ADVERTISEMENT

ಪರಿಶಿಷ್ಟ ಜಾತಿಗೆ ಸೇರಿಸುವಂತೆ ಆಗ್ರಹ

ತಾಲ್ಲೂಕು ಕಚೇರಿ ಎದುರು ಮಡಿವಾಳ ಸಮುದಾಯದವರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 7:40 IST
Last Updated 12 ಅಕ್ಟೋಬರ್ 2017, 7:40 IST

ಗೌರಿಬಿದನೂರು: ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಡಿವಾಳ ಮಾಚೀದೇವರ ಸಂಘದ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಶನೈಶ್ವರಸ್ವಾಮಿ ದೇಗುಲದಿಂದ ನೂರಾರು ಮಂದಿ ಮಡಿವಾಳ ಜನಾಂಗದವರು ಮೆರವಣಿಗೆಯ ಮೂಲಕ ಬಿ.ಎಚ್. ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತ, ಗಾಂಧಿವೃತ್ತದ ಮೂಲಕ ಸಾಗಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟಿಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ‘ಮಡಿವಾಳ ಜನಾಂಗ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಪ್ರಗತಿ ಹೊಂದಬೇಕಾದರೆ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು. ೀ ಬಗ್ಗೆ ಅನೇಕ ಬಾರಿ ರಾಜ್ಯ ಮಟ್ಟದಲ್ಲಿ ಹೋರಾಟಗಳು ನಡೆಸಿದರೂ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಜನಾಂಗದವರನ್ನು 22 ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲಾಗಿದೆ. ಅದೇ ರೀತಿ ರಾಜ್ಯ ಸರ್ಕಾರ ಕೂಡ ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸುವ ಕೆಲಸ ಮಾಡಬೇಕು. ಶತಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಈ ಜನಾಂಗಕ್ಕೆ ಸರ್ಕಾರ ಸಾಮಾಜಿಕ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.

ಖಜಾಂಚಿ ಕೆಂಪರಾಜು ಮಾತನಾಡಿ, ‘ಪರಿಶಿಷ್ಟ ಜಾತಿಗೆ ಸೇರಿಸಿದರೆ ಮಾತ್ರ ಸಮುದಾಯ ಅಭಿವೃದ್ಧಿಯಾಗಲು ಸಾಧ್ಯ.  ಸರ್ಕಾರಗಳು ಹೆಚ್ಚಿನ ಜನಸಂಖ್ಯೆ ಇರುವ ಸಮುದಾಯಗಳಿಗೆ ಮಾತ್ರ ಹೆಚ್ಚಿನ ಮನ್ನಣೆ ನೀಡಲಾಗುತ್ತಿವೆ. ಸಣ್ಣಪುಟ್ಟ ಜನಾಂಗಗಳ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಆದ್ದರಿಂದ ನ್ಯಾಯಬದ್ಧವಾದ ಹಕ್ಕಿಗಾಗಿ ಸಮುದಾಯ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾದ ಅನಿವಾರ್ಯವಾಗಿದೆ’ ಎಂದರು.

ತಾಲ್ಲೂಕು ಘಟಕದ ಉಪಾಧ್ಯಕ್ಷ ಮಲ್ಲಿಕಾರ್ಜುನ್,ಗೌರವಾಧ್ಯಕ್ಷ ಅಶ್ವತ್ಥಯ್ಯ,ಮುಖಂಡರಾದ ಮುದುಗೆರೆ ಅಶ್ವತ್ಥ್, ಶ್ರೀರಾಮ, ನಾರಾಯಣಸ್ವಾಮಿ, ವೆಂಕಟಸ್ವಾಮಿ, ನಂಜುಂಡಪ್ಪ, ನರಸಿಂಹಯ್ಯ, ಶಿವಕುಮಾರ್, ಲಕ್ಷ್ಮಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.