ADVERTISEMENT

ಪರಿಸರ ಸಂರಕ್ಷಣೆ ಇಂದಿನ ಅಗತ್ಯ

ಪರಿಸರ ಸಂರಕ್ಷಿಸಿದ ಶಾಲೆಗಳಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 6:00 IST
Last Updated 7 ಮಾರ್ಚ್ 2014, 6:00 IST

ಚಿಕ್ಕಬಳ್ಳಾಪುರ: ಪರಿಸರ ರಕ್ಷಣೆಯ ಘೋಷಣೆಗಳು ಘೋಷಣೆಗಳಾಗಿಯೇ ಉಳಿಯದೆ, ಆಚರಣೆಗೂ ಬರುವಂತಾ­ಗ­ಬೇಕು. ಮನೆ ಆವರಣ ಮತ್ತು ಲಭ್ಯ ಸ್ಥಳಗಳಲ್ಲಿ ಸಸಿ ನೆಟ್ಟು ಬೆಳೆಸುವ ಮೂಲಕ ಎಲ್ಲರೂ ಪರಿಸರ ರಕ್ಷಣಾ ಕಾರ್ಯದಲ್ಲಿ ತೊಡಗಬೇಕು ಎಂದು ಜಿ.ಪಂ. ಮುಖ್ಯಕಾರ್ಯ­ನಿರ್ವಹಣಾ­ಧಿಕಾರಿ ನೀಲಾ ಮಂಜುನಾಥ್ ತಿಳಿಸಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ‘ನನಸಾದ ಕನಸು’ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮಕ್ಕಳಿಗೆ ಪ್ರಶಸ್ತಿಗಳನ್ನು ವಿತರಿಸಿ ಅವರು ಮಾತನಾಡಿದರು.

ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿರುವ ಇಂದಿನ ಸಂದರ್ಭದಲ್ಲಿ ನಾವು ಎಚ್ಚೆತ್ತುಕೊಂಡು ಸಸಿಗಳನ್ನು ಬೆಳೆಸದಿದ್ದಲ್ಲಿ, ಭವಿಷ್ಯದಲ್ಲಿ ನಾವು ಆರೋಗ್ಯವಂತರಾಗಿ ಬದುಕುವುದು ಕಷ್ಟವಾಗುತ್ತದೆ. ಮುಂದಿನ ಪೀಳಿಗೆಯವರು ನೆಮ್ಮದಿಯಿಂದ ಬಾಳಬೇಕಿದ್ದರೆ, ಹಸಿರು ವಾತಾವರಣ ಆವರಿಸಬೇಕು. ಮಾಲಿನ್ಯದಿಂದ ಉಂಟಾಗುವ ಕಾಯಿಲೆಗಳನ್ನು ನಿಯಂತ್ರಿಸಬೇಕು ಎಂದು ಅವರು ತಿಳಿಸಿದರು.

4 ಕಿ.ಮೀ. ಉದ್ದಕ್ಕೂ ರಸ್ತೆ ಬದಿಗಳಲ್ಲಿ ಮರಗಳನ್ನು ಬೆಳೆಸಿದ ಸಾಲುಮರದ ತಿಮ್ಮಕ್ಕ ನಮ್ಮ ನಿಮ್ಮಂತಹವರಿಗೆ ಮಾದರಿಯಾಗಬೇಕು. ಅವರಂತೆಯೇ ನಾವೂ ಸಸಿಗಳನ್ನು ಬೆಳೆಸುವ ಕಾರ್ಯದಲ್ಲಿ ಆಸಕ್ತಿ ತೋರಬೇಕು ಎಂದು ಹೇಳಿದರು.

ಶಿವಮೊಗ್ಗ ಪರಿಸರ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ಎ.ಎಸ್.ಚಂದ್ರಶೇಖರ್ ಮಾತನಾಡಿ, ಮಾಲಿನ್ಯ ತಡೆಗಟ್ಟುವಲ್ಲಿ ಮತ್ತು ಹಸಿರು ಪರಿಸರ ಕಾಪಾಡುವಲ್ಲಿ ಶ್ರದ್ಧೆ ಮತ್ತು ಬದ್ಧತೆಯಿಂದ ತೊಡಗಿಕೊಳ್ಳುತ್ತೇನೆಂದು ಎಲ್ಲಾ ಮಕ್ಕಳು ಪಣತೊಡಬೇಕು. ಪರಿಸರಕ್ಕೆ ಹಾನಿಯುಂಟು ಮಾಡುವುದನ್ನು ತಡೆಯುವ ಮನೋಭಾವ ಮಕ್ಕಳಲ್ಲಿ ಮೂಡಬೇಕು. ಆಗ ಮಾತ್ರವೇ ಪರಿಸರ ಜಾಗೃತಿ ಸಾರ್ಥಕವಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ವಿಜಯಕುಮಾರ್‌ ಮಾತನಾಡಿ, ಸರ್ಕಾರಿ ಶಾಲೆಗಳನ್ನೇ ಗುರುತಿಸಿ ಪರಿಸರ ಮಿತ್ರ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಪ್ರಶಸ್ತಿ ಗಳಿಸುವುದರಿಂದ ಸ್ಫೂರ್ತಿ ಪಡೆಯುವ ಮಕ್ಕಳು ಇನ್ನಷ್ಟು ಸಾಧನೆ ಮಾಡಲು ಬಯಸುತ್ತಾರೆ. ಶಾಲಾ ಆವರಣದಲ್ಲಿ ಅಲ್ಲದೇ ಮನೆ ಆವರಣದಲ್ಲೂ ಸಹ ಪುಟ್ಟದಾದ ತೋಟ ಮಾಡಲು ಮುಂದಾಗುತ್ತಾರೆ. ಪರಿಸರ ಜಾಗೃತಿ ಮೂಡಿಸುವಲ್ಲಿ ಇದು ಕೂಡ ಉತ್ತಮ ಮಾರ್ಗ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಅಜಿತ್ ಪ್ರಸಾದ್‌, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ವಿಜಿ ಕಾರ್ತಿಕೇಯನ್, ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಸಿ.ಆರ್‌.ಮಂಜುನಾಥ್‌, ಜಿಲ್ಲಾ ಪರಿಸರ ಸಂರಕ್ಷಣಾ ವೇದಿಕೆಯ ಸಂಚಾಲಕ ಗುಂಪುಮರದ ಆನಂದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.