ADVERTISEMENT

ಪೆಟ್ರೋಲ್, ಬಸ್ ಪ್ರಯಾಣ ದರ ಏರಿಕೆ: ಸಿಪಿಎಂ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 6:08 IST
Last Updated 18 ಜೂನ್ 2013, 6:08 IST

ಚಿಂತಾಮಣಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಸುವ ಮೂಲಕ ಮಧ್ಯಮ ವರ್ಗದ ಜನತೆ ಮೇಲೆ ಮತ್ತೊಮ್ಮೆ ಗದಾಪ್ರಹಾರ ನಡೆಸಿದೆ ಎಂದು ಸಿಪಿಎಂ ತಾಲ್ಲೂಕು ಘಟಕ ಟೀಕಿಸಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ತತ್ತರಿಸಿರುವ ಸಾಮಾನ್ಯ ಜನತೆ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ. ಹಣದುಬ್ಬರವನ್ನು ನಿಯಂತ್ರಿಸಿ, ಬೆಲೆ ಏರಿಕೆ ಹತೋಟಿಯಲ್ಲಿಟ್ಟು, ಜನಪರ ನೀತಿಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಪಕ್ಷದ ಪರವಾಗಿ ಕಾರ್ಯದರ್ಶಿ ಸಿ.ಗೋಪಿನಾಥ್ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಏರಿಸುವ ಮೂಲಕ ಜನವಿರೋಧಿ ನೀತಿಯನ್ನು ಅನುಸರಿಸಿದೆ. ಬಸ್ ಪ್ರಯಾಣ ದರ ಏರಿಕೆಯಿಂದ ಜನ ಜೀವನದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಅವರು ಟೀಕಿಸಿದ್ದಾರೆ.
ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಕಡಿತ ಮಾಡುವುದು, ಜನ ವಿರೋಧಿ ಯೂನಿಟ್ ಪದ್ಧತಿ ಮುಂದುವರಿಸುವುದು ಹಾಗೂ ಬಸ್ ಪ್ರಯಾಣ ದರ ಏರಿಕೆ ನಿರ್ಧಾರಗಳನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರಸ್ತೆ ತಡೆ: ಘೋಷಣೆ
ಬಾಗೇಪಲ್ಲಿ: ಪೆಟ್ರೋಲ್, ಡೀಸೆಲ್ ಹಾಗೂ ಪ್ರಯಾಣ ದರ ಏರಿಕೆ ಕ್ರಮ ಖಂಡಿಸಿ ಸಿಪಿಎಂ ಕಾರ್ಯಕರ್ತರು ಸೋಮವಾರ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಕೆಲ ಕಾಲ ರಸ್ತೆ ತಡೆ ನಡೆಸಿದರು.

ಪಟ್ಟಣದ ಸುಂದರಯ್ಯ ಭವನದಿಂದ ಮೆರವಣಿಗೆ ಹೊರಟ ಸಿಪಿಎಂ ಕಾರ್ಯಕರ್ತರು ಮುಖ್ಯರಸ್ತೆಗಳಲ್ಲಿ ಸಂಚರಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಪಿ.ಮುನಿವೆಂಕಪ್ಪ ಮಾತನಾಡಿದರು.
ಸಿಪಿಎಂ ತಾಲ್ಲೂಕು ಘಟಕ ಕಾರ್ಯದರ್ಶಿ ರಘುರಾಮರೆಡ್ಡಿ, ಬಡ ಕೃಷಿ-ಕೂಲಿ-ಕಾರ್ಮಿಕರ ಪರವಾಗಿ ಯೋಜನೆಗಳು ರೂಪಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ನಾರಾಯಣಮ್ಮ, ಪುರಸಭೆ ಸದಸ್ಯರಾದ ಮಹಮದ್ ಅಕ್ರಂ, ಬಿ.ಎಚ್.ಮಹಮದ್ ಆರೀಫ್, ಮುಖಂಡರಾದ ರಾಮಲಿಂಗಪ್ಪ, ಗೋವರ್ಧನಚಾರಿ, ಜೆಸಿಬಿ ಮಂಜುನಾಥರರೆಡ್ಡಿ, ಆಂಜನೇಯರೆಡ್ಡಿ, ಎ.ರಮೇಶ್, ಕಂಚುಕೋಟೆಮೂರ್ತಿ, ವೆಂಕಟೇಶ್‌ಬಾಬು, ಜಿ.ಕೃಷ್ಣಪ್ಪ, ರಾಂಬಾಬು, ಚಂದ್ರಶೇಖರರೆಡ್ಡಿ, ಟೈಲರ್ ನಾರಾಯಣಸ್ವಾಮಿ, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಮುಖಂಡರಾದ ಫಾತೀಮಾ ಭೀ, ಜೈನಾಭೀ ಮತ್ತಿತರರು ರಸ್ತೆ ತಡೆಯಲ್ಲಿ ಪಾಲ್ಗೊಂಡಿದ್ದರು.

`ಸಾಮಾನ್ಯರ ಬದುಕಿಗೆ ಬರೆ'
ಗೌರಿಬಿದನೂರು: ಪೆಟ್ರೋಲ್ ಬೆಲೆ ಏರಿಕೆ ಮಾಡಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹಾಗೂ ಸಾರಿಗೆ ಸಂಸ್ಥೆ ಬಸ್ ಪ್ರಯಾಣ ದರ ಹೆಚ್ಚಿಸಿರುವ ರಾಜ್ಯ ಸರ್ಕಾರದ ವಿರುದ್ಧ ಸಿಪಿಎಂ ಕಾರ್ಯಕರ್ತರು ಪಟ್ಟಣದ ನಾಗಯ್ಯರೆಡ್ಡಿ ವೃತ್ತದಲ್ಲಿ ಸೋಮವಾರ ರಸ್ತೆ ತಡೆ ನಡೆಸಿ, ಪ್ರತಿಭಟಿಸಿದರು.

ಸಿಪಿಎಂ ಮುಖಂಡ ಸಿದ್ದಗಂಗಪ್ಪ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ಸಾಮಾನ್ಯ ಜನರು ನೆಮ್ಮದಿ ಜೀವನ ನಡೆಸುವುದು ಕಷ್ಟವಾಗಿದೆ. ಕಾಂಗ್ರೆಸ್ ಬಗ್ಗೆ ಸಾಮಾನ್ಯ ಜನರು ಆಶಾಭಾವನೆ ಹೊಂದಿದ್ದರು. ಆದರೆ ಅಧಿಕಾರಕ್ಕೆ ಬಂದ ಒಂದೇ ತಿಂಗಳಿನಲ್ಲಿ ಶೇ 17ರಷ್ಟು ಬಸ್ ಪ್ರಯಾಣ ದರ ಏರಿಕೆ ಮಾಡುವ ಮೂಲಕ ಬಡವರ ಬದುಕಿನ ಮೇಲೆ ಬರೆ ಎಳೆದಿದೆ ಎಂದರು.

ಸಿಪಿಎಂ ತಾಲ್ಲೂಕು ಘಟಕದ ಕಾರ್ಯದರ್ಶಿ ಸಿ.ಸಿ.ಅಶ್ವತ್ಥಪ್ಪ, ಪ್ರಾಂತ ರೈತ ಸಂಘದ ಅಧ್ಯಕ್ಷ ರವಿಚಂದ್ರರೆಡ್ಡಿ, ಆನೂಡಿ ನಾಗರಾಜ್, ಅನ್ವರ್‌ಬಾಷಾ, ಗಂಗರತ್ನಮ್ಮ ಮತ್ತಿತರರು ಪಾಲ್ಗೊಂಡಿದ್ದರು.

ದರ ಏರಿಕೆಗೆ ಖಂಡನೆ
ಗುಡಿಬಂಡೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ, ಸೋಮವಾರ ತಾಲ್ಲೂಕು ಸಿಪಿಎಂ ಘಟಕದ ಕಾರ್ಯಕರ್ತರು ಮಿನಿವಿಧಾನಸೌಧ ಮುಂಭಾಗ ರಸ್ತೆತಡೆ ನಡೆಸಿದರು.

ಕೇಂದ್ರ ಸರ್ಕಾರ ಪ್ರಟೋಲ್ ದರ ಏರಿಸಿದರೆ, ರಾಜ್ಯ ಸರ್ಕಾರ ಬಸ್ ಪ್ರಯಾಣ ದರವನ್ನು ಹೆಚ್ಚಿಸಿದೆ. ಈಗಾಗಲೇ ಜನರು ಬರದಿಂದ ತತ್ತರಿಸುತ್ತಿದ್ದು, ಜತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ಜೀವನಕ್ಕೆ ಹೆಚ್ಚಿನ ಹೊರೆ ಬೀಳುತ್ತದೆ. ತಕ್ಷಣವೇ ಪೆಟ್ರೋಲ್ ಹಾಗೂ ಬಸ್ ದರ ಏರಿಕೆ ವಾಪಸ್ ಪಡೆಯಬೇಕು ಎಂದು ಸಿಪಿಎಂ ತಾಲ್ಲೂಕು ಘಟಕದ ಕಾರ್ಯದರ್ಶಿ ಬಿ.ಜಯರಾಮರೆಡ್ಡಿ ಒತ್ತಾಯಿಸಿದ್ದಾರೆ.

ರಸ್ತೆ ತಡೆಯಿಂದ ಸ್ವಲ್ಪಕಾಲ ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಯಿತು. ಸಿಪಿಎಂ ಮುಖಂಡರಾದ ಶಿವಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಮುನಿರೆಡ್ಡಿ ಮಾತನಾಡಿದರು.

ಸಿಪಿಎಂ ಮುಖಂಡರಾದ ಬಿ.ಜಯರಾಮರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಮುನಿರೆಡ್ಡಿ, ಶಿವಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ನಂಜರೆಡ್ಡಿ, ಕಡೇಹಳ್ಳಿ ರವಿಂದ್ರರೆಡ್ಡಿ, ರಹಮತ್ ಖಾನ್, ಚಲಪತಿ, ರಾಮಕೃಷ್ಣಹೆಗಡೆ, ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.