ADVERTISEMENT

ಪರಿಸರದತ್ತ ಸರ್ಕಾರಿ ಶಾಲೆ....

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 11:05 IST
Last Updated 15 ಮಾರ್ಚ್ 2012, 11:05 IST

ಹಸಿರು  ಮಕ್ಕಳಿಗೆ ಉತ್ಸಾಹ ನೀಡುವ `ಚಿಲುಮೆ~ ಎನ್ನಲಾಗುತ್ತದೆ. ಇದನ್ನರಿತ  ಬಾಗೇಪಲ್ಲಿ ತಾಲ್ಲೂಕಿನ ಚೇಳೂರು ಹೋಬಳಿ ಷೇರ್‌ಖಾನ್ ಕೋಟೆ ಗ್ರಾಮದ ಸರ್ಕಾರಿ ಶಾಲೆ ವಿಭಿನ್ನ ಪ್ರಯೋಗ ಮಾಡಿದೆ. ಇಲ್ಲಿನ ಶಾಲಾ ಆವರಣದಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕೈತೋಟ ಬೆಳೆಸಿದ್ದಾರೆ.
ತೋಟವು ಹೂ-ಎಲೆಗಳಿಂದ ನಳನಳಿಸುತ್ತಿದೆ.

ಈ ಶಾಲೆಯು ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿಭಾಗದಲ್ಲಿದ್ದು, ಪಟ್ಟಣದಿಂದ ಸುಮಾರು 34 ಕಿ.ಮೀ. ದೂರ ಇದೆ. ಪ್ರತಿ ತಿಂಗಳು ಒಂದಿಲ್ಲೊಂದು ವಿಶೇಷ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವ ಈ ಶಾಲೆಯು ಇತ್ತೀಚಿನ ದಿನಗಳಲ್ಲಿ ಪರಿಸರತ್ತ ಹೆಚ್ಚಿನ ಆಸಕ್ತಿ ತೋರುತ್ತಿದೆ. ಈ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಮಾತ್ರವಲ್ಲದೇ ಆಯಾ ಗ್ರಾಮದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.

`ಪರಿಸರ ಜಾಗೃತಿ ಮತ್ತು ಕಾಳಜಿ ಕುರಿತು ಪಠ್ಯಪುಸ್ತಕಗಳಲ್ಲಿ ಬೋಧನೆ ಮಾಡಿದರೆ ಸಾಲದು. ವಿದ್ಯಾರ್ಥಿಗಳಲ್ಲಿ ನೈಜ ಪರಿಸರ ಕಾಳಜಿ ಮೂಡಿಸಲು ಪರಿಸರದ ಪಾಠವನ್ನೂ ಮಾಡುತ್ತೇವೆ. ಶಾಲಾ ಆವರಣದಲ್ಲಿ ಬಣ್ಣಬಣ್ಣದ ಹೂಗಳನ್ನು, ಕಾಯಿಗಳನ್ನು ಮತ್ತು ಸುಗಂಧ ಸೂಸುವ ಸಸ್ಯಗಳನ್ನು ಬೆಳೆಸಿದ್ದೇವೆ.
ಹೂಗಿಡಗಳು ಅಲ್ಲದೇ ಹಣ್ಣುತರಕಾರಿಗಳನ್ನು ಮತ್ತು ಸಸ್ಯಗಳನ್ನು ಬೆಳೆಸಿದ್ದೇವೆ. ತರಕಾರಿ-ಸೊಪ್ಪುಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುತ್ತೇವೆ~ ಎಂದು ಶಾಲೆಯ ಮುಖ್ಯ ಶಿಕ್ಷಕಿ ಸರಸ್ವತಮ್ಮ `ಪ್ರಜಾವಾಣಿ~ಗೆ ತಿಳಿಸಿದರು.

`1962ರಲ್ಲಿ ಸ್ಥಾಪನೆಗೊಂಡ ನಮ್ಮ ಶಾಲೆಯು ಕುಡಿಯುವ ನೀರು, ಶೌಚಾಲಯ ಸೌಲಭ್ಯ ಮತ್ತು ಕಾಂಪೌಂಡ್ ಒಳಗೊಂಡಿದೆ. ಉತ್ತಮ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರುತ್ತಾರೆ. ಹೈದರಾಬಾದ್‌ನ ಮಾನ್ಸೆಂಟೊ ಮಾನವ ಹಕ್ಕುಗಳ ಸಂಸ್ಥೆಯು ನಮ್ಮ ಶಾಲೆಗೆ `ಉತ್ತಮ ಪರಿಸರ ಸ್ನೇಹಿ~ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಸಂಸ್ಥೆ ವತಿಯಿಂದ ಶಾಲೆಗೆ ಉಚಿತವಾಗಿ ಕಂಪ್ಯೂಟರ್‌ಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಉದ್ದೇಶ~ ಎಂದು ಅವರು ತಿಳಿಸಿದರು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.