ADVERTISEMENT

`ಪರಿಷತ್ತಿಗೆ ಬೇಕು ಪ್ರೋತ್ಸಾಹ, ಸಹಕಾರ'

ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 10:21 IST
Last Updated 15 ಜೂನ್ 2013, 10:21 IST

ಉತ್ತನೂರ ರಾಜಮ್ಮ ಮಂಟಪ (ಶಿಡ್ಲಘಟ್ಟ): `ಕನ್ನಡ ಸಾಹಿತ್ಯ ಪರಿಷತ್ತಿಗೆ ಆರ್ಥಿಕ ಶಕ್ತಿ ತುಂಬುವ ಜೊತೆಗೆ ಅಗತ್ಯ ಸೌಲಭ್ಯ ಒದಗಿಸಿದಲ್ಲಿ, ಪರಿಷತ್ತು ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುತ್ತದೆ. ಕನ್ನಡನಾಡು-ನುಡಿ ಚಟುವಟಿಕೆಗಳು ಸಕ್ರಿಯವಾಗಿ ಕೈಗೊಳ್ಳಲು ಸಾಹಿತ್ಯ ಪರಿಷತ್ತಿಗೆ ಪ್ರೋತ್ಸಾಹ ನೀಡಬೇಕು' ಎಂದು ಸಾಹಿತಿ ಡಾ. ಆರ್.ಕೆ.ನಲ್ಲೂರು ಪ್ರಸಾದ್ ತಿಳಿಸಿದರು.

ಶುಕ್ರವಾರ ನಡೆದ ಜಿಲ್ಲಾ ತೃತೀಯ ಕನ್ನಡ ಸಾಹಿತ್ಯ ಸಮ್ಮೆಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡನಾಡು-ನುಡಿ ಅಭಿವೃದ್ಧಿಗೆ ಪ್ರೇರಕಶಕ್ತಿ. ಕನ್ನಡಪರ ದನಿಯೆತ್ತಲು ಮತ್ತು ಕನ್ನಡದ ಕೈಂಕರ್ಯಗಳನ್ನು ಕೈಗೊಳ್ಳಲು ಪರಿಷತ್ತಿಗೆ ಅಗತ್ಯ ಸಹಕಾರ ಮತ್ತು ಪ್ರೋತ್ಸಾಹ ಬೇಕು ಎಂದರು.

ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮ್ಮೇಳನಾಧ್ಯಕ್ಷೆ ಗುಡಿಬಂಡೆ ಪೂರ್ಣಿಮಾ, ನನ್ನ ಬರಹ, ನುಡಿ ಮತ್ತು ಬದುಕು ಎಲ್ಲವನ್ನೂ ಕಟ್ಟಪಾಡು ಮತ್ತು ಶೋಷಣೆ ವಿರುದ್ಧ ದನಿಯೆತ್ತಲು ಮೀಲಿಟ್ಟಿದ್ದೇನೆ. ನನ್ನ ಬರಹಗಳೆಲ್ಲವೂ ಶೋಷಣೆ ಮತ್ತು ದೌರ್ಜನ್ಯ ವಿರುದ್ಧವೇ ಮೀಸಲಾಗಿವೆ ಎಂದರು.

ಪ್ರೀತಿ, ಭಕ್ತಿಯ ಶಕ್ತಿ, ತಾಯ್ತನ, ದೂರದೃಷ್ಟಿ, ದೇಶಭಕ್ತಿ, ಗುರುಭಕ್ತಿ ಮುಂತಾದವುಗಳು ಎಲ್ಲರಿಗೂ ಪ್ರೇರಣೆಯಾಗಬೇಕು. ಕನ್ನಡದ ಒಂದು ಭಾಗವಾಗಿ, ಬದುಕಿನಲ್ಲಿ ನಿರೀಕ್ಷೆಗಳಿಲ್ಲದೇ ದಮನಕ್ಕೊಳಗಾದವರ ಪರವಾಗಿ ನಾನು ಸಾಹಿತ್ಯವನ್ನು ರಚಿಸಿದ್ದೇನೆ. ನನ್ನ ಸಾಹಿತ್ಯ ಚಟುವಟಿಕೆಯನ್ನು ಮುಂದುವರಿಸುತ್ತೇನೆ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ ಮತ್ತು ಶಿವಲೀಲಾ ರಾಜಣ್ಣ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಎಲ್.ಹನುಮಂತರಾವ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಕೃಷ್ಣ, ಗೌರವ ಕಾರ್ಯದರ್ಶಿ ಮಂಜುನಾಥ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಧುರನಾಥರೆಡ್ಡಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜು, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಸರಸ್ವತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.