ADVERTISEMENT

ಪುಸ್ತಕದ ಕಡು ವ್ಯಾಮೋಹಿ

ಜನಪದ ತಜ್ಞನಿಗೆ ವಿವಿಧ ಶಾಲಾ ಕಾಲೇಜುಗಳ ಉಪನ್ಯಾಸಕರಿಂದ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 9:47 IST
Last Updated 24 ಮಾರ್ಚ್ 2018, 9:47 IST

ಚಿಕ್ಕಬಳ್ಳಾಪುರ: ‘ಶಿಕ್ಷಣದಿಂದ ಬಡತನ ಮೆಟ್ಟಿ ಮೇಲೆ ಬಂದ ಗ್ರಾಮೀಣ ಪ್ರತಿಭೆ ಜಿ.ಶ್ರೀನಿವಾಸಯ್ಯ ಅವರು ಅಧ್ಯಯನಶೀಲತೆ ಮೈಗೂಡಿಸಿಕೊಂಡು ಜನಪದ ಸಾಹಿತ್ಯ ಕ್ಷೇತ್ರದಲ್ಲಿ ಅಗಾಧವಾದ ಸಂಶೋಧನಾ ಕೃಷಿ ಮಾಡುವ ಮೂಲಕ ಬೆಳೆಯುವವರಿಗೆ ಸ್ಫೂರ್ತಿಯಾಗಿದ್ದರು. ಅವರ ಅಕಾಲಿಕ ಅಗಲಿಕೆ ಜನಪದ ಕ್ಷೇತ್ರಕ್ಕೆ ತುಂಬಲಾರದ ನಷ್ಟ’ ಎಂದು ಶಿಕ್ಷಣ ತಜ್ಞ ಪ್ರೊ.ಕೋಡಿರಂಗಪ್ಪ ಅಭಿಪ್ರಾಯಪಟ್ಟರು.

ನಗರದಲ್ಲಿ ಇತ್ತೀಚೆಗೆ ವಿವಿಧ ಶಾಲಾ ಕಾಲೇಜುಗಳ ಉಪನ್ಯಾಸಕರು ಆಯೋಜಿಸಿದ್ದ ಜನಪದ ತಜ್ಞ ಜಿ.ಶ್ರೀನಿವಾಸಯ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಶ್ರೀನಿವಾಸಪುರ ತಾಲ್ಲೂಕಿನ ದೇವರಪಲ್ಲಿ ಎಂಬ ಪುಟ್ಟ ಊರಿನ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ ಶ್ರೀನಿವಾಸಯ್ಯ ಜನಪದ ಕ್ಷೇತ್ರದ ತಾರೆಯಾಗಿ ಬೆಳೆಯುವಲ್ಲಿ ಅವರ ತಾಯಿಯ ಪಾತ್ರ ಅಗಾಧವಾಗಿದೆ. ಕೂಲಿನಾಲಿ ಮಾಡಿ ಬೆಳೆಸಿದ ತಾಯಿಯ ಕಷ್ಟ ಅರಿತ ಶ್ರೀನಿವಾಸಯ್ಯ ಅವರು ಶಿಕ್ಷಣಕ್ಕೆ ನಿಜವಾದ ಬೆಲೆ ಇದೆ ಎಂದು ಸಾಧಿಸಿ ತೋರಿಸಿದ್ದರು ಎಂದು ಹೇಳಿದರು.

ADVERTISEMENT

ಶ್ರೀನಿವಾಸಯ್ಯ ಇಲ್ಲಿನ ಪಿಯು ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿ ಮಾಡಿಕೊಂಡೇ ರಾಜ್ಯದ ಜನಪದ ಸಾಹಿತ್ಯ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಜಿಲ್ಲೆಗಳಲ್ಲಿ ಜನಪದ ವಿದ್ವಾಂಸರಾಗಿ ಜನಪದ ಕೋಶ ಯೋಜನೆಯಲ್ಲಿ ಸಂಚಾಲಕರಾಗಿ ಕೆಲಸ ಮಾಡಿದ್ದರು. ಜತೆಗೆ ರಾಷ್ಟ್ರೀಯ ಮಟ್ಟದಲ್ಲಿ ಭಾಷಾಂತರ ಕೆಲಸ ಮಾಡುತ್ತಿದ್ದರು. ಅತ್ಯಂತ ಸ್ನೇಹಜೀವಿಯಾಗಿದ್ದ ಅವರು ಇನ್ನೂ ಅನೇಕ ವರ್ಷಗಳ ಕಾಲ ಬದುಕಬೇಕಿತ್ತು ಎಂದು ತಿಳಿಸಿದರು.

ಪುಸ್ತಕದ ಕಡು ವ್ಯಾಮೋಹಿಯಾಗಿದ್ದ ಅವರು ಹೆಚ್ಚೆಚ್ಚು ಪುಸ್ತಕ ಕೊಂಡು ಓದುವ ಜತೆಗೆ ಬರೆಯುತ್ತಿದ್ದರು. ಅವರ ಅನೇಕ ಅನುವಾದ ಕೃತಿಗಳು ಹಾಗೇ ಉಳಿದಿವೆ. ಅವುಗಳನ್ನು ಮುದ್ರಿಸಿ ಹೊರತರುವ ಮೂಲಕ ಅವರ ಹೆಸರು ಉಳಿಸುವ ಕೆಲಸ ಮಾಡಬೇಕಿದೆ. ಆ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆ ಖರೀದಿಸಿದರೆ ಅದರಿಂದ ಬರುವ ಹಣವನ್ನು ಅವರ ತಾಯಿಗೆ ಕಳುಹಿಸಲು ವ್ಯವಸ್ಥೆ ಮಾಡಬೇಕು
ಎಂದರು.

ಮುದ್ದೇನಹಳ್ಳಿ ಸತ್ಯಸಾಯಿ ವಿದ್ಯಾಸಂಸ್ಥೆಯ ಸುಂದರ್ ಭಟ್ ಮಾತನಾಡಿ, ಗ್ರಾಮ ಚರಿತ್ರ ಕೋಶ ಯೋಜನೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಸಂಚಾಲಕರಾಗಿದ್ದ ಶ್ರೀನಿವಾಸಯ್ಯ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದರು. ಅವರ ಅಗಲಿಕೆ ನೋವು ನಮ್ಮನ್ನು ಆವರಿಸಿಕೊಂಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀನಿವಾಸಯ್ಯ ಅವರ ಜನಪದ ಲೇಖನಗಳ ಸಂಗ್ರಹ ಕೃತಿ ‘ತಣಿಗೆ’ ಪುಸ್ತಕವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಯಿತು.

ಪಂಚಗಿರಿ ಪಿಯು ಕಾಲೇಜಿನ ಪ್ರಾಂಶುಪಾಲೆ ಕೋಮಲಾ, ಪಂಚಗಿರಿ ಬೋಧನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾರಾಯಣಸ್ವಾಮಿ, ಉಪನ್ಯಾಸಕರಾದ ಎನ್.ಲೋಕನಾಥ್, ಶಂಕರ್, ಪಿ.ಆರ್.ರವಿ, ತತ್ತೂರು ಲೋಕೇಶಪ್ಪ, ಮುಖಂಡರಾದ ಸು.ಧಾ.ವೆಂಕಟೇಶ್, ಅಮೃತಕುಮಾರ್
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.