ADVERTISEMENT

ನೀರಾವರಿ: ಮುಖ್ಯಮಂತ್ರಿ ಸಭೆ ಇಂದು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 6:38 IST
Last Updated 4 ಡಿಸೆಂಬರ್ 2012, 6:38 IST

ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ನಗರದ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ವಿವಿಧ ಸಂಘ-ಸಂಸ್ಥೆ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ.

ಶಾಶ್ವತ ನೀರಾವರಿ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರವು ನೀರಾವರಿ ಹೋರಾಟ ಸಮಿತಿ ಮತ್ತು ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಗೃಹಕಚೇರಿ `ಕೃಷ್ಣಾ'ದಲ್ಲಿ ಮಂಗಳವಾರ (ಡಿಸೆಂಬರ್ 4) ಬೆಳಿಗ್ಗೆ 11.30ಕ್ಕೆ ಸಭೆ ನಡೆಯಲಿದೆ.

ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ನೀರಾವರಿ ಹೋರಾಟ ಸಮಿತಿಯ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದು, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ಮೂರು ಜಿಲ್ಲೆಗಳ ಸಂಸದರು, ಶಾಸಕರು ಮತ್ತು ಇತರ ಜನಪ್ರತಿನಿಧಿಗಳಿಗೂ ಸಭೆಗೆ ಆಹ್ವಾನಿಸಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಸತ್ಯಭಾಮಾ ಅವರು ಸೋಮವಾರ ಸಂಜೆ ಹೋರಾಟ ಸಮಿತಿ ಸದಸ್ಯರಿಗೆ ಆಹ್ವಾನ ಪತ್ರ ನೀಡಿದರು.

ಆಹ್ವಾನ ಪತ್ರ ಸ್ವೀಕರಿಸಿ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ, `ಶಾಶ್ವತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರು ಮಂಗಳವಾರ ಕರೆದಿರುವ ಸಭೆಗೆ ಆಹ್ವಾನ ಪತ್ರ ತಲುಪಿದೆ. ಶಾಶ್ವತ ನೀರಾವರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಿದ್ದೇವೆ. ಸಭೆಯಲ್ಲಿ ಹೊರಬರುವ ಫಲಿತಾಂಶಕ್ಕೆ ಅನುಗುಣವಾಗಿ ಹೋರಾಟದ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ' ಎಂದರು.

`ನಮ್ಮ ಹೋರಾಟಕ್ಕೆ ಸರ್ಕಾರವು ಸ್ಪಂದಿಸದ ಹಿನ್ನೆಲೆಯಲ್ಲಿ ಬುಧವಾರ (ಡಿಸೆಂಬರ್ 5) ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ, ಬೀಗ ಜಡಿಯಲು ತೀರ್ಮಾನಿಸಿದ್ದೆವು. ಸರ್ಕಾರದ ಮೇಲೆ ಒತ್ತಡ ಹೇರಲು ಯೋಜನೆ ರೂಪಿಸಿದ್ದೆವು. ಆದರೆ ಸರ್ಕಾರವು ಮಾತುಕತೆಗೆ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಮುತ್ತಿಗೆ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ' ಎಂದು ಅವರು ತಿಳಿಸಿದರು. ಹೋರಾಟ ಸಮಿತಿ ಮುಖಂಡರಾದ ಯಲುವಹಳ್ಳಿ ಸೊಣ್ಣೇಗೌಡ, ಕೆ.ಸಿ.ರಾಜಾಕಾಂತ್, ಅಜ್ಜವಾರ ಶ್ರೀನಿವಾಸ್, ಲಕ್ಷ್ಮಯ್ಯ, ಮೋಹನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

`ಮೊದಲು ನೀರು ಬರಲಿ'
ಚಿಂತಾಮಣಿ: ಬರಗಾಲ ಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಯ ಬಗ್ಗೆ ಮಾತುಕತೆ ನಡೆಸಲು ಮಂಗಳವಾರ ಮುಖ್ಯ ಮಂತ್ರಿಗಳು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಶ್ವತ ನೀರಾವರಿ ಯೋಜನೆಗೆ ಸಂಪೂರ್ಣ ಬೆಂಬಲ ನೀಡಿದ್ದೇವೆ. ಸಭೆ, ವೇದಿಕೆಗಳಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದೇನೆ. ಚುನಾವಣೆ ಹಿನ್ನೆಲೆಯಲ್ಲಿ ಕೇವಲ ರಾಜಕೀಯ ಮಾಡಬಾರದು ಎಂದರೆ ಕೆಲವರು ಬೇಸರ ಪಟ್ಟುಕೊಳ್ಳುವುದು ಏಕೆ ಎಂದು ಪ್ರಶ್ನಿಸಿದರು.

ಸುಮಾರು 8 ವರ್ಷಗಳಿಂದ ಶಾಸಕನಾಗಿ ಅನುಭವದಿಂದ ತಿಳಿದಿದ್ದೇನೆ. ಸರ್ಕಾರದ ಒಂದು ಯೋಜನೆ ಜಾರಿಯಾಗಬೇಕಾದರೆ ಆಡಳಿತಾತ್ಮಕ ಮಂಜೂರಾತಿಯಿಂದ ಹಿಡಿದು ಟೆಂಡರ್ ಪ್ರಕ್ರಿಯೆ ಹಾಗೂ ಕಾಮಗಾರಿ ಮುಕ್ತಾಯದವರೆಗೂ ಹಲವಾರು ಎಡರು ತೊಡರುಗಳನ್ನು ಎದುರಿಸಬೇಕಾಗುತ್ತದೆ. ಹೀಗಿರುವಾಗ ಕೆಲವರು ವಿದೇಶಗಳಲ್ಲಿ ಕುಳಿತು ಒಂದು ವರ್ಷದಲ್ಲಿ ನೀರು ಹರಿಸಿಬಿಡಿ ಎಂದರೆ ಮಾಯ ಮಾಡಲು ಸಾಧ್ಯವಿಲ್ಲ ಎಂದು ಛೇಡಿಸಿದರು.

ಯಾವ ಮೂಲದಿಂದಾದರೂ ನೀರು ಬೇಕು. ಸರ್ಕಾರ ಎತ್ತಿನಹೊಳೆಯಿಂದ ಕೊಡುವುದಾಗಿ ಹೇಳುತ್ತಿದೆ. ಕೊಡುವುದನ್ನು ತೆಗೆದುಕೊಳ್ಳೋಣ, ಪರಮಶಿವಯ್ಯ ವರದಿ ಜಾರಿಗಾಗಿ ಹೋರಾಟವನ್ನು ಮುಂದುವರಿಸೋಣ. ಸಾವಿರಾರು ಕೋಟಿ ರೂಪಾಯಿ ಯೋಜನೆ ಆ ಭಾಗದ ಜನರು, ನ್ಯಾಯಾಲಯ, ಪರಿಸರವಾದಿಗಳು ಮುಂತಾದ ಕಂಟಕಗಳಿಂದ ಪಾರಾಗಿ ಅನುಷ್ಠಾನಗೊಳ್ಳಬೇಕಾದರೆ ಅನೇಕ ವರ್ಷಗಳಾಗುತ್ತವೆ. ಅಲ್ಲಿಯವರೆಗೆ ನೀರು ಬೇಡವಾ? ಯರಗೋಳ್ ಯೋಜನೆ ಎಷ್ಟು ವರ್ಷಗಳಿಂದ ಯಾವ ಹಂತದಲ್ಲಿದೆ ಎಂಬುದನ್ನು ಯೋಚಿಸಿ ಚಿಂತನೆ ನಡೆಸಿ ಎಂದರು.

ನೀರಾವರಿ ಯೋಜನೆಗಳ ಸಾಧಕ-ಬಾಧಕಗಳನ್ನು ಅವಲೋಕಿಸಿ, ಸಿಗುವುದನ್ನು ತೆಗೆದುಕೊಂಡು ಹೋರಾಟವನ್ನು ಮುಂದುವರಿಸುವುದು ಉತ್ತಮ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.