ADVERTISEMENT

ಪಡಿತರ ಚೀಟಿಗೆ ದಿನವಿಡಿ ಪರದಾಟ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 6:25 IST
Last Updated 9 ಅಕ್ಟೋಬರ್ 2012, 6:25 IST

ಶಿಡ್ಲಘಟ್ಟ: ನೂತನ ಪಡಿತರ ಚೀಟಿಗಳನ್ನು ಪಡೆಯಲು ತಾಲ್ಲೂಕು ಕಚೇರಿಯಲ್ಲಿ ಸಾಲುಗಟ್ಟಿ ನಿಲ್ಲಬೇಕಿದೆ. ದಿನಗಟ್ಟಲೆ ಕಾಯಬೇಕು ಮತ್ತು ಪಡಿತರ ಚೀಟಿಗಳಿಗಾಗಿ ಪರದಾಡುವಂತಾಗಿದೆ ಎಂದು ಸಾರ್ವಜನಿಕರು ಸೋಮವಾರ ಬೇಸರ ವ್ಯಕ್ತಪಡಿಸಿದರು.

ಪದೇ ಪದೇ ಕೈ ಕೊಡುತ್ತಿರುವ ವಿದ್ಯುತ್ ಸಂಪರ್ಕ, ಇಂಟರ್ ನೆಟ್‌ನಿಂದಾಗಿ ಪಡಿತರ ಚೀಟಿ ವಿತರಣೆ ವಿಳಂಬವಾಗುತ್ತಿದೆ. ಅ.7 ಕೊನೆ ದಿನ ಎಂದು ನಿಗದಿಪಡಿಸಿದ್ದರಿಂದ ಜನರು ಪಡಿತರ ಚೀಟಿಗಾಗಿ ಸಾಲುಗಟ್ಟಿ ನಿಂತಿದ್ದರು.

ಭಾವಚಿತ್ರ ಸಂಗ್ರಹಣೆ ಹಾಗೂ ಬಯೋಮೆಟ್ರಿಕ್ ಕಾರ್ಯ ಪೂರ್ಣಗೊಂಡಿದ್ದು, ಪಡಿತರಚೀಟಿಗಳನ್ನು ವಿತರಣೆ ಮಾಡಲು ವಿಳಂಬ ಮಾಡುತ್ತಿದ್ದಾರೆ. ಬೆಳಿಗ್ಗೆ 8 ಘಂಟೆಗೆ ಸಾಲಿನಲ್ಲಿ ನಿಂತರೂ ಕಾರ್ಡ್ ಪಡೆಯಲು ಸಂಜೆಯಾಗುತ್ತಿದೆ. ಮೂರು ದಿನಗಳಿಂದ ಕೆಲಸಕಾರ್ಯ ಬಿಟ್ಟು ಪಡಿತರ ಚೀಟಿಗಾಗಿ ಅಲೆದಾಡುವಂತಾಗಿದೆ.

ಅಲ್ಪಸ್ವಲ್ಪ ಮಳೆಯಾಗುತ್ತಿದ್ದು, ಹೊಲಗಳಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಇಲ್ಲಿ ಬಂದು ಕಾಯುತ್ತಿದ್ದೇವೆ ಎಂದು ಜನರು ದೂರಿದರು. ಎರಡು ಅಥವಾ ಮೂರು ಕೌಂಟರ್‌ಗಳನ್ನು ಮಾಡಿ ಅಧಿಕಾರಿಗಳು ಸರಿಯಾಗಿ ಸೇವೆ ಸಲ್ಲಿಸಬೇಕು. ಜನರ ಸಮಯಕ್ಕೂ ಬೆಲೆಯಿದೆ ಎಂಬುದನ್ನು ಅವರು ಮನಗಾಣಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.