ADVERTISEMENT

ಪೊಲೀಸ್ ಠಾಣೆಗೆ ಮುತಾಲಿಕ್ ಭೇಟಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 7:30 IST
Last Updated 8 ಜೂನ್ 2011, 7:30 IST

ಚಿಂತಾಮಣಿ: ನಗರದ ಹೊರವಲಯ ದಲ್ಲಿ ಇತ್ತೀಚೆಗೆ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಶ್ರೀರಾಮಸೇನೆ ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ವಿನಯ್‌ಕುಮಾರ್ ಮೊಕದ್ದಮೆಯ ಬಗ್ಗೆ ಶೀಘ್ರ ತನಿಖೆ ನಡೆಸಿ ಸತ್ಯ ಬಹಿರಂಗ ಪಡಿಸಬೇಕೆಂದು ಶ್ರೀರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.

ನಗರ ಪೊಲೀಸ್ ಠಾಣೆಗೆ ಇತ್ತೀಚೆಗೆ ಭೇಟಿ ನೀಡಿ ಸಾವಿನ ಕುರಿತು ವಿವರ ಪಡೆದ ಅವರು, ಮೃತರ ಸಂಬಂಧಿಕರು ಸಾವಿನ ಬಗ್ಗೆ ಸಂಶಯಪಡುತ್ತಿದ್ದಾರೆ. ಕೋಲಾರ ರಸ್ತೆಯ ಕಲ್ಯಾಣ ಮಂಟಪಕ್ಕೆ ಮದುವೆಗಾಗಿ ಬಂದಿದ್ದವರು ಚೇಳೂರು ರಸ್ತೆಯಲ್ಲಿ ಹೇಗೆ ಮೃತಪಟ್ಟರು ಎಂಬ ಸಂಶಯ ಪ್ರತಿಯೊಬ್ಬರನ್ನು ಕಾಡುತ್ತದೆ ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ವೆಂಕಟೇಶ್ ಮತ್ತು ಸಬ್ ಇನ್ಸ್‌ಪೆಕ್ಟರ್ ಸತೀಶ್, ಪ್ರಕರಣದ ತನಿಖೆಗಾಗಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಶವದ ಮರಣೋತ್ತರ ಪರೀಕ್ಷೆಯ ವರದಿ ಬಂದಿಲ್ಲ. ತನಿಖೆಯನ್ನು ಚುರುಕು ಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಖಂಡನೆ: ಠಾಣೆಯ ಸಮೀಪ ಪತ್ರಕರ್ತ ರೊಂದಿಗೆ ಮಾತನಾಡಿದ ಮುತಾಲಿಕ್, ಭ್ರಷ್ಟಾಚಾರದ ವಿರುದ್ದ ಹೋರಾಡುತ್ತಿರುವ ಬಾಬಾ ರಾಮದೇವ್ ಬಂಧನವನ್ನು ಖಂಡಿಸಿದರು. ಕೇಂದ್ರ ಸರ್ಕಾರ ಮತ್ತು ಸೋನಿಯಾ ಗಾಂಧಿ ಶಾಮೀಲಾಗಿ ಬಂಧನದ ತೀರ್ಮಾನವನ್ನು ಕೈಗೊಂಡಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಟೀಕಿಸಿದರು.

ರಾಮ್‌ದೇವ್ ಸತ್ಯಾಗ್ರಹವನ್ನು ಟೀಕಿಸುತ್ತಿರುವ ದಿಗ್ವಿಜಯಸಿಂಗ್, ಕಪಿಲ್‌ಸಿಬಲ್, ಶಾರುಕ್ ಖಾನ್ ವಿರುದ್ದ ಮುತಾಲಿಕ್ ಕಿಡಿಕಾರಿದರು. ಬಾಬಾ ಯೋಗ ಗುರುವಾಗಿರಬೇಕೆ ಹೊರತು ಸತ್ಯಾಗ್ರಹ ಮಾಡಬಾರದು ಎನ್ನುತ್ತಿದ್ದಾರೆ. ಶಾರುಕ್ ಖಾನ್ ನಟನೆ ಮಾಡಬೇಕೆ ಹೊರತು ರಾಜಕೀಯ ಏಕೆ ಮಾಡುತ್ತಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.