲನೆ ನೀಡಲಾಗುವುದು~ ಎಂದು ಅವರು ತಿಳಿಸಿದರು.

`ಪರಿಸರಕ್ಕೆ ಮತ್ತು ಹಳೆಯ ಕಟ್ಟಡಗಳಿಗೆ ಯಾವುದೇ ಸ್ವರೂಪದಲ್ಲೂ ಹಾನಿ ಉಂಟು ಮಾಡದೇ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಅನಾವಶ್ಯಕ ಕಟ್ಟಡಗಳನ್ನು ತೆರವುಗೊಳಿಸಲಾಗುವುದು. ಮಾದರಿ ಗಿರಿಧಾಮದ ರೂಪದಲ್ಲಿ ಅಭಿವೃದ್ಧಿಪಡಿಸಲಾಗುವುದು. ಮುಂದಿನ ಒಂದು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ~ ಎಂದು ಅವರು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯ ಜಂಟಿ ಆಯುಕ್ತ ಸಿ.ಶ್ರೀರಾಮಯ್ಯ, ಸಹಾಯಕ ನಿರ್ದೇಶಕ ಬಸವರಾಜು, ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ, ಉಪವಿಭಾಗಾಧಿಕಾರಿ ಪಿ.ವಸಂತ್‌ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ. ನಂದಿ ಗಿರಿಧಾಮದ ವಿಶೇಷಾಧಿಕಾರಿ ಮಹಾಂತೇಶ್ ಮುರುಗೋಡ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.