ADVERTISEMENT

ಪಿಡಿಒ ವಿರುದ್ಧ ಕ್ರಮ ಇಲ್ಲ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 11:15 IST
Last Updated 1 ಜನವರಿ 2014, 11:15 IST

ಚಿಂತಾಮಣಿ: ಹೊಸ ವರ್ಷದಲ್ಲಿ ಉತ್ತಮ ಮಳೆ, ಬೆಳೆಯಾಗಿ  ಕ್ಷೇತ್ರದ ಸಮಸ್ತ ಜನರ ಆರೋಗ್ಯ, ಐಶ್ವರ್ಯ ವೃದ್ಧಿಸಲಿ ಎಂದು ಶಾಸಕ ಎಂ.ಕೃಷ್ಣಾರೆಡ್ಡಿ ಹಾರೈಸಿದರು. ನಗರದ ಜೆಡಿಎಸ್‌ ಕಚೇರಿಯಲ್ಲಿ ಮಂಗಳವಾರ ಹೊಸ ವರ್ಷದ ಕ್ಯಾಲೆಂಡರ್‌ ಬಿಡುಗಡೆ ಮಾಡಿ ಮಾತನಾಡಿ, ಹಳೆಯ ವರ್ಷದ ಕೊಳೆಯೆಲ್ಲ ನಾಶವಾಗಲಿ ಎಂಬ ಕಾರಣಕ್ಕೆ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದೇವೆ.

ಜಿಲ್ಲಾಧಿಕಾರಿ ಡಾ.ವಿಶಾಲ್‌ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ. ಹೊಸ ವರ್ಷದಲ್ಲಾದರೂ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಲಿ ಎಂದರು. ಗ್ರಾಮ ಪಂಚಾಯತಿಯಿಂದ ಹಿಡಿದು ತಾಲ್ಲೂಕು ಹಂತದವರೆಗೆ  ಪ್ರಾಮಾಣಿಕ ಅಧಿಕಾರಿಗಳು ಬರಬೇಕು. ತಾಲ್ಲೂಕಿನ ಕೈವಾರದಲ್ಲಿ ಪಿಡಿಒ ಲಕ್ಷಾಂತರ ರೂಪಾಯಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು 8 ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿದರೂ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಮಕ್ಕಳಿಗೆ ಸಮವಸ್ತ್ರಗಳನ್ನು ಸೂಕ್ತವಾಗಿ ವಿತರಿಸದೆ ಬಟ್ಟೆ ಮೂಟೆಗಳು ದೂಳು ತಿನ್ನುತ್ತಿದ್ದವು. ಚುನಾಯಿತ ಪ್ರತಿನಿಧಿ­ಗಳೇ ನೇರವಾಗಿ ಹಿಡಿದು ತೋರಿಸಿ­ದರೂ ಕ್ರಮ ಕೈಗೊಂಡಿಲ್ಲ ಎಂದರು. ತಾಲ್ಲೂಕಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಮಟ್ಕಾ, ಜೂಜಿನ ಹಾವಳಿ, ಮರಳು ದಂಧೆ, ಗ್ರಾಮೀಣ ಭಾಗಗಳಲ್ಲಿ ಕೆಲವು ಮನೆ ಮತ್ತು ಅಂಗಡಿಗಳಲ್ಲಿ ಮದ್ಯದ ಬಹಿರಂಗವಾಗಿ ಮಾರಾಟ ಮುಂತಾದ ಅವ್ಯವಹಾರ ಅಧಿಕ­ವಾಗಿದೆ ಎಂದು ಆರೋಪಿಸಿ­ದರು. ನಗರಸಭೆ ಸದಸ್ಯರಾದ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ಸಾದಪ್ಪ, ನಟರಾಜ್‌, ಜೆಡಿಎಸ್‌ ತಾಲ್ಲೂಕು  ಘಟಕದ ಉಪಾಧ್ಯಕ್ಷ ಬೈರಾರೆಡ್ಡಿ, ಮುಖಂಡರಾದ ಕೃಷ್ಣಮೂರ್ತಿ, ರಘುನಾಥರೆಡ್ಡಿ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT