ADVERTISEMENT

ಪ್ರತಿ ಮಗುವಿನ ಶಿಕ್ಷಣಕ್ಕೆ ಮೀನಾ ಪೂರಕ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2011, 9:15 IST
Last Updated 1 ಏಪ್ರಿಲ್ 2011, 9:15 IST

ಬಾಗೇಪಲ್ಲಿ: ಗ್ರಾಮೀಣ ಹೆಣ್ಣುಮಕ್ಕಳು ಶೈಕ್ಷಣಿಕ ರಂಗಕ್ಕೆ ಬರಲು ಎನ್‌ಪಿಇಜಿಎಲ್ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ‘ಮೀನಾ’ ಕಾರ್ಯಕ್ರಮದಿಂದ ಜಾಗೃತಿ ಮೂಡಿ ಪ್ರತಿ ಮಗು ಅಕ್ಷರ ಕಲಿಯಲು ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಕೃಷ್ಣಪ್ಪ ತಿಳಿಸಿದರು.ಪಟ್ಟಣದ ಬಾಲಕಿಯರ ಪ್ರೌಢಶಾಲೆಯಲ್ಲಿ ಗುರುವಾರ ಸಾರ್ವಜನಿಕ   ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಎನ್‌ಪಿಇಜಿಎಲ್ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕುಮಟ್ಟದ ಉತ್ತಮ ಮೀನಾ ತಂಡಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳನ್ನು ಮುಖ್ಯವಾಹಿನಿಗೆ ತರಲು ಮೀನಾ ಕಾರ್ಯಕ್ರಮ ಸಹಕಾರಿಯಾಗಿದೆ.
 

ವಿಶ್ವ ಸಂಸ್ಥೆಯ ಎನ್‌ಪಿಇಜಿಎಲ್ ಕಾರ್ಯಯೋಜನೆಯ ಮೀನಾ ಕಾರ್ಯಕ್ರಮದ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಮೀನಾ ಕಾರ್ಯಕ್ರಮವನ್ನು ಬ್ಲಾಕ್ ಹಾಗೂ ಕ್ಲಸ್ಟರ್ ಹಂತದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಬಿಆರ್‌ಪಿ, ಸಿಆರ್‌ಪಿ ಮುಖ್ಯಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ತಾಲ್ಲೂಕಿನಲ್ಲಿರುವ 16 ಕ್ಲಸ್ಟರ್ ಕೇಂದ್ರಗಳಲ್ಲಿ ಮೀನಾ ಕಾರ್ಯಕ್ರಮಗಳು ಯಶಸ್ವಿಯಾಗಿವೆ.ಬಾಲ್ಯವಿವಾಹ, ಮೂಢನಂಬಿಕೆಗಳನ್ನು ಹೊರದೂಡಲು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಕ್ಲಸ್ಟರ್ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಆರ್‌ಸಿ ಸಮನ್ವಯಾಧಿಕಾರಿ ಎನ್.ವೆಂಕಟೇಶಪ್ಪ ತಿಳಿಸಿದರು.
 

ವಿವಿಧ ಕ್ಲಸ್ಟರ್‌ಮಟ್ಟದ ಮೀನಾ ಸಂಚಾಲಕಿ, ಸಂಚಾಲಕ ಹಾಗೂ ವಿದ್ಯಾರ್ಥಿನಿಯರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಕೃಷ್ಣಪ್ಪ ಬಹುಮಾನ ವಿತರಿಸಿದರು.ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎ.ವೆಂಕಟೇಶ್ವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ನಾಗರಾಜು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಭಾವತಮ್ಮ, ಬಿಆರ್‌ಪಿಗಳಾದ ಮನೋಹರ್, ಅಮೀರ್, ಮಂಜುನಾಥ್, ಶ್ರೀನಿವಾಸ್, ಮುಖ್ಯಶಿಕ್ಷಕ ಮಂಜುನಾಥ್, ಎನ್‌ಪಿಇಜಿಎಲ್ ತಾಲ್ಲೂಕು ಸಂಯೋಜಕಿ ಶ್ರೀದೇವಿ  ಮತ್ತುಸಿಆರ್‌ಸಿಗಳು  ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.