ADVERTISEMENT

ಪರ–ವಿರೋಧದ ನಡುವೆ ಎತ್ತಿನಹೊಳೆಗೆ ಇಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 9:14 IST
Last Updated 3 ಮಾರ್ಚ್ 2014, 9:14 IST

ಚಿಕ್ಕಬಳ್ಳಾಪುರ: ಹಲ ವರ್ಷಗಳ ಬೇಡಿಕೆ­ಯಾಗಿರುವ ನೀರಾವರಿ ಯೋಜನೆ­ಯಿಂದ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ಶಾಸಕ ಡಾ. ಕೆ.ಸುಧಾಕರ್‌ ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ಬಗೆ­ಹರಿಸಲು ಇದು ಪ್ರಥಮ ಹೆಜ್ಜೆ­ಯಾಗಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸಚಿವ ವೀರಪ್ಪ ಮೊಯಿಲಿ  ಒತ್ತಾಸೆಯಿಂದ ಸುಮಾರು ₨ 12 ಸಾವಿರ ಕೋಟಿ ವೆಚ್ಚದ ಯೋಜನೆಗೆ ಶಂಕುಸ್ಥಾಪನೆ ನೆರವೇರುತ್ತಿದೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸದ್ಯದ ಸ್ಥಿತಿಯಲ್ಲಿ ಭಾರಿ ಪ್ರಮಾಣ­ದಲ್ಲಿ ನೀರು ದೊರೆಯದಿದ್ದರೂ ಜನರ ಬಾಯಾರಿಕೆ ತಣಿಸುವಷ್ಟಾದರೂ ನೀರು ಲಭ್ಯವಾಗುತ್ತಿರುವ ಬಗ್ಗೆ ಸಮಾಧಾನ­ವಿದೆ. ಯೋಜನೆಯಿಂದ ಯಾವುದೇ ರೀತಿಯಲ್ಲೂ ಪ್ರಕೃತಿಗೆ ಧಕ್ಕೆಯಾಗುವು­ದಿಲ್ಲ. ಇದರ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಿಕೊಳ್ಳುವುದು ಬೇಡ ಎಂದು ತಿಳಿಸಿದರು.

ಎತ್ತಿನಹೊಳೆ ಯೋಜನೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಜನರು ಬಂದ್‌ ಕರೆ ನೀಡಿರುವುದು ವಿಷಾದನೀಯ. ವ್ಯರ್ಥವಾಗಿ ಹರಿದು ಸಮುದ್ರದ ಪಾಲಾಗುವ ನೀರನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆಯೇ ಹೊರತು ಯಾರಿಂದಲೂ ನೀರು ಕಸಿದುಕೊಳ್ಳಲು ಬಯಸಿಲ್ಲ ಎಂದು ತಿಳಿಸಿದರು.

ಒಂದು ವೇಳೆ ಎತ್ತಿನಹೊಳೆ ಯೋಜನೆ­ಯಲ್ಲಿ ಲೋಪದೋಷ ಕಂಡು ಬಂದಲ್ಲಿ  ಪರ್ಯಾಯ ಮಾರ್ಗ ಕಂಡುಕೊಳ್ಳಲು ಪ್ರಯತ್ನಿಸಬೇಕೆ ಹೊರತು ಯೋಜನೆಗೆ ಅನಗತ್ಯವಾಗಿ ವಿರೋಧಿಸುವುದು ಸರಿಯಲ್ಲ ಎಂದು ತಿಳಿಸಿದರು.

ಮಾಜಿ ಶಾಸಕ ಎಸ್‌.ಎಂ.ಮುನಿ­ಯಪ್ಪ, ನಗರಸಭೆ ಸದಸ್ಯ ಗಜೇಂದ್ರ, ಯುವ ಕಾಂಗ್ರೆಸ್‌ ಮುಖಂಡ ಶ್ರೀನಿ­ವಾಸ್‌, ಮುಖಂಡ ಗರಗರೆಡ್ಡಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸುವರೇ?
ಎತ್ತಿನಹೊಳೆಗೆ ಶಾಸಕರ ವಿರೋಧ
ಚಿಕ್ಕಬಳ್ಳಾಪುರ: ಜಿಲ್ಲೆಯ ನಾಲ್ವರು ಶಾಸಕರಾದ ಡಾ.ಕೆ.ಸುಧಾಕರ್‌, ಎಸ್‌.ಎನ್‌.­ಸುಬ್ಬಾರೆಡ್ಡಿ, ಎಂ.ರಾಜಣ್ಣ ಮತ್ತು ಎಂ.ಕೃಷ್ಣಾರೆಡ್ಡಿ ಅವರು ಎತ್ತಿನಹೊಳೆ ಯೋಜನೆ ಅನುಷ್ಠಾನವಾಗುವುದರ ಬಗ್ಗೆ ಕೆಲ ದಿನಗಳ ಹಿಂದೆ ವಿರೋಧ ವ್ಯಕ್ತಪಡಿಸಿದ್ದರು. ಅಧಿಕಾರಕ್ಕಿಂತ ನಮ್ಮ ಜನರಿಗೆ ನೀರು ಕೊಡುವುದು ಮುಖ್ಯವೆಂದು ಮಾತನಾಡಿದ್ದ ನಾಲ್ವರು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಸಭೆಯಲ್ಲಿ ಪಾಲ್ಗೊಂಡು ಯೋಜನೆಯ ಶಂಕುಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದರು.

ಆದರೆ ಈಗ ನಾಲ್ವರು ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸುವರೇ ಅಥವಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಕೈಗೊಳ್ಳುವ ಪ್ರತಿಭಟನೆಯಲ್ಲಿ ಭಾಗವಹಿಸುವರೇ ಎಂಬುದು ಕುತೂಹಲ ಮೂಡಿಸಿದೆ. ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಶಾಸಕರ ಸ್ಪಷ್ಟವಾದ ನಿಲುವು ಏನಿದೆ ಎಂಬುದು ಸೋಮವಾರ ಬಹಿರಂಗವಾಗಲಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡರು ತಿಳಿಸಿದ್ದಾರೆ.

ಕಾರ್ಯಕ್ರಮ ಸ್ಥಳ ಕಾಂಗ್ರೆಸ್‌ಮಯ !
ಎತ್ತಿನಹೊಳೆ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮ ಸಮೀಪದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಕಾಂಗ್ರೆಸ್ ಧ್ವಜ, ಬ್ಯಾನರ್‌ಗಳನ್ನು ಹಾಕಲಾಗಿದೆ. ಇದು ಅಧಿಕೃತವಾಗಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಕಾರ್ಯಕ್ರಮವಾಗಿದ್ದರೂ ಕಾಂಗ್ರೆಸ್‌ ಬ್ಯಾನರ್‌, ಫ್ಲೆಕ್ಸ್‌ಗಳು ಕಾಣಿಸುತ್ತಿರುವ ಕುರಿತು ಜಿಲ್ಲೆಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಾರ್ಗ ಬದಲಾವಣೆ
ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆವರೆಗೆ ಹಳೇ ಜಿಲ್ಲಾಧಿಕಾರಿ ಕಚೇರಿಯಿಂದ ನಗರದ ವಾಪಸಂದ್ರದವರೆಗೆ ವಾಹನ ಸಂಚಾರವನ್ನು  ನಿರ್ಬಂಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ–7 ಬೈಪಾಸ್‌ ಮೂಲಕ ಚಿಕ್ಕಬಳ್ಳಾಪುರ ಪ್ರವೇಶಿಸಬೇಕು.

ಜೆಡಿಎಸ್‌ ಪ್ರತಿಭಟನೆ
ಎತ್ತಿನಹೊಳೆ ಯೋಜನೆ ವಿರೋಧಿಸಿ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರು ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಸಲಿದ್ದಾರೆ. ಶಾಶ್ವತ ನೀರಾವರಿ ಹೋರಾಟ ಸಮಿತಿ ನಡೆಸುವ ಮೆರವಣಿಗೆಗೆ ಬೆಂಬಲ ವ್ಯಕ್ತಪಡಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್ ತಿಳಿಸಿದ್ದಾರೆ. 

ಕಪ್ಪು ಬಾವುಟ ಪ್ರದರ್ಶನ
ಗೌರಿಬಿದನೂರು:  ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಂಡಿರುವ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಕಾರ್ಯಕ್ರಮದಂದು ಪ್ರತಿಭಟನಾ ರ್‌್ಯಾಲಿ ಹಮ್ಮಿಕೊಂಡಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಜಿಲ್ಲೆ ಶಾಶ್ವತ ನೀರಾವರಿ ಹೋರಾಟ ಸಮಿತಿಗೆ  ಜಿಲ್ಲಾ ಜನತಾದಳ (ಸಂಯುಕ್ತ) ಪಕ್ಷವು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಪಕ್ಷದ ಜಿಲ್ಲಾ ಸಂಚಾಲಕ ಕೆ.ವಿ.ಸದಾಶಿವಯ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT