ADVERTISEMENT

ಪಡಿತರ ಅವ್ಯವಹಾರ: ಗ್ರಾಮಸ್ಥರ ದೂರು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 10:01 IST
Last Updated 24 ಏಪ್ರಿಲ್ 2013, 10:01 IST

ಚಿಂತಾಮಣಿ: ತಾಲ್ಲೂಕಿನ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿ ನ್ಯಾಯಬೆಲೆ ಅಂಗಡಿಯಲ್ಲಿ ನಾಗದೇನಹಳ್ಳಿ ಗ್ರಾಮದ ಪಡಿತರ ಚೀಟಿದಾರರಿಗೆ ಸರಿಯಾಗಿ ಪಡಿತರ ವಿತರಿಸುತ್ತಿಲ್ಲ ಎಂದು ತಾಲ್ಲೂಕು ಭೋವಿ ಯುವ ವೇದಿಕೆ ಅಧ್ಯಕ್ಷ ಎಂ.ಗುರಪ್ಪ ಹಾಗೂ ಗ್ರಾಮಸ್ಥರು ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ.

ಪಂಚಾಯಿತಿ ವ್ಯಾಪ್ತಿಯ ಇತರೆ ಗ್ರಾಮಗಳ ಬಿಪಿಎಲ್ ಕಾರ್ಡ್‌ಗೆ 12 ಕೆ.ಜಿ. ಅಕ್ಕಿ ನೀಡುತ್ತಾರೆ. ನಾಗದೇನಹಳ್ಳಿ ಗ್ರಾಮದ ಕಾರ್ಡ್‌ಗಳಿಗೆ 10 ಕೆ.ಜಿ. ನೀಡುತ್ತಾರೆ. ಇದನ್ನು ಪ್ರಶ್ನಿಸಿದರೆ ನಿಮ್ಮ ಊರಿನಲ್ಲಿ ಹೆಚ್ಚು ಕಾರ್ಡ್ ದಾರರು ಇರುವುದರಿಂದ ಸಮನಾಗಿ ಹಂಚಬೇಕಾಗಿದೆ ಎನ್ನುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸರ್ಕಾರದ ನಿಯಮ ಎಲ್ಲರಿಗೂ ಒಂದೇ ರೀತಿಯಾಗಿರುತ್ತದೆ, ಒಂದೊಂದು ಗ್ರಾಮಕ್ಕೆ ಒಂದೊಂದು ನಿಯಮವಿರುತ್ತದೆಯೇ? ಪೆರಮಾಚನಹಳ್ಳಿ ನ್ಯಾಯಬೆಲೆ ಅಂಗಡಿಯಲ್ಲಿ ಯಾವ ಕಾರ್ಡ್‌ಗಳಿಗೂ ಸಮರ್ಪಕವಾಗಿ ಪಡಿತರ ವಿತರಿಸುತ್ತಿಲ್ಲ. ಯಾರಿಗೆ ಬೇಕಾದರೂ ದೂರು ನೀಡಿಕೊಳ್ಳಿ ಎಂದು ದೌರ್ಜನ್ಯ ನಡೆಸುತ್ತಾರೆ ಎಂದು ಆರೋಪಿಸಿದ್ದಾರೆ.

ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಸಾಮಗ್ರಿಗಳ ಬೆಲೆಯನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಾರೆ. ಬಿಲ್ಲು ನೀಡುವುದಿಲ್ಲ. ಪಡಿತರ ವಸ್ತುಗಳನ್ನು ರಾತ್ರೋ ರಾತ್ರಿ ಅಕ್ರಮವಾಗಿ ಮಾರಾಟ ಮಾಡಿಕೊಳ್ಳುತ್ತಾರೆ. ಪಡಿತರವನ್ನೇ ನಂಬಿರುವ ಬಡವರಿಗೆ ತುಂಬಾ ತೊಂದರೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇಲ್ಲದಿದ್ದರೆ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ರದ್ದುಪಡಿಸಿ, ಬೇರೆಯವರಿಗೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಖಾಸಗಿ ತೋಟಕ್ಕೆ ಕುಡಿಯುವ ನೀರು: ದೂರು
ಶಿಡ್ಲಘಟ್ಟ: ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು ಗ್ರಾಮ ಪಂಚಾಯಿತಿ ಕೊರೆಯಿಸಿದ ಕೊಳವೆಬಾವಿಯ ಪೈಪ್‌ಲೈನ್‌ಗೆ ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಸಂಪರ್ಕ ಪಡೆದು ತನ್ನ ತೋಟಕ್ಕೆ ನೀರು ಪೂರೈಸಿಕೊಳ್ಳುತ್ತಿದ್ದಾರೆ ಎಂದು ರಾಚನಹಳ್ಳಿಯ ಗ್ರಾಮಸ್ಥರು ದೂರಿದ್ದಾರೆ.

ಈಗಾಗಲೇ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಕಾಡುತ್ತಿದೆ. ಆದರೂ ಕುಡಿಯುವ ನೀರಿನ ಪೈಪ್‌ಲೈನ್‌ನಿಂದ ಗ್ರಾಮದ ಪ್ರಮುಖರೊಬ್ಬರು ಅಕ್ರಮ ಸಂಪರ್ಕ ಪಡೆದುಕೊಂಡು ಕುಡಿಯುವ ನೀರಿನ್ನು ತೋಟಕ್ಕೆ ಹರಿಸಿಕೊಳ್ಳುತ್ತಿದ್ದರೂ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿದ್ದ ಗ್ರಾಮ ಪಂಚಾಯಿತಿಯವರು ಮೌನವಹಿಸಿದ್ದಾರೆ. ಇವರ ವಿರುದ್ದ ದೂರು ಸಲ್ಲಿಸಿದ್ದರೂ ಕ್ರಮ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ತೀವ್ರವಾಗಿ ತಲೆದೋರಿದಾಗ ಕೊಳವೆಬಾವಿ ಕೊರೆಸಲಾಯಿತು. ಆಗ ಕೊಳವೆ ಬಾವಿಗೆ ಅಳವಡಿಸಲು 44 ಪೈಪುಗಳನ್ನು ತಂದಿದ್ದರೂ ಕೊಳವೆ ಬಾವಿಗೆ ಕೇಲವ 35 ಪೈಪ್‌ಗಳನ್ನಷ್ಟೆ ಬಿಡಲಾಯಿತು. ಉಳಿದ 9 ಪೈಪ್ ಹಾಗೂ ಕೇಬಲ್ ಅನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸಂಬಂಧಿಸಿದ ಮೇಲಧಿಕಾರಿಗಳು ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.