ADVERTISEMENT

ಪೆರೇಸಂದ್ರದಲ್ಲಿ `ನಮ್ಮ ಗ್ರಂಥಾಲಯ' ಆರಂಭ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2013, 6:43 IST
Last Updated 6 ಆಗಸ್ಟ್ 2013, 6:43 IST

ಚಿಕ್ಕಬಳ್ಳಾಪುರ: ಸಾಮಾನ್ಯ ಮಕ್ಕಳೊಂದಿಗೆ ಅಂಗವಿಕಲ ಮತ್ತು ಬುದ್ಧಿಮಾಂದ್ಯ ಮಕ್ಕಳಿಗೂ ವಿಭಿನ್ನ ಮಾದರಿಯಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದ ಆರಂಭಿಸಲಾಗಿರುವ `ನಮ್ಮ ಗ್ರಂಥಾಲಯ' ನೂತನ ಯೋಜನೆಯು ಎಲ್ಲರಿಗೂ ಉಪಯುಕ್ತವಾಗಲಿದೆ ಎಂದು ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ ತಿಳಿಸಿದರು.

ತಾಲ್ಲೂಕಿನ ಪೆರೇಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ), ರಾಬರ್ಟ್ ಬಾಷ್ ಸಂಸ್ಥೆ ಮತ್ತು ಅಕ್ಷರ ಪ್ರತಿಷ್ಠಾನ ಹಮ್ಮಿಕೊಂಡಿದ್ದ `ನಮ್ಮ ಗ್ರಂಥಾಲಯ'ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

1 ರಿಂದ 8ರ ತರಗತಿಯವರೆಗಿನ ಮಕ್ಕಳ ಬೌದ್ಧಿಕ ಮಟ್ಟಕ್ಕೆ ತಕ್ಕಂತೆ ಪುಸ್ತಕಗಳನ್ನು ನೀಡಲಾಗುತ್ತದೆ. ಮಕ್ಕಳ ಕಲಿಕಾ ಗ್ರಹಿಕೆ ಮತ್ತು ಚತುರತೆ ಆಧಾರದ ಮೇಲೆ ಪುಸ್ತಕಗಳು ಬಳಕೆಯಾಗುತ್ತವೆ. ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳು ಹಲವಾರು ವಿಷಯಗಳನ್ನು ಕಲಿಯುತ್ತಾರೆ ಎಂದು ತಿಳಿಸಿದರು.

ರಾಬರ್ಟ್ ಬಾಷ್ ಸಂಸ್ಥೆಯ ರಮೇಶ್ ಸಗೆರೆ ಮಾತನಾಡಿ, `ನಮ್ಮ ಗ್ರಂಥಾಲಯ'ದ ಮುಖ್ಯ ಉದ್ದೇಶ ಮಕ್ಕಳಲ್ಲಿ ಜ್ಞಾನ ವೃದ್ಧಿಸುವುದು ಮತ್ತು ಓದುವ ಹವ್ಯಾಸ ಹೆಚ್ಚಿಸುವುದು. ಅಂಗವಿಕಲ ಮಕ್ಕಳ ಅನುಕೂಲ ದೃಷ್ಟಿಯಲ್ಲಿರಿಸಿಕೊಂಡು ಗ್ರಂಥಾಲಯಗಳನ್ನು ತೆರೆದಿದ್ದೇವೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಐದು ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯ ಆರಂಭಿಸಲಾಗಿದೆ ಎಂದರು.

ರಾಬರ್ಟ್ ಬಾಷ್ ಸಂಸ್ಥೆಯ ಸಿಮಿ ಚೌಧರಿ, ಅಕ್ಷರ ಪ್ರತಿಷ್ಠಾನದ ರಮೇಶ್, ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ರಾಮಕೃಷ್ಣಪ್ಪ, ಎಪಿಡಿ ಸಂಸ್ಥೆಯ ಉಪನಿರ್ದೇಶಕಿ ಉಷಾರಾಣಿ, ಜಿಲ್ಲಾ ಯೋಜನಾ ಉಪ-ಸಮನ್ವಯಾಧಿಕಾರಿ ಚಂದ್ರಶೇಖರ್‌ಬಾಬು, ಎಪಿಡಿ ಸಂಸ್ಥೆಯ ಜಿಲ್ಲಾ ಸಂಯೋಜಕ ಮುನಿನಾರಾಯಣ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.