ADVERTISEMENT

ನಗರದಲ್ಲಿ ಪುಟಾಣಿ ವಿಜ್ಞಾನಿಗಳ ಆವಿಷ್ಕಾರ!

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 9:10 IST
Last Updated 10 ಜುಲೈ 2012, 9:10 IST

ಚಿಕ್ಕಬಳ್ಳಾಪುರ: ಬಾಹ್ಯಾಕಾಶದಲ್ಲಿ ಸುತ್ತು ಹಾಕುವ ಉಪಗ್ರಹವನ್ನು ಹೊತ್ತು ನಿಂತಿರುವ ಉಡಾವಣಾ ವಾಹಕ ಇನ್ನೇನೂ ಹಾರಲಿದೆ ಎಂಬ ಭಾವ ಮೂಡಿಸಿದರೆ, ಕಟ್ಟುಮಸ್ತಾಗಿ ದೃಢವಾಗಿ ನಿಂತಿರುವ ರೋಬೋಟ್ ಕೈ ಕುಲುಕಿಸುತ್ತದೆ. 

 ಅಡುಗೆ ಅನಿಲ ಸಿಲಿಂಡರ್ ಮತ್ತು ಸೀಮೆ ಎಣ್ಣೆಯಿಲ್ಲದೇ ಅಡುಗೆ ಹೇಗೆ ತಯಾರಿಸಬಹುದು ಎಂಬ ಮಾಹಿತಿ ಒಂದೆಡೆ ದೊರೆತರೆ, ಮತ್ತೊಂದೆಡೆ ಆಕಾಶದ ಓಜೋನ್ ಪರದೆಗೆ ಆಗುವ ಹಾನಿಯಂದ ಮುಂದಿನ ದಿನಗಳಲ್ಲಿ ಉಂಟಾಗಲಿರುವ ಅಪಾಯದ ಬಗ್ಗೆ ಮುನ್ಸೂಚನೆ ನೀಡಿತು.

 ದೂರದೂರಕ್ಕೆ ಹೋದಷ್ಟು ಒಂದಿಲ್ಲೊಂದು ವಿಶಿಷ್ಟ ಬಗೆಯ ಮಾಹಿತಿ ಅಲ್ಲಿ ಸಿಗುತ್ತಿತ್ತು. ಎಲ್ಲಿ ನೋಡಿದ್ದಲ್ಲಿ, ಪುಟಾಣಿ ವಿಜ್ಞಾನಿಗಳು ಅವತರಿಸಿದ್ದಾರೆ ಎಂದು ಅಚ್ಚರಿ ಮೂಡಿಸಿತು.

ಇಂತಹ ವಿಶೇಷ ರೀತಿಯ ಅನುಭವ, ಮಾಹಿತಿ ಪಡೆಯಲು ನಗರದ ಬಿ.ಬಿ.ರಸ್ತೆ ಬಳಿಯ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಬೇಕು.

ಇಲ್ಲಿ ನಡೆಯುತ್ತಿರುವ ಇನ್‌ಸ್ಪೈರ್             ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಒಂದಕ್ಕಿಂತ ಒಂದು ಚೆಂದವಿರುವ ವಸ್ತುಗಳು ವಿಜ್ಞಾನದ ಹಲವು ವಿಷಯಗಳನ್ನು ಬಹಿರಂಗಪಡಿಸುತ್ತವೆ. ವಿಜ್ಞಾನದ ಬಗ್ಗೆ ಮಾತ್ರವಲ್ಲ ಪರಿಸರ ಕಾಳಜಿಯೂ ಇದೆ. ಭೂಗೋಳ, ಖಗೋಳ, ಸಮಾಜ ವಿಜ್ಞಾನ, ವಿದ್ಯುತ್ ಶಕ್ತಿ, ಪವನಶಕ್ತಿ ಸೇರಿದಂತೆ ವಿವಿಧ ವಿಷಯದ ಬಗ್ಗೆ ಅಚ್ಚರಿ ಮಾಹಿತಿ ದೊರೆಯುತ್ತದೆ.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳೇ ಸಿದ್ಧಪಡಿಸಿರುವ  ವಸ್ತುಗಳ ಬಗ್ಗೆ ಪ್ರತಿಯೊಬ್ಬರಿಗೂ ವಿದ್ಯಾರ್ಥಿಗಳು ಮಾಹಿತಿ ನೀಡುತ್ತಾರೆ.  ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ,  ಸೌರಶಕ್ತಿ ಬಳಕೆ ಉಪಯೋಗಗಳೇನು ?, ಸೂರ್ಯಗ್ರಹಣ, ಚಂದ್ರಗ್ರಹಣ ಹೇಗೆ ಸಂಭವಿಸುತ್ತದೆ. ಉಪಗ್ರಹವು ಬಾಹ್ಯಾಕಾಶಕ್ಕೆ ಹೋಗಿ ಹೇಗೆ ಸೇರ್ಪಡೆಯಾಗುತ್ತದೆ ಎಂದು ವಿದ್ಯಾರ್ಥಿನಿ ಚಿತ್ರಗಳ ಮೂಲಕ ಸಾದರಪಡಿಸುತ್ತಾಳೆ.


ಸರ್ಕಾರಿ ಪ್ರೌಢಶಾಲೆ ಎಲ್ಲ ಕೊಠಡಿಗಳು ಅವಿಷ್ಕಾರಗಳಿಂದ ತುಂಬಿವೆ.   ವಿಜ್ಞಾನ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಹಿಂದಿನ ಸ್ಫೂರ್ತಿಯೇನು ಎಂದು ಪ್ರಶ್ನಿಸಿದರೆ, ` ವಿಜ್ಞಾನಿ ಆಗಬೇಕು ಎಂಬ ಹೆಬ್ಬಯಕೆ. ಅದಕ್ಕೆ ಈಗಿನಿಂದಲೇ ಸಿದ್ಧತೆ ಅದಕ್ಕೆ ಶಿಕ್ಷಕರು ತುಂಬ ಸಹಕಾರ, ಅಪ್ಪ-ಅಮ್ಮ ಪ್ರೋತ್ಸಾಹ ಇದೆ ಎನ್ನುತ್ತಾರೆ.

ಕಳೆದ ವರ್ಷ ಗೌರಿಬಿದನೂರಿನಲ್ಲಿ ನಡೆದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಸುಮಾರು 351ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ವಿವಿಧ ಮಾದರಿಗಳನ್ನು ಪ್ರದರ್ಶಿಸಿದ್ದರು. ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಪಾಲ್ಗೊಂಡ್ದ್ದಿದಾರೆ.

ಪ್ರಚಲಿತ ವಿದ್ಯಮಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಕೇಂದ್ರೀಕರಿಸಿಕೊಂಡು ಮಾದರಿಗಳನ್ನು ಸಿದ್ಧಪಡಿಸಿದ್ದಾರೆ.

ಈ ಪ್ರದರ್ಶನದಲ್ಲಿ ಅತ್ಯುತ್ತಮ ಮಾದರಿಗಳನ್ನು ಪ್ರದರ್ಶಿಸುವ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಾರೆ. ರಾಜ್ಯಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿರುವವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT